ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣಾ ಕ್ರಮವಾಗಿ-ರಿತೇಶಕುಮಾರ್ ಸಿಂಗ್ ಸೂಚನೆ

raichur
raichur
Published on

ರಾಯಚೂರು ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಅಗತ್ಯ ಕ್ರಮಕೈಗೊಂಡು ಈ ಬಾರಿ ಫಲಿತಾಂಶದಲ್ಲಿ ಬದಲಾವಣೆ ಮಾಡಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಿತೇಶಕುಮಾರ್ ಸಿಂಗ್ ಹೇಳಿದರು.

ನಗರದ ಜಿಪಂ ಸಭಾಂಗಣದಲ್ಲಿ ಸೋಮವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಫಲಿತಾಂಶ ಕುಸಿತ ಕಂಡಿದೆ. ದೇವದುರ್ಗ ತಾಲೂಕಿನಲ್ಲಿ 17 ಶಾಲೆಗಳಲ್ಲಿ ಶೇ.40ಕ್ಕಿಂತ ಕಡಿಮೆ ಫಲಿತಾಂಶ ಬಂದಿದೆ. ಈ ತಾಲೂಕಿನಲ್ಲಿನ ಮಕ್ಕಳಿಗೆ ಬರವಣಿಗೆ ಕೌಶಲ್ಯವಿಲ್ಲ ಎಂಬ ಮಾಹಿತಿಯಿದೆ. ರಾಯಚೂರು ನಗರ ವ್ಯಾಪ್ತಿಯಲ್ಲಿ 60 ಶಾಲೆಗಳಲ್ಲಿ ಶೇ.40ಕ್ಕಿಂತ ಕಡಿಮೆ ಫಲಿತಾಂಶ ದಾಖಲಾಗುತ್ತದೆ. ನಗರ ವ್ಯಾಪ್ತಿಯ ಸಾಕಷ್ಟು ಮಕ್ಕಳು ಶಾಲೆಗೆ ಬರುವುದಿಲ್ಲ ಎಂಬ ಮಾಹಿತಿಯೂ ಇದ್ದು, ಫಲಿತಾಂಶ ಸುಧಾರಣೆಗೆ ಸೂಕ್ತ ಕ್ರಮಕೈಗೊಳ್ಳಬೇಕು. ವಾರದಲ್ಲಿ 2-3 ಶಾಲೆಗಳಿಗೆ ಆಯಾ ತಾಲೂಕು ವ್ಯಾಪ್ತಿಯ ನೋಡೆಲ್ ಅಧಿಕಾರಿಗಳು ಭೇಟಿ ನೀಡಲೇಬೇಕೆಂದು ಸೂಚನೆ ನೀಡಿದರು.

ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳನ್ನು ಗುರುತಿಸುವುದಕ್ಕೆ ಆದ್ಯತೆ ನೀಡಬೇಕು. ಮಕ್ಕಳು ಶಾಲೆಯಿಂದ ಹೊರಗಡೆ ಉಳಿಯದಂತೆ ನೋಡಿಕೊಳ್ಳಬೇಕು. ಫಲಿತಾಂಶ ಸುಧಾರಣಾ ಕ್ರಮಗಳು ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಹ ಅಚ್ಚುಕಟ್ಟಾಗಿ ನಡೆಯುವಂತೆ ನೋಡಿಕೊಳ್ಳಬೇಕೆಂದು ಸೂಚನೆ ನೀಡಿದರು.

ಗೃಹಲಕ್ಷ್ಮೀ ಯೋಜನೆಯ ಪ್ರಗತಿಯ ಬಗ್ಗೆ ಕೇಳಿದ ಕಾರ್ಯದರ್ಶಿಗಳು, ಗೃಹಲಕ್ಷ್ಮಿ ಫಲಾನುಭವಿಗಳಿಗೆ ಪ್ರತಿ ತಿಂಗಳು 2000 ರೂ. ಹಣ ಬಿಡುಗಡೆಗೆ ವಿಳಂಬವಾಗದಂತೆ ಕ್ರಮವಹಿಸಲು ಅಧಿಕಾರಿಗಳಿಗೆ ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯ ವಸತಿ ನಿಲಯಗಳಿಗೆ ಪೂರೈಕೆಯಾಗುವ ಆಹಾರ ಧಾನ್ಯಗಳು ಮತ್ತು ಅದರ ಗುಣಮಟ್ಟ ವ್ಯತ್ಯಾಸವಾಗಬಾರದು. ಕಡ್ಡಾಯವಾಗಿ ಬಯೋಮೆಟ್ರಿಕ್‌ನಲ್ಲಿನ

ಮಕ್ಕಳ ಹಾಜರಾತಿಯನ್ನೇ ಪರಿಗಣನೆಗೆ ಪಡೆಯಬೇಕು. ರಿಜಿಸ್ಟರನಲ್ಲಿನ ಹಾಜರಾತಿಗೂ ಬಯೋಮೆಟ್ರಿಕನಲ್ಲಿ ಹಾಜರಾತಿಗೂ ವ್ಯತ್ಯಾಸವಾಗಕೂಡದು. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ವಸತಿ ನಿಲಯಗಳಲ್ಲಿ ಬಯೋಮೆಟ್ರಿಕ್ ಯಂತ್ರಗಳನ್ನು ಅಳವಡಿಸಿ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯಗೊಳಿಸಬೇಕು ಎಂದು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಿತೀಶ್ ಕೆ.,ಜಿಪಂ ಸಿಇಓ ಈಶ್ವರ ಕುಮಾರ ಕಾಂದೂ, ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮೊಹಪಾತ್ರ,ಎಸಿ ಗಜಾನನ ಬಾಳೆ,ಜಿಪಂ ಉಪ ಕಾರ್ಯದರ್ಶಿ ಹಾಲಸಿದ್ದಪ್ಪ ಪೂಜಾರಿ, ಮುಖ್ಯ ಯೋಜನಾಧಿಕಾರಿ ಡಾ.ಟಿ.ರೋಟಿ, ಯೋಜನಾ ನಿರ್ದೇಶಕರಾದ ಶರಣಬಸವರಾಜ ಕೆ. ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net