

ರಾಮನಗರ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಮತದಾನ ನ,13ರಂದು ನಡೆಯಲಿದ್ದು, ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿ, ನಿಷ್ಪಕ್ಷಪಾತವಾಗಿ ಚುನಾವಣೆಯನ್ನು ನಡೆಸುವ ಸಲುವಾಗಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನ.12ರ ಮಂಗಳವಾರ ಸಂಜೆ 6 ಗಂಟೆಯಿಂದ ನ.14ರ ಗುರುವಾರ ಬೆಳಿಗ್ಗೆ 6 ಗಂಟೆಯ ವರೆಗೆ ವಿವಿಧ ಷರತ್ತುಗಳನ್ನು ವಿಧಿಸಿ, ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ.
ನಿಷೇಧಿತ ಅವಧಿಯಲ್ಲಿ ಯಾವುದೇ ಬಹಿರಂಗ, ಸಾರ್ವಜನಿಕ ಸಭೆ, ಸಮಾರಂಭ, ಜಾಥಾ, ಮೆರವಣಿಗೆ ಇತ್ಯಾದಿಗಳನ್ನು ನಡೆಸುವುದನ್ನು ರ್ನಿಬಂಧಿಸಲಾಗಿದೆ. ಈ ಅವಧಿಯಲ್ಲಿ 5 ಕ್ಕಿಂತ ಹೆಚ್ಚು ಜನರ ಗುಂಪುಗೂಡಿ ಓಡಾಡುವುದನ್ನು ನಿಷೇಧಿಸಿದೆ. ಮತದಾನ ಮುಕ್ತಾಯದ ಮುಂಚಿನ 48 ಗಂಟೆಗಳ ಅವಧಿಯಲ್ಲಿ ಯಾವುದೇ ಬಹಿರಂಗ ಪ್ರಚಾರ ಸಭೆ, ಸಮಾರಂಭ ಮತ್ತು ಮೆರವಣಿಗೆ ನಡೆಸುವುದನ್ನು ನಿಷೇಧಿಸಲಾಗಿರುತ್ತದೆ. ಅಭ್ಯರ್ಥಿಗಳ ಬೆಂಬಲಿಗರು ಚುನಾವಣಾ ಪ್ರಚಾರಕ್ಕಾಗಿ ಮನೆಮನೆಗೆ ಮತಗಳನ್ನು ಯಾಚಿಸಲು ಐದು ಜನಕ್ಕಿಂತ ಹೆಚ್ಚಿನ ಜನ ಸೇರುವಂತಿಲ್ಲ.
ನಿಷೇಧಾಜ್ಞೆ ಅವಧಿಯಲ್ಲಿ ಯಾವುದೇ ಸ್ಫೋಟಕ ವಸ್ತುಗಳು ಮತ್ತು ಮಾರಕಾಸ್ತ್ರಗಳನ್ನು ಕೊಂಡೊಯ್ಯುವುದಾಗಲಿ ಅಥವಾ ಮಾರಕಾಸ್ತ್ರಗಳನ್ನು ಹಿಡಿದು ಓಡಾಡುವಂತಿಲ್ಲ. ಯಾವುದೇ ರೀತಿಯ ಪ್ರಚಾರಗಳನ್ನು ಅಂದರೆ ಭಿತ್ತಿ ಪತ್ರ ಹಂಚುವ ಮೂಲಕ ವಾಹನದಲ್ಲಿ ಪ್ರಚಾರ ಮಾಡುವಂತಹ, ಘೋಷಣೆ ಕೂಗುವಂತಹ ಭಾಷಣ ಮಾಡುವಂತಹ ಚಟುವಟಿಕೆಗಳನ್ನು ನಿಷೇಧಿಸಿದೆ. ಈ ನಿಷೇಧಾಜ್ಞೆಯು ಮದುವೆ, ಮುಂಜಿ, ಶವಸಂಸ್ಕಾರ ಕಾರ್ಯಗಳಿಗೆ ಅನ್ವಯವಾಗುವುದಿಲ್ಲ. ಆದರೆ ಈ ಕಾರ್ಯಕ್ರಮದಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಕಾರ್ಯಗಳನ್ನು ನಡೆಸುವಂತಿಲ್ಲ.
ಯಾವುದೇ ರೀತಿಯ ಮತೀಯ ಭಾವನೆಗಳನ್ನು ಕೆರೆಳಿಸುವಂತಹ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವುದು, ಘೋಷಣೆ ಕೂಗುವುದು ಹಾಗೂ ಭಿತ್ತಿ ಪತ್ರಗಳನ್ನು ಪ್ರಕಟಿಸುವುದು ಮಾಡುವಂತಿಲ್ಲ.
ಶಾಂತಿ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಭಂಗವುಂಟು ಮಾಡುವ ಸುಳ್ಳು ವದಂತಿಗಳನ್ನು ಹಬ್ಬಿಸಬಾರದು. ಸಾರ್ವಜನಿಕ ಪ್ರಾಣ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಉಂಟಾಗುವ ರೀತಿಯಲ್ಲಿ ವರ್ತಿಸುವಂತಿಲ್ಲ. ನಿಷೇಧಾಜ್ಞೆ ಅವಧಿಯಲ್ಲಿ ಯಾವುದೇ ಸಭೆ ಸಮಾರಂಭ ಮತ್ತು ಮೆರವಣಿಗೆ ಮಾಡುವಂತಿಲ್ಲ ಹಾಗೂ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ. ಈ ನಿಬಂಧನೆಗಳನ್ನು ಉಲ್ಲಂಘಿಸಿದವರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಯಶವಂತ್ ವಿ. ಗುರುಕರ್ ಅವರು ಆದೇಶ ಹೊರಡಿಸಿದ್ದಾರೆ.
ಉಪಚುನಾವಣೆ ಮತದಾನ ಹಿನ್ನೆಲೆಯಲ್ಲಿ ನ.11ರ ಸೋಮವಾರ ಸಂಜೆ 6 ಗಂಟೆಯಿಂದ ನ. 14ರ ಗುರುವಾರ ಬೆಳಿಗ್ಗೆ 6 ಗಂಟೆಯವರೆಗೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಾದ್ಯಂತ ಎಲ್ಲಾ ರೀತಿಯ ಮದ್ಯದ ಸನ್ನದುಗಳನ್ನು ಮುಚ್ಚಲು ಮತ್ತು ಮದ್ಯ ಮಾರಾಟ, ಹಂಚಿಕೆ, ಸಾಗಾಣಿಕೆಯನ್ನು ನಿಷೇಧಿಸಿ ಶುಷ್ಕ ದಿನ ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.