ಹಸಿ ಕಸವನ್ನು ಗೊಬ್ಬರವಾಗಿ ತಯಾರಿಸಿ: ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ

Dc Meeting Mandya
Published on

ಮಂಡ್ಯ: ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪ್ರತಿದಿನ ಉತ್ಪತ್ತಿಯಾಗುವ ಕಸವನ್ನು ಮೂಲದಲ್ಲಿಯೇ ಹಸಿ ಕಸವನ್ನು ಕಡ್ಡಾಯವಾಗಿ ಬೇರ್ಪಡಿಸಬೇಕು. ಬಳಿಕ ಗೊಬ್ಬರವನ್ನು ತಯಾರಿಸಿ ನಿಯಮಾನುಸಾರ ರೈತರಿಗೆ ಮಾರಾಟ ಮಾಡುವ ನಿಟ್ಟಿನಲ್ಲಿ ಕ್ರಮವಹಿಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಘನತ್ಯಾಜ್ಯ ವಸ್ತು ನಿರ್ವಹಣೆ ನಿಯಮಗಳ 2016ರ ಸಂಬಂಧ ರಾಷ್ಟ್ರೀಯ ಹಸಿರು ನ್ಯಾಯಪೀಠದ ನಿರ್ದೇಶನಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಸವನ್ನು ರಸ ಮಾಡಿ ನಗರ ಸ್ಥಳೀಯ ಸಂಸ್ಥೆಗಳು ತಯಾರಿಸಿದ ಗೊಬ್ಬರವನ್ನು ಬ್ರಾಂಡಿಂಗ್ ಮಾಡಲು ಕ್ರಮವಹಿಸಿ. ಪ್ರತಿ ತಿಂಗಳು ಮಾರಾಟ ಮಾಡಿದ ಗೊಬ್ಬರದ ಪ್ರಮಾಣ ಮತ್ತು ಅದರಿಂದ ಬರುವ ಆದಾಯದ ವರದಿಯನ್ನು ನಿಗದಿತ ನಮೂನೆಯಲ್ಲಿ ಸಲ್ಲಿಸಿ. ತಯಾರಿಸಿದ ಗೊಬ್ಬರವನ್ನು ಅಧಿಕೃತ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡು ನಿಯಮಾನುಸಾರ ಮಾರಾಟ ಮಾಡಿ ಎಂದು ತಿಳಿಸಿದರು.

ನಗರ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿರುವ ಪೌಲ್ಟ್ರಿ ತ್ಯಾಜ್ಯವನ್ನು ನಿಯೋಜಿತ ಖಾಸಗಿ ಸಂಗ್ರಹಣಾದಾರರಿಗೆ ನೀಡಿ ಅದನ್ನು ಉಪಯೋಗ ಮಾಡಿಕೊಳ್ಳುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಎಲ್ಲ ನಗರ ಸ್ಥಳೀಯ ಸಂಸ್ಥೆಗಳು ಪ್ರತಿ ಮಾಹೆಯಲ್ಲಿ ಘನತ್ಯಾಜ್ಯ ವಸ್ತು ವಿಲೇವಾರಿಯನ್ನು ಬೈಲಾದಂತೆ ಸೇವಾ ಶುಲ್ಕವನ್ನು ಸಂಗ್ರಹಿಸಿ ವರದಿ ಸಲ್ಲಿಸಬೇಕು. ಸರ್ಕಾರಿ ಹಾಗೂ ಖಾಸಗಿ ಆರ್‌ಒ ಕುಡಿಯುವ ನೀರು ಶುದ್ಧೀಕರಣ ಘಟಕಗಳ ನಿಯಮಿತವಾಗಿ ನೀರಿನ ಗುಣಮಟ್ಟವನ್ನು ನಿಗದಿತ 12 ಮಾನದಂಡದ ಪ್ರಕಾರ ಪರೀಕ್ಷೆ ಮಾಡಿಸಬೇಕು ಎಂದರು.

ಮಂಡ್ಯ ನಗರ ನೀರು ಸರಬರಾಜು ವ್ಯವಸ್ಥೆ ನಿರ್ವಹಣೆ ಅಡಿ ಪ್ರತಿ ವಾರಕ್ಕೊಮ್ಮೆ ಕಚ್ಚಾ ನೀರು ಮತ್ತು ಶುದ್ಧೀಕರಣ ಘಟಕದ ಶುದ್ಧ ನೀರಿನ ಮಾದರಿಯನ್ನು ಪರೀಕ್ಷಿಸಬೇಕು. ಸಾರ್ವಜನಿಕ ಶೌಚಗೃಹ ಉಪಯೋಗಕ್ಕೆ ಯೋಗ್ಯವಾಗಿದೆಯೇ ಎಂದು ಪರಿಶೀಲಿಸಬೇಕು. ಘನತ್ಯಾಜ್ಯ ವಸ್ತು ನಿರ್ವಹಣೆಯ ಯಂತ್ರೋಪಕರಣ ಅಳವಡಿಕೆ ಹಾಗೂ ನಿರ್ವಹಣೆಯಡಿ ನಡೆಯುತ್ತಿರುವ ಕಾಮಗಾರಿಯನ್ನು ಪೂರ್ಣಗೊಳಿಸಲು ಸೂಚಿಸಿದರು.

ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆ ವಾಣಿ ಎ.ಶೆಟ್ಟಿ, ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್, ಅಪರ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತುಷಾರಮಣಿ, ನಗರಸಭೆ ಆಯುಕ್ತ ಮಂಜುನಾಥ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net