ಕಾಯ್ದೆ ಪಾಲಿಸದವರಿಗೆ ವಿನೂತನ ಶಿಕ್ಷೆ

Umadi 24-1
Published on

ಉಮದಿ: ನಾನು ನಾಲಾಯಕ್, ಸಮಾಜದ ದುಶ್ಮನ್, ದೇಶದ್ರೋಹಿ ಎಂಬ ಬರಹವುಳ್ಳ ಫಲಕಗಳನ್ನು ಕೈಯಲ್ಲಿ ಹಿಡಿದ ಯುವಕರ ಫೋಟೋಗಳು ಉಮದಿ ಪಟ್ಟಣದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಸಾಂಗಲಿ ಜಿಲ್ಲಾಡಳಿತ ಜಿಲ್ಲಾದ್ಯಂತ 144 ಕಲಂ ಜಾರಿಗೊಳಿಸಿ ಆದೇಶ ಹೊರಡಿಸಿದರೂ ಕೆಲ ಯುವಕರು ಅದರ ಪರಿವಿಲ್ಲದೆ ಪಟ್ಟಣದಲ್ಲಿ ತಿರುಗಾಡುತ್ತಿದ್ದರು. ಅದಕ್ಕೆ ಬೇಸತ್ತ ಪೊಲೀಸರು ರಸ್ತೆಗಳಲ್ಲಿ ಯುವಕರು ಕಂಡರೆ ಅವರ ಕೈಯಲ್ಲಿ ಇಂಥ ಫಲಕಗಳನ್ನು ಕೊಟ್ಟು ಫೋಟೋ ಕ್ಲಿಕ್ಕಿಸಿ, ಆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ.
ಪಟ್ಟಣದಲ್ಲಿ 144 ಕಲಂ ಜಾರಿಗೊಳಿಸಲಾಗಿದೆ. ಯಾರೂ ಅನಾವಶ್ಯಕವಾಗಿ ಮನೆಯಿಂದ ಹೊರಬರಬೇಡಿ ಎಂದು ಧ್ವನಿವರ್ಧಕಗಳ ಮೂಲಕ ತಿಳಿಹೇಳಿದರೂ ಕೆಲ ಯುವಕರು ಸಹಕಾರ ನೀಡದ್ದಕ್ಕೆ ಪೊಲೀಸರು ಕಂಡುಕೊಂಡ ಮಾರ್ಗವಿದು. ಇದಕ್ಕೂ ಜಗ್ಗದಿದ್ದರೆ ಕಾನೂನು ರೀತಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಅಧಿಕಾರಿ ದತ್ತಾತ್ರಯ ಕೋಳೆಕರ ತಿಳಿಸಿದ್ದಾರೆ.

ಜತ್ತ ತಾಲೂಕಿನಲ್ಲಿ 13ಜನ ಗೃಹಬಂಧನದಲ್ಲಿದ್ದಾರೆ. ಜತ್ತ ತಾಲೂಕಿನ ಕೆಲ ವೈದ್ಯರು ಹಾಗೂ ನಾಗರಿಕರು ವಿದೇಶ ಪ್ರವಾಸ ಮುಗಿಸಿ ಜತ್ತ ನಗರಕ್ಕೆ ಬರುತ್ತಿದ್ದಂತೆ ಅವರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ತಾಲೂಕಾಡಳಿತ ತಿಳಿಸಿದೆ. ತಾಲೂಕಿನ ಮಾಡಗ್ಯಾಳ ಗ್ರಾಮದ ವೈದ್ಯ ದಂಪತಿ ವಿದೇಶದಿಂದ ಬಂದಿರುವ ಕಾರಣ ಅವರ ಕೈಮೇಲೆ ಹೋಂ ಕ್ವಾರಂಟೈನ್ ಮುದ್ರೆ ಹಾಕಲಾಗಿದೆ. ಯಾರ ಸಂಪರ್ಕ ಮಾಡದಂತೆ ಸೂಚಿಸಿದರೂ ಆ ವೈದ್ಯರು ಒಪಿಡಿ ತೆರೆದು ರೋಗಿಗಳಿಗೆ ಚಿಕಿತ್ಸೆ ನೀಡಲು ಮುಂದಾಗಿರುವ ಬಗ್ಗೆ ಮಾಹಿತಿ ದೊರೆಯುತ್ತಿದ್ದಂತೆ ಪೊಲೀಸ್ ಹಾಗೂ ಆರೋಗ್ಯಾಧಿಕಾರಿ ವೈದ್ಯ ದಂಪತಿಯನ್ನು ವಶಕ್ಕೆ ಪಡೆದು, ಆಸ್ಪತ್ರೆ ಜಪ್ತಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net