

ಮಂಡ್ಯ: ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆಯಿದ್ದಲ್ಲಿ ಒಂದು ತಿಂಗಳ ಮುನ್ನವೇ ಬೇಡಿಕೆಯನ್ನು ವರದಿ ಮಾಡಿ ನೀಡುವುದು ಕಡ್ಡಾಯ ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ.ಅನ್ಬುಕುಮಾರ್ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಾರ್ಚ್ ಮಾಹೆಯಿಂದ ಮೇ 28ರವರೆಗೆ ವಾಸ್ತವವಾಗಿ 260.1 ಮಿ.ಮೀ ಮಳೆಯಾಗಿದೆ. ಕಳೆದ 2 ದಿನಗಳಲ್ಲಿ ಮಳೆಯಿಂದಾಗಿ 28 ಮನೆಗೆ ಹನಿಯಾಗಿದ್ದು, ಪರಿಹಾರ ಪಾವತಿಸಲು ತಂತ್ರಾಶದ ಮೂಲಕ ಕ್ರಮ ಕೈಗೊಳ್ಳಲಾಗಿದೆ ಎಂದರು.
ಮುಂಗಾರು ಪೂರ್ವ ಸಿದ್ದತಾ ಕ್ರಮವಾಗಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದ್ದು, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ ನಡೆಸಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ಅಗತ್ಯ ಸಲಹೆ ಮತ್ತು ಸೂಚನೆಗಳನ್ನು ನೀಡಲಾಗಿದೆ. ಮಳೆ ಬರುವ ಸೂಚನೆಯಿದ್ದಾಗ ಉಕ್ಕಿ ಹರಿಯುವ ಸೇತುವೆ, ನದಿ, ತೊರೆ ಸ್ಥಳಗಳಲ್ಲಿ ಹಾಗೂ ಅಪಾಯ ಮುನ್ಸೂಚನೆಯ ಸ್ಥಳಗಳಲ್ಲಿ ಸೂಚನಾ ಫಲಕಗಳನ್ನು ಸಾರ್ವಜನಿಕರ ತಿಳಿವಳಿಕೆಗಾಗಿ ಪೂರ್ವಭಾವಿಯಾಗಿ ಅಳವಡಿಸಲು ಕ್ರಮವಹಿಸಬೇಕು ಎಂದರು.
ಹಿಂದಿನ ವರ್ಷಗಳ ವಿಪತ್ತಿನ ಆಧಾರದ ಮೇಲೆ ಜಿಲ್ಲೆಯ ಪ್ರವಾಹಕ್ಕೆ ಒಳಗಾಗುವ ಗ್ರಾಮಗಳನ್ನು ಗುರುತಿಸಲಾಗಿದ್ದು, ರಕ್ಷಣಾ ಸಲಕರಣೆಗಳನ್ನು ಸಜ್ಜುಗೊಳಿಸಬೇಕು. ಪ್ರವಾಹಕ್ಕೆ ಒಳಗಾಗುವ ಸ್ಥಳಗಳಲ್ಲಿ ಕಾಳಜಿ ಕೇಂದ್ರಗಳನ್ನು ಗುರುತಿಸಬೇಕು. ಇಲಾಖಾವಾರು ತಮ್ಮ ವ್ಯಾಪ್ತಿಗೆ ಒಳಪಡುವ ಚರಂಡಿ ಮತ್ತು ಕಾಲುವೆಗಳಲ್ಲಿನ ಹೂಳು ತೆಗೆಯಲು ಕ್ರಮ ವಹಿಸಬೇಕು. ವಿದ್ಯುತ್ ಕಂಬಗಳು ಮತ್ತು ಟ್ರಾನ್ಸ್‌ಫಾರ್ಮರ್‌ಗಳ ಪರಿಶೀಲಿಸಲು ಮತ್ತು ಅಗತ್ಯವಿದ್ದಲ್ಲಿ ಕೂಡಲೇ ಸರಿಪಡಿಸಲು ಕ್ರಮ ವಹಿಸುವಂತೆ ಸೂಚಿಸಿದರು.
2019 ರಿಂದ 2024 ರವರೆಗೆ ಬೆಳೆ ವಿಮೆಗಾಗಿ ಒಟ್ಟು ಅರ್ಜಿ 3,33,988 ನೋಂದಣಿಯಾಗಿದ್ದು, ಒಟ್ಟು 1,93,780 ಫಲಾನುಭವಿಗಳು ಪರಿಹಾರ ಮೊತ್ತವನ್ನು ಪಡೆದಿದ್ದರೆ. ಮೀನು ಆರೋಗ್ಯಕರ ಆಹಾರವಾಗಿದ್ದು, ಜಿಲ್ಲೆಯಲ್ಲಿ ಮೀನುಗಾರಿಕೆ ಕಡಿಮೆಯಿದೆ. ಮೀನು ಮಾರಾಟ ಮಾಡುವವರಿಗಾಗಿ ಆಟೋಗಳ ವ್ಯವಸ್ಥೆ ಒದಗಿಸುವ ಯೋಜನೆ ರೂಪಿಸಿ ಹಾಗೂ ಮೀನು ಮಾರುಕಟ್ಟೆಯನ್ನು ವೃದ್ಧಿಸಿ ಎಂದು ಮೀನುಗಾರಿಗೆ ಇಲಾಖೆಗೆ ಸಲಹೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಮಾಯಣ್ಣ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಲಕ್ಷ್ಮೀ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ರೂಪಶ್ರೀ ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದರು.