ಗ್ರಾಪಂ ಚುನಾವಣೆಗೆ ನಿಷೇಧಾಜ್ಞೆ ಜಾರಿ : 2 ಹಂತದಲ್ಲಿ ಎಲೆಕ್ಷನ್ ನಡೆಸಲು ಜಿಲ್ಲಾಡಳಿತ ತಯಾರಿ ; ಕಾನೂನು ಸುವ್ಯವಸ್ಥೆ ಕಾಪಾಡಲು ಕ್ರಮ

19 c n halli Police photo
Published on

ತುಮಕೂರು : ಜಿಲ್ಲೆಯಲ್ಲಿ ಎರಡು ಹಂತಗಳಲ್ಲಿ ನಡೆಯಲಿರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಚುನಾವಣೆ ದಿನಾಂಕದಂದು ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ

ಡಾ.ಕೆ.ರಾಕೇಶ್ ಕುಮಾರ್ ಆದೇಶಿಸಿದ್ದಾರೆ.

ಮೊದಲ ಹಂತದ ಚುನಾವಣೆ ನಡೆಯುವ ತಾಲೂಕುಗಳಲ್ಲಿ ಡಿ.21ರ ಬೆಳಗ್ಗೆ 6ರಿಂದ ಡಿ.22ರ ರಾತ್ರಿ 8ರವರೆಗೆ ಹಾಗೂ ಎರಡನೇ ಹಂತದ ಚುನಾವಣೆ ಹಿನ್ನೆಲೆಯಲ್ಲಿ ಡಿ.26ರ ಬೆಳಗ್ಗೆ 6ರಿಂದ ಡಿ.27ರ ರಾತ್ರಿ 8ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ನಿಷೇಧಾಜ್ಞೆ ಅವಧಿಯಲ್ಲಿ 5 ಜನರ ಮೇಲ್ಪಟ್ಟು ಗುಂಪು ಸೇರುವಂತಿಲ್ಲ, ಕಾನೂನು ಬಾಹಿರ ಚಟುವಟಿಕೆ ನಡೆಸುವಂತಿಲ್ಲ. ಮೆರವಣಿಗೆ, ಪಟಾಕಿ ಸಿಡಿಸುವಂತಿಲ್ಲ. ಯಾವುದೇ ರೀತಿಯ ಮತೀಯ ಭಾವನೆ ಕೆರಳಿಸುವಂತಹ ಪ್ರಚೋದನಕಾರಿ ಹೇಳಿಕೆ ನೀಡುವುದು, ಘೋಷಣೆ ಕೂಗುವುದು, ಭಿತ್ತಿ ಪತ್ರಗಳನ್ನು ಪ್ರಕಟಿಸುವುದು ಮಾಡುವಂತಿಲ್ಲ.

ಶಾಂತಿ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಭಂಗವನ್ನುಂಟುಮಾಡುವ ವದಂತಿ ಹಬ್ಬಿಸುವಂತಿಲ್ಲ, ಸಾರ್ವಜನಿಕ ಪ್ರಾಣ ಹಾಗೂ ಆಸ್ತಿಪಾಸ್ತಿಗಳಿಗೆ ಹಾನಿಯುಂಟಾಗುವ ರೀತಿಯಲ್ಲಿ ವರ್ತಿಸಿದರೆ ಬಂಧಿಸಲಾಗುತ್ತದೆ. ಶವಸಂಸ್ಕಾರ, ವಿವಾಹ ಮತ್ತು ಧಾರ್ಮಿಕ ಕಾರ್ಯ ಹೊರತುಪಡಿಸಿ ಯಾವುದೇ ಸಭೆ-ಸಮಾರಂಭ, ಮೆರವಣಿಗೆ ಮಾಡುವಂತಿಲ್ಲ, ನಿಷೇಧಾಜ್ಞೆ ಉಲ್ಲಂಘಿಸಿದ ವ್ಯಕ್ತಿಗಳನ್ನು ಕೂಡಲೇ ಬಂಧಿಸಲು ಅಗತ್ಯ ಕಾನೂನು ಕ್ರಮ ಜರುಗಿಸಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ. ನಿಷೇಧಾದೇಶ ಮತದಾನ ನಡೆಯಲಿರುವ ದಿನಾಂಕಗಳಲ್ಲಿ ಬೆಳಗ್ಗೆ 7ರಿಂದ ಸಂಜೆ 6ರ ವರೆಗೆ ಮತದಾನ ಕೇಂದ್ರ ಸ್ಥಳಕ್ಕೆ ಅನ್ವಯಿಸುವುದಿಲ್ಲ ಎಂದು ಡಿಸಿ ತಿಳಿಸಿದ್ದಾರೆ.

ಹರಾಜು ಮಾಡಿದ 6 ಜನ ಗಡಿಪಾರು: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಮಿಷವೊಡ್ಡಿ ಸ್ಥಳೀಯ ದೇವಸ್ಥಾನಗಳ ಜೀರ್ಣೋದ್ಧಾರದ ಹೆಸರಿನಲ್ಲಿ ಸದಸ್ಯ ಸ್ಥಾನಗಳು ಹಣವಂತರಿಗೆ ಸಿಗುವಂತೆ ಹರಾಜು ಮೂಲಕ ಅವಿರೋಧ ಆಯ್ಕೆಯಲ್ಲಿ ಭಾಗಿಯಾಗಿದ್ದ ಬಗ್ಗೆ ಗುಬ್ಬಿ, ಕುಣಿಗಲ್, ಚಿಕ್ಕನಾಯಕನಹಳ್ಳಿ ಮತ್ತು ತುರುವೇಕೆರೆ ಮತ್ತು ಹುಳಿಯಾರು, ನೊಣವಿನಕೆರೆ, ಚೇಳೂರು ಠಾಣೆಯಲ್ಲಿ ಒಟ್ಟು 11 ಪ್ರಕರಣ ದಾಖಲಾಗಿದೆ. ಅಲ್ಲದೇ ಚುನಾವಣಾ ಅಕ್ರಮದಲ್ಲಿ ಭಾಗಿಯಾಗಿರುವ 6 ಜನರನ್ನು ಗಡಿಪಾರು ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಜಿಲ್ಲಾ ಪೊಲೀಸ್ ಕಚೇರಿ ಪ್ರಕಟಣೆ ತಿಳಿಸಿದೆ.

8781 ನಾಮಪತ್ರ ಕ್ರಮಬದ್ಧ: ತಿಪಟೂರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ, ಶಿರಾ ಹಾಗೂ ಮಧುಗಿರಿ ತಾಲೂಕಿನ 161ಗ್ರಾಪಂಗಳಿಗೆ ಡಿ. 27ರಂದು ಎರಡನೇ ಹಂತದ ಚುನಾವಣೆ ನಡೆಯಲಿದೆ. ಚುನಾವಣೆ ನಡೆಯಬೇಕಾಗಿರುವ 2543 ಸದಸ್ಯ ಸ್ಥಾನಗಳಲ್ಲಿ 30 ಸ್ಥಾನಗಳಿಗೆ ನಾಮಪತ್ರ ಸಲ್ಲಿಸದೆ ಖಾಲಿ ಉಳಿದಿವೆ. ಉಳಿದಂತೆ 9179 ನಾಮಪತ್ರಗಳು ಸ್ವೀಕೃತವಾಗಿದೆ. ಇದರಲ್ಲಿ 146 ನಾಮಪತ್ರಗಳು ತಿರಸ್ಕೃತವಾಗಿದ್ದು, 8781 ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ತಿಳಿಸಿದ್ದಾರೆ.

ಸಂತೆ ಮುಂದೂಡಿಕೆ: ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಚುನಾವಣೆ ನಡೆಯಲಿರುವ ಗ್ರಾಪಂ ವ್ಯಾಪ್ತಿಯಲ್ಲಿ ಸಂತೆ ಮತ್ತು ಜಾತ್ರೆ ಮುಂದೂಡಬೇಕು ಎಂದು ಡಿಸಿ ಡಾ.ಕೆ.ರಾಕೇಶ್ ಕುಮಾರ್ ಆದೇಶಿಸಿದ್ದಾರೆ. ಆದೇಶದನ್ವಯ ಮೊದಲ ಹಂತದ ಚುನಾವಣೆ ನಡೆಯಲಿರುವ ತುಮಕೂರು, ಗುಬ್ಬಿ, ಕುಣಿಗಲ್, ಪಾವಗಡ, ಕೊರಟಗೆರೆ ತಾಲೂಕಿನ ಗ್ರಾಪಂ ವ್ಯಾಪ್ತಿಯಲ್ಲಿ ಡಿ.21ರ ಬೆಳಗ್ಗೆ 6ರಿಂದ ಡಿ.22ರ ರಾತ್ರಿ 8ರ ವರೆಗೆ ಹಾಗೂ ಎರಡನೇ ಹಂತದ ಚುನಾವಣೆ ನಡೆಯಲಿರುವ ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ, ಶಿರಾ, ಮಧುಗಿರಿ ತಾಲೂಕಿನ ಗ್ರಾಪಂ ವ್ಯಾಪ್ತಿಯಲ್ಲಿ ಡಿ.26ರ ಬೆಳಗ್ಗೆ 6ರಿಂದ ಡಿ.27ರ ರಾತ್ರಿ 8ರ ವರೆಗೆ ಯಾವುದೇ ಸಂತೆ ಮತ್ತು ಜಾತ್ರೆಗಳನ್ನು ನಡೆಸುವಂತಿಲ್ಲ ಎಂದು ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net