ಮಾಂಸ ಮಾರಾಟ ನಿಷೇಧ, ಮಾಂಸಾಹಾರಿ ಹೋಟೆಲ್​ಗಳೂ ಬಂದ್; ಈಗ ಕ್ರೇನ್​ ಕಾರ್ಯಕ್ಕೂ ನಿರ್ಬಂಧ: ಎಲ್ಲಿ, ಏಕೆ, ಯಾವಾಗ?

Crane
Published on

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೆಲವು ದಿನಗಳ ಹಿಂದೆ ಮೂರು ವಾರಗಳ ಕಾಲ ಮಾಂಸ ಮಾರಾಟ ನಿಷೇಧ, ಮಾಂಸಾಹಾರಿ ಹೋಟೆಲ್​ಗಳ ಬಂದ್​ಗೆ ಆದೇಶ ನೀಡಿದ್ದ ಬೆನ್ನಿಗೇ ಇದೀಗ ಇನ್ನೊಂದು ಆದೇಶವನ್ನು ಹೊರಡಿಸಿದೆ. ಕ್ರೇನ್ ಕಾರ್ಯಕ್ಕೂ ನಿಷೇಧವನ್ನು ಹೇರಿದ್ದಾಗಿ ಈ ಆದೇಶದಲ್ಲಿ ತಿಳಿಸಲಾಗಿದೆ.

ಯಲಹಂಕದ ವಾಯುಸೇನಾ ನೆಲೆಯಲ್ಲಿ ಫೆ.13ರಿಂದ ಫೆ.17ರವರೆಗೆ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ‘ಏರ್ ಶೋ-2023’ ಹಿನ್ನೆಲೆಯಲ್ಲಿ ಈ ನಿಷೇಧವನ್ನು ಹೇರಲಾಗಿದೆ. ವಾಯುಸೇನಾ ನೆಲೆಯಿಂದ 5 ಕಿ.ಮೀ. ಸುತ್ತಮುತ್ತ ಬೃಹತ್ ಕಟ್ಟಡಗಳಲ್ಲಿ ಉಪಯೋಗಿಸುವ ಕ್ರೇನ್ ಚಟುವಟಿಕೆಯನ್ನು ಸ್ಥಗಿತಗೊಳಿಸುವಂತೆ ಬಿಬಿಎಂಪಿ ಆದೇಶ ಹೊರಡಿಸಿದೆ.

ವಾಯುಸೇನಾ ನೆಲೆಯ ಸುತ್ತಮುತ್ತ ನಿರ್ಮಾಣ ಹಂತದಲ್ಲಿರುವ ಬೃಹತ್ ಕಟ್ಟಡಗಳಿಗೆ ಬಳಸುವ ಕ್ರೇನ್‌ಗಳ ಎತ್ತರವನ್ನು ತಗ್ಗಿಸಬೇಕು ಮತ್ತು ಕಾರ್ಯ ಚಟುವಟಿಕೆಯನ್ನು ಫೆ.9ರಿಂದ ಫೆ.17ರವರೆಗೆ ನಿಲ್ಲಿಸಬೇಕೆಂದು ಬಹಮಹಡಿ ಕಟ್ಟಡಗಳ ಮಾಲೀಕರಿಗೆ ಮತ್ತು ಸಂಸ್ಥೆಗಳಿಗೆ ಪಾಲಿಕೆ ಸೂಚಿಸಿದೆ. ಒಂದು ವೇಳೆ ಉಲ್ಲಂಘಿಸಿದರೆ ಅಂಥವರ ವಿರುದ್ಧ ಭಾರತೀಯ ಏರ್‌ಕ್ರಾಪ್ಟ್ ನಿಯಮಗಳು ಹಾಗೂ ಬಿಬಿಎಂಪಿ ಕಾಯ್ದೆ ಪ್ರಕಾರ ಕಠಿಣ ಕ್ರಮ ಕೈಗೊಳ್ಳುವುದಾಗಿ ಬಿಬಿಎಂಪಿ ಎಚ್ಚರಿಕೆ ಕೊಟ್ಟಿದೆ.

ಯಲಹಂಕ ವಲಯದ ವ್ಯಾಪ್ತಿಯಲ್ಲಿ ಅಂದರೆ ವೈಮಾನಿಕ ನೆಲೆಯ ಸುತ್ತಲಿನ 10 ಕಿ.ಮೀ. ಪ್ರದೇಶದಲ್ಲಿ ಜ. 30ರಿಂದ ಫೆ. 20ರ ವರೆಗೂ ಯಾರೂ ಕುರಿ, ಕೋಳಿ, ಮೀನು ಸೇರಿದಂತೆ ಮಾಂಸ ಮಾರಾಟ ಮಾಡುವಂತಿಲ್ಲ. ಅಲ್ಲದೆ ಈ ವ್ಯಾಪ್ತಿಯಲ್ಲಿನ ಮಾಂಸದಂಗಡಿಗಳು ಮಾತ್ರವಲ್ಲದೆ, ಮಾಂಸಾಹಾರದ ಹೋಟೆಲ್​ಗಳೂ ಮುಚ್ಚಿರಬೇಕು ಎಂದು ಬಿಬಿಎಂಪಿ ಈಗಾಗಲೇ ಆದೇಶ ಹೊರಡಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net