ಸಮೀಕ್ಷೆ ವಿರೋಧಿಸಿದ ಬಿಜೆಪಿಗೆ ಸರ್ವೇ ಪ್ರಗತಿಯೇ ಉತ್ತರ

minister Madhu Bangarappa
Published on

ಶಿವಮೊಗ್ಗ: ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ವಿರೋಧಿಸಿದ ಬಿಜೆಪಿಗೆ ಶಿಕ್ಷಕರೇ ಉತ್ತರ ನೀಡಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ತಿರುಗೇಟು ನೀಡಿದರು.

ಸಮೀಕ್ಷೆಯನ್ನು ವಿರೋಧಿಸುತ್ತಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ನಾಚಿಗೆ ಆಗಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.

ಸಮೀಕ್ಷೆಗೆ ಯಾರೂ ಸಹಕರಿಸಬೇಡಿ ಎಂದು ಬಿಜೆಪಿಯವರು ಅಪಪ್ರಚಾರ ಮಾಡಿದ್ದರು. ಸಮೀಕ್ಷೆಯಿಂದ ಡೇಟಾ ಕದಿಯುತ್ತಾರೆ. ರೇಷನ್ ಕಾರ್ಡ್ ರದ್ದು ಮಾಡುತ್ತಾರೆಂದು ಸುಳ್ಳು ಹೇಳಿದರು. ಸಮೀಕ್ಷೆ ವಿರೋಧಿಸುವ ಬಿಜೆಪಿಯವರು ನಿಜವಾದ ದೇಶದ್ರೋಹಿಗಳು. ಹಾಗಾಗಿ ಸಮೀಕ್ಷೆಗೆ ವಿರೋಧ ಮಾಡುವರನ್ನು, ದಾರಿ ತಪ್ಪಿಸುವವರ ವಿರುದ್ಧ ಸುಮೋಟೊ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯಾದ್ಯಂತ 1.60 ಲಕ್ಷ ಶಿಕ್ಷಕರನ್ನು ಸಮೀಕ್ಷೆಗೆ ನಿಯೋಜಿಸಲಾಗಿದೆ. ಸೆ.22ಕ್ಕೆ ಸಮೀಕ್ಷೆ ಆರಂಭಗೊಂಡಿದ್ದರೂ ತಾಂತ್ರಿಕ ಕಾರಣದಿಂದ ಸಮೀಕ್ಷೆ ಪ್ರಗತಿ ಸಾಧ್ಯವಾಗಲಿಲ್ಲ. ಸೆ.26ಕ್ಕೆ ಗಣತಿ ಕಾರ್ಯ ಟೇಕಾಫ್ ಆಗಿದ್ದು, ರಾಜ್ಯದಲ್ಲಿ ಕಳೆದ ಐದು ದಿನದಲ್ಲೇ ಶೇ.56ರಷ್ಟು ಪೂರ್ಣಗೊಳಿಸಲಾಗಿದೆ. ನಿಗದಿತ ಅವಧಿಯೊಳಗೆ ಪೂರ್ಣ ಪ್ರಮಾಣದಲ್ಲಿ ಗಣತಿ ಪೂರ್ಣಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಂವಿಧಾನದ ಪೀಠಿಕೆಯನ್ನು ಓದಿ ಪ್ರಮಾಣ ಮಾಡಿದಂತೆ ಶಿಕ್ಷಕರು ಗಣತಿ ಕಾರ್ಯವನ್ನು ಉತ್ತಮವಾಗಿ ನಿಭಾಯಿಸುತ್ತಿದ್ದಾರೆ. ಇದು ಕೇವಲ ಸಮೀಕ್ಷೆ ಅಲ್ಲ, ಸಂವಿಧಾನವನ್ನು ಎತ್ತಿಹಿಡಿಯುವ ಮತ್ತು ಡಾ. ಬಿ.ಆರ್.ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವ ಕೆಲಸವಾಗಿದೆ. ಅವಧಿಗೂ ಮೊದಲೇ ಸಮೀಕ್ಷೆ ಪೂರ್ಣಗೊಳಿಸಿದ ಶಿಕ್ಷಕರಿಗೆ ಸನ್ಮಾನ ಮಾಡಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net