ಸಾವಯವ ಬೆಳೆ ಬ್ರ್ಯಾಂಡಿಂಗ್ ಆಗಲಿ: ಜಿಪಂ ಸಿಇಒ ಕೆ.ಆರ್.ನಂದಿನಿ ಸಲಹೆ

Progress review meeting Mandya
Published on

ಮಂಡ್ಯ: ರಾಸಾಯನಿಕ ರೀತಿಯಲ್ಲೇ ಬೆಳೆ ಬೆಳೆದು ಸಾವಯವವೆಂದು ಗ್ರಾಹಕರಿಗೆ ಹಾಗೂ ಸಾವಯವ ಪದ್ಧತಿಯಲ್ಲಿ ಬೆಳೆ ಬೆಳೆದ ರೈತರಿಗೆ ಸಹ ಮೋಸ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಸಾವಯವ ಆಹಾರ ಪದಾರ್ಥಗಳಿಗೆ ಉತ್ತಮ ದರ ಸಿಗಲು ಅವುಗಳ ಬ್ರ್ಯಾಂಡಿಂಗ್ ಆಗಬೇಕು. ಆಗ ಮಾತ್ರ ಉತ್ತಮ ಮಾರುಕಟ್ಟೆ ಹಾಗೂ ದರ ಸಿಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಸಲಹೆ ನೀಡಿದರು.

ನಗರದ ಜಿಪಂ ಕಚೇರಿಯ ಮಿನಿ ಸಭಾಂಗಣದಲ್ಲಿ ಆಯೋಜಿಸಿದ್ದ ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ವಿವಿಧ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ರೈತರು ಹೆಚ್ಚಾಗಿ ಸಾವಯವ ಅಥವಾ ನೈಸರ್ಗಿಕ ಕೃಷಿ ಪದ್ಧತಿಯನ್ನು ಬಳಸಿಕೊಂಡು ದೇಸಿ ತಳಿಯ ಬೆಳೆ ಬೆಳೆಯುವಂತೆ ಪ್ರೋತ್ಸಾಹಿಸಬೇಕು. ದೇಸಿ ತಳಿ ಬೆಳೆಯುವ ಸಂದರ್ಭದಲ್ಲಿ ನೈಸರ್ಗಿಕ ಗೊಬ್ಬರ ಬಳಸುವುದರಿಂದ ಹೆಚ್ಚು ಇಳುವರಿ ಸಿಗುತ್ತದೆ. ಇದಕ್ಕಾಗಿ ರೈತರಿಗೆ ಹಳ್ಳಿಕಾರ್ ಹಸುಗಳನ್ನು ಸಾಕಲು ಪ್ರೇರೇಪಿಸಬೇಕು ಎಂದರು.

ನೈಸರ್ಗಿಕ ಕೃಷಿ ಅನುಸರಿಸುತ್ತಿರುವ ರೈತರನ್ನು ಆಯ್ಕೆ ಮಾಡಿ ಪಶುಸಂಗೋಪನಾ ಇಲಾಖೆಯಿಂದ ಅಮೃತ್ ಮಹಲ್ ಯೋಜನೆಯಡಿ ಹಳ್ಳಿಕಾರ್ ಹಸುಗಳನ್ನು ಒದಗಿಸಿಕೊಡಿ. ಈ ಯೋಜನೆಯಡಿ ಗುರಿ ಕಡಿಮೆ ಇದೆ. ಇದನ್ನು ಹೆಚ್ಚಿಸುವಂತೆ ಹಾಗೂ ಅದರ ಅಗತ್ಯತೆ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ. ನೈಸರ್ಗಿಕ ಕೃಷಿ ಪದ್ಧತಿಯನ್ನು ರೈತರು ಅಳವಡಿಸಿಕೊಳ್ಳಲು ರಾಸಾಯನಿಕ ಗೊಬ್ಬರ ದೊರೆಯುವ ದರದಲ್ಲೇ ಅಥವಾ ಅದಕ್ಕಿಂತ ಕಡಿಮೆ ದರದಲ್ಲಿ ನೈಸರ್ಗಿಕ ಗೊಬ್ಬರ ದೊರಕುವಂತಾಗಬೇಕು ಎಂದು ಹೇಳಿದರು.

ನೈಸರ್ಗಿಕ ಗೊಬ್ಬರವನ್ನು ಬಳಸಿ ಬೆಳೆದ ಬೆಳೆಯಲ್ಲಿ ಉತ್ತಮ ಇಳುವರಿ ಸಿಗಬೇಕು. ಅಥವಾ ರಾಸಾಯನಿಕ ಗೊಬ್ಬರ ಬಳಸಿ ಶೇ.10 ರಿಂದ 20 ಇಳುವರಿ ಹೆಚ್ಚು ದೊರೆತರೂ ಸಾವಯವ ಪದ್ಧತಿಯಲ್ಲಿ ಬೆಳೆದ ಆಹಾರ ಪದಾರ್ಥಗಳ ಬೇಡಿಕೆ ಹೆಚ್ಚಿದೆ. ಮಾತ್ರವಲ್ಲದೆ ದುಬಾರಿ ದರಕ್ಕೆ ಮಾರಾಟವಾಗುತ್ತದೆ. ಈ ಹಿನ್ನೆಲೆಯಲ್ಲಿ ನೈಸರ್ಗಿಕ ಕೃಷಿ ಲಾಭದಾಯಕವಾಗಿದೆ ಎಂಬುದನ್ನು ತಿಳಿಸಿಕೊಡಬೇಕು. ಇದಕ್ಕಾಗಿ ನೈಸರ್ಗಿಕ ಪದ್ಧತಿಯಲ್ಲಿ ಬೆಳೆ ಬೆಳೆದು ಉತ್ತಮ ಸಾಧನೆ ಮಾಡಿರುವ ರೈತರಿಂದ ಕಾರ್ಯಾಗಾರ ಆಯೋಜಿಸಿ ಎಂದರು.

ಸಾಂಪ್ರದಾಯಿಕ ಎಣ್ಣೆ ಗಾಣಗಳನ್ನು ಸ್ವಸಹಾಯ ಸಂಘಗಳು ಪ್ರಾರಂಭಿಸಲು ಎಣ್ಣೆಕಾಳುಗಳ ಅವಶ್ಯಕತೆ ಇದೆ. ರೈತರು ತಮ್ಮ ಜಮೀನಿನ ಸುತ್ತ ಹಾಗೂ ಬೆಳೆಗಳ ಮಧ್ಯದಲ್ಲಿ ಎಣ್ಣೆ ಕಾಳುಗಳನ್ನು ಬೆಳೆಯಬಹುದು. ಬೆಳೆದ ಎಣ್ಣೆಕಾಳುಗಳನ್ನು ಜಿಲ್ಲೆಯಲ್ಲಿ ಸಾಂಪ್ರದಾಯಿಕ ಎಣ್ಣೆ ಗಾಣಗಳನ್ನು ಬಳಸುವ ಮಹಿಳಾ ಸಂಘಗಳಿಗೆ ಮಾರಾಟ ಮಾಡುವಂತೆ ಸಮನ್ವಯ ಮಾಡಿಕೊಡಿ. ಜಿಲ್ಲೆಯಲ್ಲಿ ಸಾವಯವ ಬೆಲ್ಲವನ್ನು ತಯಾರಿಸುತ್ತೇವೆ. ಇದರೊಂದಿಗೆ ಸಾವಯವ ಪದ್ಧತಿಯಲ್ಲಿ ಕಡಲೆಕಾಯಿ ಬೆಳೆದು ಚಿಕ್ಕಿಯನ್ನು ಜಿಲ್ಲೆಯಲ್ಲೇ ತಯಾರಿಸಿ ಬೇರೆ ಜಿಲ್ಲೆ ಹಾಗೂ ರಾಜ್ಯದಲ್ಲಿ ಮಾರಾಟ ಮಾಡಬಹುದು ಎಂದರು.

ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್ ಮಾತನಾಡಿ, ನ್ಯಾಷನಲ್ ಮಿಷನ್ ಹಾಗೂ ನ್ಯಾಚುರಲ್ ಫಾರ್ಮಿಂಗ್ ಯೋಜನೆಯಡಿ ಜಿಲ್ಲೆಯಲ್ಲಿ ಸುಮಾರು 278 ದೇಸಿ ತಳಿಗಳನ್ನು ಪತ್ತೆ ಮಾಡಿ ಸಂರಕ್ಷಿಸಲಾಗುತ್ತದೆ. ಒಟ್ಟು 400 ತಳಿಗಳನ್ನು ಸಂರಕ್ಷಿಸುವ ಗುರಿ ಹೊಂದಲಾಗಿದೆ ಎಂದರು.

ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ ಲಕ್ಷ್ಮೀ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರೂಪಶ್ರೀ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀಹರ್ಷ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net