

ಮಂಡ್ಯ: ಬಾಲ್ಯ ವಿವಾಹ ಸಮಾಜದ ಪಿಡುಗಾಗಿದ್ದು, ಇದನ್ನು ತಡೆಗಟ್ಟಲು ಹೆಚ್ಚು ಜಾಗೃತಿ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಆಯೋಜಿಸುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಿಷನ್ ವಾತ್ಸಲ್ಯ ಮಾರ್ಗಸೂಚಿಯನ್ವಯ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ, ಮಕ್ಕಳ ಸಹಾಯವಾಣಿ ಹಾಗೂ ಮಕ್ಕಳ ಕಲ್ಯಾಣ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 2023-24ನೇ ಸಾಲಿನಲ್ಲಿ 180 ಪ್ರಕರಣ ವರದಿಯಾಗಿದೆ. ಅಂತೆಯೇ 105 ಬಾಲ್ಯ ವಿವಾಹವನ್ನು ತಡೆಯಲಾಗಿದ್ದು, 75 ಬಾಲ್ಯ ವಿವಾಹ ಪ್ರಕರಣಗಳ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.ಬಾಲ್ಯ ವಿವಾಹ ನಡೆದ ಮೇಲೆ ಕ್ರಮ ಕೈಗೊಳ್ಳುವುದಕ್ಕಿಂತ, ಬಾಲ್ಯ ವಿವಾಹ ನಡೆಯದಂತೆ ಜನರಲ್ಲಿ ಅರಿವು ಮೂಡಿಸುವುದು ಮುಖ್ಯವಾಗಿದೆ. ಬಾಲ್ಯ ವಿವಾಹಗಳು ಜರುಗುವ ಹಾಗೂ ಪದೇ ಪದೇ ಮರುಕಳಿಸುವಂತಹ ಸ್ಥಳಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಜಿಲ್ಲೆಯಲ್ಲಿ 18 ವರ್ಷದೊಳಗಿರುವ ಹೆಣ್ಣುಮಕ್ಕಳ ಸಂಖ್ಯೆಯ ಬಗ್ಗೆ ಮಾಹಿತಿ ಪಡೆದು ಅಂತಹ ಹೆಣ್ಣು ಮಕ್ಕಳು ಹಾಗೂ ಪಾಲಕರಿಗೆ ಮುಂಚಿತವಾಗಿಯೇ ಬಾಲ್ಯ ವಿವಾಹದ ಬಗ್ಗೆ ಅರಿವು ಮೂಡಿಸುವ ಮೂಲಕ ಬಾಲ್ಯ ವಿವಾಹವನ್ನು ತಡೆಗಟ್ಟಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸಿದ್ದಲಿಂಗೇಶ್, ಡಿಸಿಆರ್‌ಬಿ ಇನ್ಸ್‌ಪೆಕ್ಟರ್ ಬಿ.ದೇವರಾಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎಸ್.ರಾಜಮೂರ್ತಿ, ನಿರೂಪಣಾಧಿಕಾರಿ ಧರಣಿಕುಮಾರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಶ್ಮಿ, ಕೌಶಲಾಭಿವೃದ್ಧಿ ಇಲಾಖೆ ಅಧಿಕಾರಿ ನಾಗಾನಂದ ಇತರರಿದ್ದರು.