

ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ತಾಲೂಕಿನಲ್ಲಿ ಜಲಜೀವನ್ ಮಿಷನ್ (ಜೆಜೆಎಂ) ಯೋಜನೆಯಡಿ ನಡೆಯುತ್ತಿರುವ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಮುಂದಿನ 30 ವರ್ಷ ಯಾವುದೇ ಸಮಸ್ಯೆ ಎದುರಾಗಬಾರದು ಗುಣಮಟ್ಟ ಪರಿಶೀಲಿಸಿದ ಬಳಿಕವಷ್ಟೇ ಪಿಡಿಒಗಳು ಯೋಜನೆಯನ್ನು ಹಸ್ತಾಂತರ ಮಾಡಿಕೊಳ್ಳಬೇಕು ಎಂದು ಶಾಸಕ ಶರತ್‌ಬಚ್ಚೇಗೌಡ ತಾಕೀತು ಮಾಡಿದರು.
ನಗರದ ತಾಪಂ ಸಭಾಂಗಣದಲ್ಲಿ ಜೆಜೆಎಂ ಕಾಮಗಾರಿ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಡಿಪಿಆರ್‌ಗಳನ್ನು ಪಿಡಿಒಗಳಿಗೆ ನೀಡಿ ಪಂಚಾಯಿತಿಯ ಎಲ್ಲ ಸದಸ್ಯರ ಅಭಿಪ್ರಾಯ ಪಡೆದು ವಾಟರ್‌ಮನ್‌ಗಳ ಸಹಕಾರದೊಂದಿಗೆ ಕಾಮಗಾರಿ ನಡೆಸಿದರಷ್ಟೇ ಗುಣಮಟ್ಟ ಸಾಧ್ಯವಾಗಲಿದೆ ಎಂದರು. ದೊಡ್ಡನಲ್ಲೂರಹಳ್ಳಿಯಲ್ಲಿ ಕಾಮಗಾರಿ ವೀಕ್ಷಣೆ ವೇಳೆ ಕಳಪೆ ಕಂಡುಬಂದಿದೆ, ಗುತ್ತಿಗೆದಾರರಿಗೆ ಈ ಬಗ್ಗೆ ಮಾಹಿತಿ ನೀಡಿ ವಾರದಲ್ಲಿ ಸರಿಪಡಿಸುವಂತೆ ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಪಿಡಿಒಗಳ ನೇತೃತ್ವದಲ್ಲೇ ಗುಣಮಟ್ಟದ ಕಾಮಗಾರಿ ನಡೆಯಬೇಕು ಎಂದು ಸೂಚಿಸಿದರು.
ಅಧಿಕಾರಿಗಳಿಗೆ ತರಾಟೆ:
ನಾಲ್ಕು ತಿಂಗಳ ಹಿಂದೆ ಕೊರೆಸಿದ ಕೊಳವೆ ಬಾವಿಗೆ ಇನ್ನೂ ಮೋಟರ್ ಪಂಪ್ ಹಾಗೂ ಅಗತ್ಯ ಪರಿಕರ ಅಳವಡಿಸಿಲ್ಲ. ಕೊಳವೆ ಬಾವಿ ಮುಚ್ಚಿದರೆ ಯಾರು ಜವಾಬ್ದಾರಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು ವಿದ್ಯುತ್, ಪೈಪ್, ಗುತ್ತಿಗೆದಾರರ ಸಮಸ್ಯೆ ಸೇರಿ ಇನ್ನಿತರ ಯಾವುದೇ ಸಮಸ್ಯೆ ಎದುರಾದರೂ ಎಲ್ಲವನ್ನೂ ಜೆಜೆಎಂನ ಅಧಿಕಾರಿಗಳೇ ನಿಭಾಯಿಸಬೇಕು ಎಂದು ಶಾಸಕರು ಸೂಚಿಸಿದರು.
ಪ್ರತಿ ಮನೆಗೆ ನೀರು ಲಭ್ಯತೆ ಖಚಿತಪಡಿಸಿಕೊಂಡ ಬಳಿಕವಷ್ಟೇ ಯೋಜನೆಯನ್ನು ಪಂಚಾಯಿತಿಗೆ ಹಸ್ತಾಂತರಿಸಬೇಕು ಎಂದು ಗುತ್ತಿಗೆದಾರರಿಗೆ ತಾಕೀತು ಮಾಡಿದರು.