

ಹೊಸಪೇಟೆ: ಕರೊನಾ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಹೋಳಿ ಆಚರಿಸದಂತೆ ಸರ್ಕಾರ ಆದೇಶ ಹೊರಡಿಸಿದ್ದರೂ ನಗರದಲ್ಲಿ ಸೋಮವಾರ ಯುವಕರು ರಸ್ತೆಗಳಲ್ಲಿ ಬಣ್ಣದಾಟವಾಡಿ ಸಂಭ್ರಮಿಸಿದರು.
ನಗರದ ಪ್ರಮುಖ ಬೀದಿಗಳಲ್ಲಿ ಹಲಗೆ ಬಾರಿಸುತ್ತಾ ಗುಂಪಾಗಿ ಸೇರಿ ಪರಸ್ಪರ ಬಣ್ಣ ಎರಚಿಕೊಂಡು ಕಾಮನ ಹಾಡುಗಳನ್ನು ಹಾಡಿದರು. ನಗರದ ಪ್ರಮುಖ ವೃತ್ತಗಳಲ್ಲಿ ಪೊಲೀಸರಿದ್ದರೂ ಲೆಕ್ಕಿಸದೆ ಯುವಕರು ಹೋಳಿ ಆಚರಿಸಿದ್ದಲ್ಲದೆ, ಬೈಕ್‌ಗಳಲ್ಲಿ ಕೂಗಾಡುತ್ತ ಅತಿವೇಗವಾಗಿ ಓಡಾಡಿದರು.
ವಿಶ್ವವಿಖ್ಯಾತ ಹಂಪಿಯಲ್ಲಿ ಈ ಬಾರಿ ಹೋಳಿ ಸಂಭ್ರಮ ಕಂಡುಬರಲಿಲ್ಲ. ಸಂಪ್ರದಾಯ ಬಿಡಬಾರದೆಂಬ ಉದ್ದೇಶದಿಂದ ಹಂಪಿಯ ತೇರಿನ ಬಳಿ ಗ್ರಾಮಸ್ಥರು ಕಾಮದಹನ ನೆರವೇರಿಸಿದರು. ಕೋವಿಡ್ ನಿಯಮ ಕಡ್ಡಾಯವಾಗಿ ಪಾಲಿಸಲಾಗಿತ್ತು. ಸಮೀಪದ ಪ್ರಕಾಶ್ ನಗರದಲ್ಲಿ ಮಾತ್ರ ಯುವಕರು, ಯುವತಿಯರು ಓಕುಳಿ ಆಡಿದರು. ಅದರಂತೆ ತಾಲೂಕಿನ ಕಡ್ಡಿರಾಂಪುರ, ಕಡ್ಡಿರಾಂಪುರ ತಾಂಡಾ, ಮಲಪನಗುಡಿ, ಗಾಳೆಮ್ಮನಗುಡಿ, ಅನಂತಶಯನಗುಡಿ ಸೇರಿ ವಿವಿಧೆಡೆ ಹೋಳಿ ಸಂಭ್ರಮ ಕಂಡುಬಂತು.
ಗ್ರಾಮೀಣ ಭಾಗದಲ್ಲಿ ಓಕುಳಿಯಾಟ ಸರಳ : ಕರೊನಾ ಹಿನ್ನೆಲೆಯಲ್ಲಿ ಈ ಬಾರಿ ಹೂವಿನಹಡಗಲಿ ಪಟ್ಟಣ ಸೇರಿ ಗ್ರಾಮೀಣ ಭಾಗಗಳಲ್ಲಿ ಹೋಳಿಯನ್ನು ಸರಳವಾಗಿ ಆಚರಿಸಲಾಯಿತು. ಸೋಮವಾರ ಬೆಳಗ್ಗೆಯಿಂದಲೇ ಯುವಕರು ಬೀದಿಗೆ ಬಣ್ಣ ಹಾಕಲು ಮುಂದಾಗಲಿಲ್ಲ. ಬೆಳಗ್ಗೆ 9ಗಂಟೆಯ ನಂತರ ಮಕ್ಕಳು, ಮಹಿಳೆಯರು ಪರಸ್ಪರ ಬಣ್ಣ ಹಚ್ಚಿಕೊಂಡು ಸಂಭ್ರಮಿಸಿದರು. ಪ್ರತಿವರ್ಷ ಹಬ್ಬದ ಸಂದರ್ಭದಲ್ಲಿ ಬಣ್ಣ, ಪಿಚಕಾರಿ ಖರೀದಿಸಲು ಜನ ಮುಗಿಬೀಳುತ್ತಿದ್ದರು. ಈ ಬಾರಿ ಸಾರ್ವಜನಿಕವಾಗಿ ಹೋಳಿ ಆಚರಿಸದಂತೆ ನಿಷೇಧ ಹೇರಿದ್ದರಿಂದ ಬಣ್ಣಗಳ ವ್ಯಾಪಾರ ಗೌಣವಾಗಿತ್ತು. ಇದರಿಂದ ವ್ಯಾಪಾರಸ್ಥರಿಗೆ ನಷ್ಟವಾಯಿತು. ತಾಲೂಕಿನ ಹಿರೇಹಡಗಲಿ, ಇಟ್ಟಗಿ, ಸೋಗಿ, ನಾಗತಿ ಬಸಾಪುರ, ಹೊಳಲು, ಮಿರಾಕೊರನಹಳ್ಳಿ, ಮುದೇನೂರು ಗ್ರಾಮಗಳು ಸೇರಿ ಬಹತೇಕ ಹಳ್ಳಿಗಳಲ್ಲಿ ಯುವಕರು ಸರಳವಾಗಿ ಹಬ್ಬವನ್ನು ಆಚರಿಸಿದರು.