ಅಭಿವೃದ್ಧಿ ಕಾರ್ಯಕ್ಕೂ ಒತ್ತು ಕೊಡಿ, ಜಿಲ್ಲಾಧಿಕಾರಿ ರವೀಂದ್ರ ತಾಕೀತು ಜಿಲ್ಲಾಡಳಿತ ಭವನದಲ್ಲಿ ಮಾಸಿಕ ಪ್ರಗತಿ ಪರಿಶೀಲನಾ ಸಭೆ

dc meeting
Published on

ಬೆಂಗಳೂರು ಗ್ರಾಮಾಂತರ: ಕರೊನಾ ಸಂಬಂಧಿತ ಕರ್ತವ್ಯದ ಜತೆಜತೆಗೆ ಜಿಲ್ಲೆಯ ಎಲ್ಲ ಅಭಿವೃದ್ಧಿ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನದ ಬಗ್ಗೆ ಅಧಿಕಾರಿಗಳು ನಿಗಾ ವಹಿಸಬೇಕು. ಕರೊನಾ ಕರ್ತವ್ಯ ನೆಪದಲ್ಲಿ ಇನ್ನಿತರ ಕರ್ತವ್ಯ ಕಡೆಗಣಿಸಬಾರದು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಾಕೀತು ಮಾಡಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಮಾಜ ಕಲ್ಯಾಣ ಇಲಾಖೆಯ ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆ ಕಾರ್ಯಕ್ರಮದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿ ಕರೊನಾ ನಿರ್ವಹಣೆಗೆ ಅಧಿಕಾರಿಗಳು ಉತ್ತಮ ರೀತಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಯಾವುದೇ ಲೋಪದೋಷ ಕಂಡುಬಂದಿಲ್ಲ. ಆದರೆ ಕರೊನಾ ಕರ್ತವ್ಯದೊಂದಿಗೆ ಜಿಲ್ಲೆಯ ವಿವಿಧ ಅಭಿವೃದ್ಧಿ ಕೆಲಸ ಕಡೆಗಣಿಸಬಾರದು ಎಂದು ಎಚ್ಚರಿಕೆ ನೀಡಿದರು.

ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ನಿಗದಿಪಡಿಸಿರುವ ಭೌತಿಕ ಮತ್ತು ಆರ್ಥಿಕ ಗುರಿ ಸಾಧಿಸಲೇಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಸಮರ್ಪಕ ರೂಪುರೇಷೆಯೊಂದಿಗೆ ಕಾರ್ಯತತ್ಪರರಾಗಬೇಕು. ಈ ಯೋಜನೆ ಬಿಡುಗಡೆಯಾಗುವ ಅನುದಾನವನ್ನು ಆದ್ಯತೆಗೆ ಅನುಗುಣವಾಗಿ ಕ್ರಿಯಾಯೋಜನೆ ರೂಪಿಸಿ, ಸಮರ್ಪಕವಾಗಿ ಖರ್ಚು ಮಾಡುವಂತೆ ಸೂಚಿಸಿದರು.

ರಸ್ತೆ ದುರಸ್ತಿಗೆ ಆದ್ಯತೆ: ಇತ್ತೀಚಿಗೆ ಸುರಿಯುತ್ತಿರುವ ಮಳೆಯಿಂದ ರಸ್ತೆಗಳು ಹಾಳಾಗಿವೆ. ಅವುಗಳ ದುರಸ್ತಿ ಮಾಡಲು ಹಾಗೂ ಅವಶ್ಯಕ ಕಾಮಗಾರಿ ಗುರುತಿಸಿ ಇಲಾಖೆಗೆ ನಿಗದಿಯಾಗಿರುವ ಅನುದಾನವನ್ನು ಆದ್ಯತೆ ಮೇರೆಗೆ ವಿನಿಯೋಗಿಸಬೇಕು ಎಂದು ಆರ್‌ಡಿಪಿಆರ್ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಡಿಸಿ ತಿಳಿಸಿದರು.

ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆ ಕಾರ್ಯಕ್ರಮ ಯೋಜನೆಯಡಿ ಕೈಗೊಳ್ಳಬಹುದಾದ ಅಭಿವೃದ್ಧಿ ಕಾಮಗಾರಿ, ಫಲಾನುಭವಿಗಳ ಆಯ್ಕೆ ಕುರಿತ ಅಗತ್ಯದ ಅನುಮೋದನೆ ಪಡೆದು ಶೇ.50 ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಇದರಲ್ಲಿ ವಿಳಂಬ ಮಾಡಬಾರದು ಎಂದು ತಾಕೀತು ಮಾಡಿದರು.

ಪ್ರಸಕ್ತ ಸಾಲಿನ ಯೋಜನೆಯಡಿ ಬಿಡುಗಡೆಯಾಗುವ ಅನುದಾನವನ್ನು ಪರಿಶಿಷ್ಟ ಜಾತಿ ಹಾಗೂ ಪಂಗಡದ ಅಭಿವೃದ್ಧಿಗಾಗಿ ಮೀಸಲಿಟ್ಟು ಪೂರ್ಣ ಪ್ರಮಾಣದಲ್ಲಿ ಬಳಕೆಯಾಗುವಂತೆ ನೋಡಿಕೊಳ್ಳಬೇಕು. ಫಲಾನುಭವಿಗಳ ಆಯ್ಕೆ ಸಮಯದಲ್ಲಿ ಅರ್ಹರನ್ನು ಆಯ್ಕೆಮಾಡಬೇಕು ಎಂದರು.

ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಹನುಮಂತರಾಯಪ್ಪ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಯಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಪುಷ್ಪ.ಜಿ.ರಾಯ್ಕರ್ ಸೇರಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net