

ಕಂಪ್ಲಿ: ಪ್ಲಾಸ್ಟಿಕ್‌ಮುಕ್ತ ಪಟ್ಟಣವನ್ನಾಗಿ ರೂಪಿಸುವಲ್ಲಿ ಬೀದಿಬದಿ ವ್ಯಾಪಾರಿಗಳು ಸಹಕರಿಸಬೇಕು ಎಂದು ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಪ್ರಕಾಶಬಾಬು ಹೇಳಿದರು.
ಹಳೇ ಬಸ್ ನಿಲ್ದಾಣದಲ್ಲಿ ಪುರಸಭೆ ಹಮ್ಮಿಕೊಂಡಿದ್ದ ಪ್ಲಾಸ್ಟಿಕ್‌ಮುಕ್ತ ಅಭಿಯಾನದಲ್ಲಿ ಗುರುವಾರ ಮಾತನಾಡಿದರು. ಏಕಬಳಕೆ ಪ್ಲಾಸ್ಟಿಕ್ ನಿಷೇಧಿಸಲಾಗಿದೆ. ಬೀದಿಬದಿ ವ್ಯಾಪಾರಿಗಳು ಸರಕುಗಳನ್ನು ಗ್ರಾಹಕರಿಗೆ ಪ್ಲಾಸ್ಟಿಕ್ ಕವರ್‌ನಲ್ಲಿ ಕೊಡದೆ ಮನೆಯಿಂದ ಬಟ್ಟೆ ಚೀಲ, ಪೇಪರ್ ಚೀಲಗಳನ್ನು, ಪರಿಸರಸ್ನೇಹಿ ಪ್ಯಾಕೇಜಿಂಗ್ ಸಾಮಗ್ರಿ ತರುವಂತೆ ಅರಿವು ಮೂಡಿಸಬೇಕು.
ನಿಷೇಧಿತ ಪ್ಲಾಸ್ಟಿಕ್ ಕವರ್ ಬಳಸಿದಲ್ಲಿ ದಂಡ ಹಾಕಲಾಗುವುದು. ಕಳೆದ ವರ್ಷ 500ಕೆಜಿಯಷ್ಟು ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಂಡಿದ್ದು, 25ಕ್ಕೂ ಹೆಚ್ಚು ಅಂಗಡಿಯವರಿಗೆ 12 ಸಾವಿರ ರೂ.ಅಧಿಕ ದಂಡ ವಿಧಿಸಲಾಗಿದೆ. ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡಬಾರದು ಎಂದು ಕಟ್ಟುನಿಟ್ಟಾಗಿ ಎಚ್ಚರಿಕೆ ನೀಡಿದರು.