ಮಕ್ಕಳ ಹಕ್ಕುಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಿ

18BK8
ಬಸವಕಲ್ಯಾಣದ ತಾಪಂ ಕಚೇರಿಯಲ್ಲಿ ಬುಧವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಮಾತನಾಡಿದರು. ದತ್ತಾತ್ರೇಯ ಗಾದಾ, ರಮೇಶ ಸುಲ್ಪಿ, ಗೌತಮ ಸಿಂಧೆ, ಅಲಿಸಾಬ್ ಇದ್ದರು.
Published on

ಬಸವಕಲ್ಯಾಣ: ಮಕ್ಕಳ ಹಕ್ಕುಗಳ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಯಾವುದೇ ಧಕ್ಕೆ ಬಾರದಂತೆ ಅಧಿಕಾರಿಗಳು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಸಲಹೆ ನೀಡಿದರು.

ನಗರದ ತಾಪಂ ಸಭಾಂಗಣದಲ್ಲಿ ಬುಧವಾರ ನಡೆದ ಸಭೆ ಅಧ್ಯಕ್ಷತೆ ವಹಿಸಿ ಪ್ರಗತಿ ಪರಿಶೀಲಿಸಿದ ಅವರು, ಮಕ್ಕಳಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ಜತೆಗೆ ಸಮಸ್ಯೆಗಳಿದ್ದರೆ ಪರಿಹಾರ ಕಲ್ಪಿಸುವದೇ ಸಭೆಯ ಉದ್ದೇಶವಾಗಿದೆ. ಕೆಲ ಅಧಿಕಾರಿಗಳ ಕರ್ತವ್ಯದಲ್ಲಿ ಲೋಪ ಕಂಡು ಬರುತ್ತಿದ್ದು, ಸರಿ ಪಡಿಸಿಕೊಳ್ಳಬೇಕು ಎಂದು ಸೂಚಿಸಿದರು.

ಬಾಲ್ಯ ವಿವಾಹಗಳ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ೧೦೦ಕ್ಕೆ ೧೯ ರಷ್ಟು ವಿವಾಹಗಳು ನಡೆಯುತ್ತಿವೆ. ಇದಕ್ಕೆ ತಿಳಿವಳಿಕೆ ಕೊರತೆ ಕಾರಣವಾಗಿದೆ. ತಡೆಗಟ್ಟುವಲ್ಲಿ ಅಧಿಕಾರಿಗಳು ಶ್ರಮಿಸಬೇಕು ಎಂದರು.

ತಾಲೂಕಿನ ಶಾಲೆಯೊಂದರಲ್ಲಿ ೯ನೇ ತರಗತಿಯಲ್ಲಿ ೧೩ ವಿದ್ಯಾರ್ಥಿಗಳಿದ್ದಾರೆ. ಆದರೆ ೧೦ನೇ ತರಗತಿಗೆ ವಿದ್ಯಾರ್ಥಿಗಳು ಬರುತ್ತಿಲ್ಲ. ಇದೇ ಶಾಲೆಯಲ್ಲಿ ಮೂರು ಬಾಲ್ಯವಿವಾಹಗಳು ನಡೆದಿವೆ. ತಪ್ಪಿತಸ್ಥರ ವಿರುದ್ದ ಪೋಸ್ಕೋ ಪ್ರಕರಣ ದಾಖಲಿಸಿ ಆಯೋಗಕ್ಕೆ ವರದಿ ಸಲ್ಲಿಸಬೇಕು. ಒಂದೇ ಮಗುವಿನ ದಾಖಲಾತಿ ಎರಡೆರಡು ಕಡೆಗಳಲ್ಲಿ ದಾಖಲು ಮಾಡಲಾಗಿದ್ದು, ಸರಿಪಡಿಸಬೇಕು ಎಂದು ಇಇಒ ಸಿದ್ದವೀರಯ್ಯ ರುದನೂರ ಅವರಿಗೆ ತಾಕೀತು ಮಾಡಿದರು.

ಆರೋಗ್ಯ ಇಲಾಖೆಯಲ್ಲಿ ಏಪ್ರಿಲ್‌ನಿಂದ ಇಲ್ಲಿಯವರೆಗೆ ಎಷ್ಟು ಹೆರಿಗೆಗಳಾಗಿವೆ. ಇದರಲ್ಲಿ ನಾರ್ಮಲ್ ಎಷ್ಟು-ಸಿಜೇರಿಯನ್ ಎಷ್ಟು ಎಂಬ ಕುರಿತು ಮಾಹಿತಿ ನೀಡುವಂತೆ ಆರೋಗ್ಯಅಧಿಕಾರಿ ನೀಡಿದ ಉತ್ತರದಲ್ಲಿ ಸಂಖ್ಯೆ ತಾಳೆ ಆಗದ ಹಿನ್ನೆಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಉತ್ತಮವಾದ ಆಹಾರ ಪೊರೈಸುವಲ್ಲಿ ಗುತ್ತಿಗೆದಾರರು ವಿಫಲರಾಗುತ್ತಿದ್ದಾರೆ. ಅವರಿಗೆ ನೋಟಿಸ್‌ನೀಡಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

ತಹಸೀಲ್ದಾರ್ ದತ್ತಾತ್ರೆಯ ಗಾದಾ, ತಾಪಂ ಇಒ ರಮೇಶ ಸುಲ್ಪಿ, ಸಿಡಿಪಿಒ ಗೌತಮ ಸಿಂಧೆ, ಸಿಪಿಐ ಅಲಿಸಾಬ್ ಇತರರಿದ್ದರು.

ಆಸ್ಪತ್ರೆಗೆ ಭೇಟಿ: ಶಶಿಧರ ಕೋಸಂಬೆ ನಗರದ ಸರ್ಕಾರಿ ಆಸ್ಪತ್ರೆಗೆ ತೆರಳಿ ಐಸಿಯು, ತಾಯಿ ಮತ್ತು ಮಕ್ಕಳ ಆರೈಕೆ ಕೇಂದ್ರಕ್ಕೆ ತೆರಳಿ ವ್ಯವಸ್ಥೆ ಪರಿಶೀಲಿಸಿದರು. ಸ್ಥಳದಲ್ಲಿದ್ದ ಮುಖ್ಯ ವೈದ್ಯಾಧಿಕಾರಿ ಡಾ. ಅಪರ್ಣಾ ಮಹಾನಂದ ಅವರು ಕೋಸಂಬೆ ಅವರಿಗೆ ಮಾಹಿತಿ ನೀಡಿದರು. ಶಿವಪುರ ರಸ್ತೆಯಲ್ಲಿರುವ ಶ್ರೀ ಸ್ಕ್ಯಾನಿಂಗ್ ಸೆಂಟರ್‌ಗೆ ಹಾಗೂ ಬಸ್ ನಿಲ್ದಾಣದ ಬಳಿ ಇರುವ ರೀಫಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು. ಈ ಎರಡೂ ಕಡೆಗಳಲ್ಲಿ ದರದ ನಾಮಫಲಕ, ಸಿಸಿಟಿವಿ ಅಳವಡಿಕೆ, ರೋಗಿಗಳಿಗೆ ರಸೀದಿ ನೀಡದಿರುವುದು ಕಂಡು ಬಂದಿದ್ದು, ಸೂಕ್ತ ಕ್ರಮ ಕೈಗೊಂಡು ಆಯೋಗಕ್ಕೆ ವರದಿ ಸಲ್ಲಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net