

ಜಗಳೂರು: ತಾಲೂಕಿನಲ್ಲಿ ಸೀಡ್ಸ್ ಕಂಪನಿ ಆರಂಭಿಸಲಾಗುವುದು ಹಾಗೂ ನಿರುದ್ಯೋಗಿ ಮಹಿಳೆಯರಿಗೆ ಉದ್ಯೋಗವಕಾಶ ನೀಡಲಾಗುವುದು ಎಂದು ಜಿಲ್ಲಾ ಯೋಜನಾ ನಿರ್ದೇಶಕಿ ರೇಷ್ಮಾ ಕೌಸರ್ ಭರವಸೆ ನೀಡಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ಮಹಿಳಾ ಸ್ವಸಹಾಯ ಸಂಘಗಳಿಗೆ ನಲ್ಮ್ ಯೋಜನೆಯಡಿ ಹಮ್ಮಿಕೊಂಡಿದ್ದ ಸಾಲಮೇಳ ಉದ್ಘಾಟಿಸಿ ಮಾತನಾಡಿದರು.
ತಾಲೂಕು ಕೇಂದ್ರಗಳಲ್ಲಿ ಸಾಲಮೇಳ ಆಯೋಜನೆ ಮಾಡುವುದರಿಂದ ಬ್ಯಾಂಕಿನವರೇ ಬರುತ್ತಾರೆ. ಇದರಿಂದ ಗ್ರಾಹಕರ ಸಮಸ್ಯೆ ಕಡಿಮೆಯಾಗುತ್ತದೆ. ಇಲ್ಲಿಯವರೆಗೂ ಸಾಲ ಸೌಲಭ್ಯಕ್ಕಾಗಿ 107 ಅರ್ಜಿಗಳು ಬಂದಿವೆ. 13 ಸಂಘಗಳಿಗೆ ಮಂಜೂರಾತಿ ಪತ್ರ ನೀಡಲಾಗಿದೆ. 10 ಲಕ್ಷ ರೂ.ವರೆಗೂ ಸಾಲ ನೀಡಲಾಗುತ್ತದೆ. ಸ್ವಯಂ ಉದ್ಯೋಗದ ಮೂಲಕ ಸಾಲ ಮರುಪಾವತಿ ಮಾಡಬೇಕು ಎಂದರು.
ಹೈನುಗಾರಿಕೆ, ಕೃಷಿ ವ್ಯವಹಾರ ನಡೆಸಲು ಬ್ಯಾಂಕ್ಗಳಿಂದ ಶೇ.7 ಬಡ್ಡಿ ಇರುತ್ತದೆ. ಸಂಜೀವಿನಿ ಯೋಜನೆಯಲ್ಲಿ ಆರೋಗ್ಯ ಇಲಾಖೆಯಿಂದ ತಾಯಿ ಕಾರ್ಡ್ ನೀಡಲಾಗುತ್ತಿದೆ. ಹಾರ್ಡ್ವೇರ್ ಶಾಪ್ಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ನಲ್ಮ್ ಯೋಜನೆಯ ಸಂಯೋಜಕ ಭೋಜರಾಜು ಮಾತನಾಡಿ, 2011 ರಲ್ಲಿ ಯೋಜನೆ ಆರಂಭವಾಗಿದ್ದು, ಒಟ್ಟು 1350 ಸ್ವಸಹಾಯ ಸಂಘಗಳಿದ್ದು, 11 ಸಾವಿರ ಸದಸ್ಯರಿದ್ದಾರೆ. 18 ಕೋಟಿ ರೂ. ಆರ್ಥಿಕ ಚಟುವಟಿಕೆ ನಡೆಸಲಾಗಿದೆ ಎಂದರು.
ತಾ.ಪಂ ಇಒ ಕೆಂಚಪ್ಪ, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎಸ್.ಎಸ್. ಆಚಾರ್ಯ, ತಾ.ಕಾ.ವ್ಯ. ಧರ್ಮಣ್ಣ, ತೋಳಹುಣಸೆ ಗಿರೀಶಯ್ಯ, ಡಾ.ಶಾಂತಕುಮಾರಿ, ವಲಯ ಮೇಲ್ವಿಚಾರಕ ಲಕ್ಷ್ಮೀಪತಿ ಗೌಡ, ಜಯರಾಜ್, ಜಯಣ್ಣ ಮತ್ತಿತರರಿದ್ದರು.
ಜಿಲ್ಲಾ ಪಂಚಾಯಿತಿ, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್, ತಾಲೂಕು ಪಂಚಾಯಿತಿ, ಸಂಜೀವಿನಿ ತಾಲೂಕು ಅಭಿಯಾನ ನಿರ್ವಹಣಾ ಘಟಕ ಇವರ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.