

ದೇವದುರ್ಗ: ನಾನು ಹಿಂದು, ಮುಸ್ಲಿಂ, ಕ್ರೈಸ್ತ ಎನ್ನುವುದನ್ನು ಬಿಟ್ಟು ನಾನು ಒಬ್ಬ ಮನುಷ್ಯ ಎನ್ನುವ ತತ್ವವನ್ನು ಎಲ್ಲರೂ ಅನುಸರಿಸಬೇಕಿದೆ. ನೈತಿಕ ತಳಹದಿಯ ಮೇಲೆ ದೇಶ ಕಟ್ಟುವ ತುರ್ತು ಅಗತ್ಯವಿದೆ ಎಂದು ಸಾಹಿತಿ ಲಾಲ್ ಹುಸೇನ್ ಕಂದಗಲ್ ಹೇಳಿದರು.
ಪಟ್ಟಣದ ಬಿಎಚ್.ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ನದಾಫ್ ಪಿಂಜಾರ ಸಂಘದಿಂದ ಆಯೋಜಿಸಿದ್ದ ಕಲಬುರಗಿ ವಿಭಾಗ ಮಟ್ಟದ ಸಮಾವೇಶ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ, ಸಮಾಜದ ಅಲೀಂ, ಹಫೀಜ್‌ಗಳಿಗೆ ಸನ್ಮಾನ ಸಮಾರಂಭದಲ್ಲಿ ಭಾನುವಾರ ಉಪನ್ಯಾಸ ನೀಡಿದರು. ಪ್ರವಾದಿಗಳು ನಮ್ಮ ಜನನ, ಮರಣ ನೆನೆಯಿರಿ ಎಂದಿಲ್ಲ. ಮನುಷ್ಯತ್ವ ಅಳವಡಿಸಿಕೊಂಡು ಅಕ್ಷರ ಕಲಿಯಿರಿ ಎಂದಿದ್ದಾರೆ ಎಂದು ತಿಳಿಸಿದರು.
ಅಕ್ಷರ ಕಲಿತವರು ಭ್ರಷ್ಟರಾಗಬಹುದು ಆದರೆ, ಸಂಸ್ಕಾರ ಕಲಿತವರು ಭ್ರಷ್ಟರಾಗುವುದಿಲ್ಲ. ವೃದ್ಧಾಶ್ರಮಗಳ ಹೆಚ್ಚಳಕ್ಕೆ ಅಕ್ಷರ ಕಲಿತವರೇ ಕಾರಣರಾಗಿದ್ದಾರೆ. ಅಕ್ಷರದ ಜತೆಗೆ ಸಂಸ್ಕಾರ ಕಲಿತಾಗ ಆದರ್ಶ ಸಮಾಜ ಕಟ್ಟಲು ಸಾಧ್ಯ. ಮುಸ್ಲಿಮರು ಜಾತಿವಾದ, ಕೋಮವಾದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳದೆ ಪ್ರಗತಿಪರ, ವಿಜ್ಞಾನಪರ ಚಿಂತನೆ ಮಾಡಬೇಕಿದೆ ಎಂದರು.
ಕುಟುಂಬ, ಜಾತಿ, ಧರ್ಮಕ್ಕೆ ಸೀಮಿತವಾಗದೆ ದೇಶಕ್ಕೆ ಜೀವನ ಮೀಸಲಿಡಬೇಕು. ಸರ್ವ ಜನಾಂಗದ ಶಾಂತಿ ತೋಟವನ್ನು ಅರಬ್ ರಾಷ್ಟ್ರಗಳಲ್ಲಿ ನಾವು ಕಾಣಲು ಸಾಧ್ಯವಿಲ್ಲ. ಕುವೆಂಪು ನುಡಿಗಳನ್ನು ಭಾರತದಲ್ಲಿ ಬಿಟ್ಟು ಬೇರೆಲ್ಲೂ ಕಾಣಸಿಗದು. ಜಗತ್ತಿನ ಏಕೈಕ ಸರ್ವಜನಾಂಗದ ಶಾಂತಿಯ ತೋಟವೆಂದರೆ ಅದು ಭಾರತ ಎಂದು ತಿಳಿಸಿದರು.
ಬುದ್ಧ, ಬಸವ, ಅಂಬೇಡ್ಕರ್ ನೆಲೆಸಿದ ನಾಡಿನಲ್ಲಿ ಕೋಮುವಾದಕ್ಕೆ ಬೆಲೆ ಕೊಡಬಾರದು. ಮೊಬೈಲ್ ಹಾವಳಿಯಿಂದ ನಾವು ಮನುಷ್ಯತ್ವ ಮರೆಯುತ್ತಿದ್ದೇವೆ. ಭಾರತದ ಸಂಸ್ಕಾರ ಜನರ ಹೃದಯ ಬೆಸೆಯುವಂಥದ್ದಾಗಿದೆ. ಅಂತಹ ಸಂಸ್ಕಾರವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಲಾಲ್ ಹುಸೇನ್ ಕಂದಗಲ್ ತಿಳಿಸಿದರು.
ಸಂಘದ ಅಧ್ಯಕ್ಷ ಎಚ್.ಜಲೀಲ್‌ಸಾಬ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಅಜೀಜ್, ಎಐಸಿಸಿ ಮಹಿಳಾ ಘಟಕದ ಕಾರ್ಯದರ್ಶಿ ಚಮನ್ ಫರ್ಜಾನಾ, ಪ್ರಮುಖರಾದ ರವಿಬೋಸರಾಜು, ಮಲ್ಲನಗೌಡ ಗುಂಡಗುರ್ತಿ, ಮಹಿಬೂಬ್‌ಸಾಬ್, ಹುಸೇನ್‌ಸಾಬ್, ಸಣ್ಣಬಾವಾಸಾಬ್, ಅಜ್ಮೀರ್ ಅರಕೇರಾ, ಮಹಮ್ಮದ್ ಶಫಿ, ಖಾಸೀಂಸಾಬ್ ಇತರರಿದ್ದರು.