ಕಾರ್ಮಿಕರ ಶ್ರಮದಿಂದ ದೇಶದ ಪ್ರಗತಿ

01M.D.R.5
ಮದ್ದೂರು ತಾಲೂಕಿನ ವಳಗೆರೆಹಳ್ಳಿ ಗ್ರಾಮದ ಹೊರ ವಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೃಷಿ ಕೂಲಿ ಕಾರ್ಮಿಕರನ್ನು ಅಭಿನಂದಿಸಲಾಯಿತು. ವಿ.ಸಿ. ಉಮಾಶಂಕರ್, ನವ್ಯಾರಾಜ್, ಕಾಡಪ್ಪ, ಚಿಕ್ಕೋನು, ರಾಮು ಇದ್ದರು.
Published on

ಮದ್ದೂರು: ಕಾರ್ಮಿಕರ ಶ್ರಮದಿಂದ ದೇಶದ ಪ್ರಗತಿ ಸಾಧ್ಯವಿದ್ದು, ಕಾರ್ಮಿಕರು ನಿತ್ಯ ದುಡಿಮೆ ಮಾಡುವ ಮೂಲಕ ಸಮೃದ್ಧ ದೇಶವನ್ನು ಕಟ್ಟುತ್ತಿದ್ದಾರೆ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಳಗೆರಹಳ್ಳಿ ವಿ.ಸಿ.ಉಮಾಶಂಕರ್ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲೂಕಿನ ವಳಗೆರಹಳ್ಳಿ ಗ್ರಾಮದ ಹೊರ ವಲಯದಲ್ಲಿ ಕಾರ್ಮಿಕ ದಿನಾಚರಣೆ ಅಂಗವಾಗಿ ಬುಧವಾರ ಕೃಷಿ ಕೂಲಿ ಕಾರ್ಮಿಕರನ್ನು ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಿಂದ ಅಭಿನಂದಿಸಿ ಮಾತನಾಡಿದರು.

ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು, ಕೂಲಿ ಕೆಲಸ ಮಾಡುವ ಕೂಲಿಕರರು, ವಲಸೆ ಕಾರ್ಮಿಕರು ಸೇರಿದಂತೆ ಇತರ ವಿಭಾಗದ ಕಾರ್ಮಿಕರು ನಿತ್ಯ ದುಡಿಮೆ ಮಾಡುವ ಮೂಲಕ ದೇಶ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಅವರ ಶ್ರಮ ಸಾರ್ಥಕವಾಗಿದ್ದು ಅದನ್ನು ಗೌರವಿಸುವುದು ಪ್ರತಿಯೊಬ್ಬರ ಆಧ್ಯ ಕರ್ತವ್ಯವಾಗಬೇಕು ಎಂದರು.

ಕಾರ್ಮಿಕ ನಾಯಕರಾದ ಕಾರ್ಲ್ ಮಾರ್ಕ್ಸ್, ಡಾ.ಬಿ.ಆರ್.ಅಂಬೇಡ್ಕರ್, ನೆಲ್ಸನ್ ಮಂಡೇಲಾ ಸೇರಿದಂತೆ ಹಲವು ಮಹನೀಯರು ಕಾರ್ಮಿಕರ ಧ್ವನಿಯಾಗಿದ್ದರು. ಜತೆಗೆ ಹಲವು ಹೋರಾಟ ಮಾಡಿ ಕಾನೂನನ್ನು ರೂಪಿಸಿ ಕಾರ್ಮಿಕರ ಹಕ್ಕುಗಳನ್ನು ಸಂವಿಧಾನಬದ್ಧವಾಗಿ ರಕ್ಷಿಸಿದ ಪರಿಣಾಮ ಕಾರ್ಮಿಕರಿಗೆ ವರದಾನವಾಗಿದೆ ಎಂದರು.

ರಾಜ್ಯದಲ್ಲಿ ಅಸಂಘಟಿತ ವಲಯದಲ್ಲಿ ಹಲವಾರು ಕಾರ್ಮಿಕರಿದ್ದು, ಅವರೆಲ್ಲರನ್ನೂ ಸಂಘಟನೆ ಮಾಡಬೇಕಾದಾಗ ಅಗತ್ಯತೆ ಇದೆ. ಸರ್ಕಾರ ಅವರಿಗೆ ಮೂಲ ಸೌಕರ್ಯ ಒದಗಿಸಬೇಕಾಗಿದೆ. ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಕೋಟ್ಯಂತರ ರೂ. ಹಣವಿದ್ದು ಕಾರ್ಮಿಕರ ಕಲ್ಯಾಣಕ್ಕೆ ಸಮರ್ಪಕವಾಗಿ ಬಳಸಬೇಕು. ಜತೆಗೆ ಕಾರ್ಮಿಕರಿಗೆ ನೀಡುತ್ತಿರುವ ವಿಮೆಯ ಹಣವನ್ನು ಹೆಚ್ಚಿಸಬೇಕು. ಕಾರ್ಮಿಕರಿಗೆ ಅಪಘಾತವಾದ ಸಂದರ್ಭದಲ್ಲಿ ಹೆಚ್ಚಿನ ಪರಿಹಾರ ನೀಡಬೇಕು. ಇದರೊಂದಿಗೆ ಮಾಸಾಸನವನ್ನು ಸರ್ಕಾರ ಹೆಚ್ಚು ಮಾಡಿ ಕಾರ್ಮಿಕರ ಜೀವನವನ್ನು ಹಸನು ಮಾಡಬೇಕು ಎಂದು ಒತ್ತಾಯಿಸಿದರು.

ಕೃಷಿ ಕೂಲಿ ಕಾರ್ಮಿಕರಾದ ವಳಗೆರೆಹಳ್ಳಿ ಕಾಡಪ್ಪ, ಚಿಕ್ಕೋನು, ರಾಮು ಸೇರಿದಂತೆ ಇತರರನ್ನು ಅಭಿನಂದಿಸಲಾಯಿತು. ಮುಖಂಡರಾದ ವಿ.ಸಿ.ಗಂಗಾಧರ್, ವಿ.ಸಿ.ಪುರುಷೋತ್ತಮ್, ನವ್ಯಾ ರಾಜ್, ಸಿ.ಜಿ.ಖುಷಿ ಗೌಡ, ಸಿ.ಕೆ.ಶಶಿಕಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net