ಗ್ಯಾರಂಟಿ ಯೋಜನೆ ಅನುಷ್ಠಾನಕ್ಕಿರಲಿ ಕಾಳಜಿ

bk1
ಬಸವಕಲ್ಯಾಣದಲ್ಲಿ ಗ್ಯಾರಂಟಿ ಯೋಜನೆಗಳ ತಾಲೂಕು ಸಮಿತಿ ಅಧ್ಯಕ್ಷ ನೀಲಕಂಠ ರಾಠೋಡ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಪಂ ಇಒ ರಮೇಶ ಸುಲ್ಫಿ, ಯೋಜನಾಧಿಕಾರಿ ರಾಜಶೇಖರ ನೆಲ್ಲಿ ಇದ್ದರು.
Published on

ಬಸವಕಲ್ಯಾಣ: ರಾಜ್ಯ ಸರ್ಕಾದ ಮಹತ್ವಾಕಾಂಕ್ಷಿ ಐದು ಗ್ಯಾರಂಟಿ ಯೋಜನೆಗಳನ್ನು ತಾಲೂಕಿನಲ್ಲಿ ಸಮರ್ಪಕ ಅನುಷ್ಠಾನಗೊಳಿಸುವಲ್ಲಿ ಸಂಬಂಧಿತ ಅಧಿಕಾರಿಗಳು ಕಾಳಜಿ ವಹಿಸಬೇಕು. ಯಾವೊಬ್ಬ ಅರ್ಹ ಫಲಾನುಭವಿ ಯೋಜನೆಯಿಂದ ವಂಚಿತವಾಗದಂತೆ ನೋಡಿಕೊಳ್ಳಬೇಕು ಎಂದು ಗ್ಯಾರಂಟಿ ಯೋಜನೆಗಳ ತಾಲೂಕು ಸಮಿತಿ ಅಧ್ಯಕ್ಷ ನೀಲಕಂಠ ರಾಠೋಡ್ ಸೂಚಿಸಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಗ್ರಾಪಂ ಮಟ್ಟದಲ್ಲಿ ತಾಂತ್ರಿಕ, ಮಾಹಿತಿ ಕೊರತೆ ಇತರ ಕಾರಣದಿಂದ ಉಳಿದಿರುವ ಅರ್ಜಿಗಳನ್ನು ಶೀಘ್ರ ಇತ್ಯರ್ಥಪಡಿಸಬೇಕು ಎಂದರು.

ಗೃಹಲಕ್ಷ್ಮಿ ಯೋಜನೆಯಡಿ ತಾಲೂಕಿನಲ್ಲಿ ಬಂದ ೫೫೯೧೦ ಅರ್ಜಿಗಳಲ್ಲಿ ೪೪೮೨ ಬಾಕಿ ಉಳಿದಿವೆ. ಹುಲಸೂರು ತಾಲೂಕಿನಲ್ಲಿ ೯೩೦೪ ಅರ್ಜಿ ಪೈಕಿ ೭೦೬ ಬಾಕಿ ಉಳಿದಿವೆ ಎಂದು ಸಿಡಿಪಿಒ ಗೌತಮ ಸಿಂಧೆ ತಿಳಿಸಿದರು. ಮುಂದಿನ ಸಭೆಯೊಳಗೆ ಎಲ್ಲ ಅರ್ಜಿ ವಿಲೇವಾರಿ ಮಾಡಿ ಅರ್ಹರಿಗೆ ಯೋಜನೆ ಲಾಭ ಮುಟ್ಟಿಸಬೇಕು ಎಂದು ತಾಕೀತು ಮಾಡಿದರು.

ಶಕ್ತಿ ಯೋಜನೆಯಡಿ ತಾಲೂಕಿನಲ್ಲಿ ಪ್ರತಿದಿನ ೧೯ ಸಾವಿರ ಮಹಿಳೆಯರು ಸಾರಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾರೆ ಎಂದು ಬಸ್ ಘಟಕದ ವ್ಯವಸ್ಥಾಪಕ ಮೊಹಮ್ಮದ್ ನಯೀಮ್ ತಿಳಿಸಿದರು. ಬಸವಕಲ್ಯಾಣ ಘಟಕದಲ್ಲಿ ನಿತ್ಯ ಎಷ್ಟು ಬಸ್‌ಗಳು ಸಂಚರಿಸುತ್ತಿವೆ ಎಂದು ತಾಪಂ ಇಒ ರಮೇಶ ಸುಲ್ಫಿ ಹಾಗೂ ಯೋಜನಾಧಿಕಾರಿ ರಾಜಶೇಖರ ನೆಲ್ಲಿ ಪ್ರಶ್ನಿಸಿದರು. ೧೧೧ ಬಸ್‌ಗಳಿದ್ದು, ೧೦೫ ಪ್ರಯಾಣಿಕರ ಅನುಕೂಲಕ್ಕಾಗಿ ಸಂಚರಿಸುತ್ತಿವೆ ಎಂದು ವ್ಯವಸ್ಥಾಪಕರು ಮಾಹಿತಿ ನೀಡಿದರು.

ತಾಲೂಕಿನಲ್ಲಿರುವ ೧,೧೦,೪೭೪ ಮೀಟರ್‌ಗಳ ಪೈಕಿ ೫೩,೪೮೦ ಮೀಟರ್ ಬಳಕೆದಾರರು ೨೦೦ ಯೂನಿಟ್‌ಗಿಂತ ಕಡಿಮೆ ವಿದ್ಯುತ್ ಬಳಸಿ ಗೃಹಲಕ್ಷ್ಮಿ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂದು ಜೆಸ್ಕಾಂ ಎಇಇ ಗಣಪತಿ ಮೈನಾಳೆ ತಿಳಿಸಿದರು.

೧೩೯ ನ್ಯಾಯಬೆಲೆ ಅಂಗಡಿಗಳ ಮೂಲಕ ೬೬,೩೫೨ ಕುಟುಂಬಗಳಿಗೆ ಅನ್ನಭಾಗ್ಯ ಯೋಜನೆ ಲಾಭ ಸಿಗುತ್ತಿದೆ ಎಂದು ಆಹಾರ ಇಲಾಖೆ ಶಿರಸ್ತೇದಾರ ನಿಂಗಯ್ಯ ಹಿರೇಮಠ ಹೇಳಿದರು.

ಸಮಿತಿ ಸದಸ್ಯರಾದ ಪ್ರೀತೇಶ ಮುಳೆ, ಸಂಜುಕುಮಾರ ದೇಗಾಂವ, ಸೋನಾಲಿ ನೀಲಕಂಠೆ, ದಶರಥ ಬಾಬಗೆ, ಅನೀಲ ಗೋಖಲೆ, ದೇವಿದಾಸ ಗರುಡಕರ, ಯುವರಾಜ ಸೂರ್ಯವಂಶಿ, ಮಹಾದೇವ ಕೋಟಮಪಳ್ಳಿ ಇತರರಿದ್ದರು.

ಸಮಸ್ಯೆ ಬಿಚ್ಚಿಟ್ಟ ಸದಸ್ಯರು: ಶಾಲಾ ಅವಧಿ ಮುಗಿದ ನಂತರ ತಮ್ಮೂರಿಗೆ ತೆರಳಲು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಇದ್ದುದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಕಂಟ್ರೋಲರ್‌ಗೆ ಕೇಳಿದರೆ ಹಾರಿಕೆ ಉತ್ತರ ನೀಡುತ್ತಾರೆ ಎಂದು ಸದಸ್ಯರಾದ ಎಂ.ಡಿ. ಖುತುಬೋದ್ದಿನ್ ಮತ್ತು ಜಗನ್ನಾಥ ಪಾಟೀಲ್ ದೂರಿದರು. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿ ಉತ್ತರಿಸಿದ ನಂತರ ಚರ್ಚೆಗೆ ವಿರಾಮ ಬಿದ್ದಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net