

ಬಂಟ್ವಾಳ: ಯಕ್ಷಗಾನದ ವೇಷಭೂಷಣ ತೊಟ್ಟು ಭಿಕ್ಷಾಟನೆಗೈದು ಯಕ್ಷಗಾನ ಕಲೆಗೆ ಅಪಚಾರವೆಸಗಲಾಗುತ್ತಿದ್ದು, ಈ ದಂಧೆಯನ್ನು ನಿಷೇಧಿಸುವಂತೆ ಆಗ್ರಹಿಸಿ ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ ನೇತೃತ್ವದ ನಿಯೋಗ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿಸಿದೆ.
ಯಕ್ಷಗಾನ ಘನತೆ, ಗಾಂಭೀರ್ಯ ಇರುವ ಕರಾವಳಿ ಜಿಲ್ಲೆಯ ಶ್ರೇಷ್ಠ ಕಲೆ ಇದು. ಜನ್ಮಾಷ್ಟಮಿ, ಗಣೇಶೋತ್ಸವ ಹಾಗೂ ನವರಾತ್ರಿ ಸಂದರ್ಭ ಯಕ್ಷಗಾನ ವೇಷಭೂಷಣ ಧಾರಣೆ ಮಾಡಿ ಹಗಲಿಡೀ ಭಿಕ್ಷಾಟನೆ ಮಾಡಿ ಅಪಚಾರವಾಗುವ ರೀತಿಯಲ್ಲಿ ವರ್ತಿಸಲಾಗುತ್ತಿದೆ ಎಂದು ಮನವಿಯಲ್ಲಿ ದೂರಲಾಗಿದೆ.
ಇದು ಯಕ್ಷಗಾನದಲ್ಲಿ ಅನೇಕ ವರ್ಷದಿಂದ ದುಡಿಯುವ ಹಿರಿಯ ಮತ್ತು ಕಿರಿಯ ಯಕ್ಷಗಾನ ಕಲಾವಿದರಿಗೆ ಮನಸ್ಸಿಗೆ ನೋವು ಮತ್ತು ಬೇಸರ ತರಿಸಿದೆ. ಮುಂದಿನ ದಿನಗಳಲ್ಲಿ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಯಕ್ಷಗಾನದ ವೇಷಭೂಷಣ ತೊಟ್ಟು, ಮುಖಕ್ಕೆ ಬಣ್ಣಬಳಿದು, ಕಾಲಿಗೆ ಗೆಜ್ಜೆಕಟ್ಟಿ ಬೀದಿ-ಬೀದಿ ಅಲೆದು ಭಿಕ್ಷಾಟನೆ ಮಾಡುವುದನ್ನು ನಿಷೇಧಿಸುವಂತೆ ನಿಯೋಗ ಒತ್ತಾಯಿಸಿದೆ.
ನಿಯೋಗದಲ್ಲಿ ಯಕ್ಷಗಾನ ಚಿಕ್ಕ ಮೇಳಗಳ ಒಕ್ಕೂಟ ಹಾಗೂ ಜಿಲ್ಲಾ ಬಿಜೆಪಿ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠದ ಪದಾಧಿಕಾರಿಗಳು ಹಾಜರಿದ್ದರು.
ಯಕ್ಷಗಾನಕ್ಕೆ ಸಂಬಂಧಪಟ್ಟ ಪರಿಕರಗಳನ್ನು ಬಾಡಿಗೆ ರೂಪದಲ್ಲಿ ನೀಡದಂತೆ ನಿಯೋಗ ಕೋರಿದೆ. ಈ ವಿಚಾರದ ಗಂಭೀರತೆ ಅರಿಯದೆ ಹಬ್ಬ-ಹರಿದಿನಗಳಲ್ಲಿ ಯಕ್ಷಗಾನದ ವೇಷ-ಭೂಷಣ ಧಾರಣೆ ಮಾಡಿಕೊಂಡು ಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆ ಅಥವಾ 112 ನಂಬರಿಗೆ ತುರ್ತು ಕರೆ ಮಾಡಿ ಮಾಹಿತಿ ನೀಡುವಂತೆ ನಿಯೋಗ ಮನವಿ ಮಾಡಿದೆ.