

ಶಿರಸಿ: ಪ್ರತಿಯೊಬ್ಬರು ದಿನವೂ ಸಂಧ್ಯಾ ಕಾಲದಲ್ಲಿ ಪೂಜೆ, ಸ್ತೋತ್ರ ಪಠಣ, ಪ್ರಾಣಾಯಾಮ, ಯೋಗಾಸನ ಮಾಡಬೇಕು. ಇದರಿಂದ ವ್ಯವಹಾರ, ಆರೋಗ್ಯ ಎಲ್ಲವೂ ಪ್ರಗತಿ ಸಾಧಿಸುತ್ತದೆ ಎಂದು ಸೋಂದಾ ಸ್ವರ್ಣವಲ್ಲೀ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿ ನುಡಿದರು.
ಅವರು ಸ್ವರ್ಣವಲ್ಲೀಯಲ್ಲಿ ಚಿನ್ನಾಪುರ ಸೀಮೆಯ ಮೇಲ್ತರ್ಪ, ಕೆಳತರ್ಪಿನ ಶಿಷ್ಯ ಭಕ್ತರು ಸಲ್ಲಿಸಿದ ಗುರು ಸೇವೆ ಸ್ವೀಕರಿಸಿ ಆಶೀರ್ವಚನ ನುಡಿದರು.
ಬಹಳಷ್ಟು ಜನರಿಗೆ ಅವರ ಆರೋಗ್ಯ ಹಾಳಾಗಲು ಸಂಧ್ಯಾ ಕಾಲದಲ್ಲಿ ದೇವರ ಪೂಜೆ, ಸ್ತೋತ್ರ ಪಠಣ, ಸಹಸ್ರನಾಮ, ಪ್ರಾಣಾಯಾಮ, ಯೋಗಾಸನ ಮಾಡದೇ ಇರುವದೇ ಕಾರಣ. ಪ್ರಾಣಾಯಾಮ, ಆಸನ, ಪೂಜೆ ದಿನದ ಎರಡೂ ಕಾಲದಲ್ಲಿ ಮಾಡಬೇಕು ಎಂದರು.
ಸೂರ್ಯೋದಯ, ಸೂರ್ಯಸ್ತದ ಕಾಲ ದೇವರ ಪೂಜೆ, ಜಪ, ಅನುಷ್ಠಾನಕ್ಕೆ ಪ್ರಶಸ್ತವಾದ ಕಾಲ. ಈ ವೇಳೆಯಲ್ಲಿ ಪೂಜೆ, ಸ್ತೋತ್ರ ಪಠಣ, ಪ್ರಾಣಾಯಾಮ, ಯೋಗಾಸನ ಮಾಡಿದರೆ ಹೆಚ್ಚು ಫಲ ಎಂದರು.
ಪ್ರತಿಯೊಂದು ಜೀವಿಗಳ ಮನಸ್ಸೂ ಗಾಢ ನಿದ್ರೆಯಲ್ಲಿ ಪರಮಾತ್ಮನ ಸಾನ್ನಿಧ್ಯಕ್ಕೆ ಹೋಗುತ್ತವೆ. ಗಾಢ ನಿದ್ದೆಗೆ ಸಂಧ್ಯಾ ಕಾಲದ ದೇವರ ಧ್ಯಾನ ನೆರವಾಗುತ್ತದೆ. ದಿನದ 24ಗಂಟೆಯಲ್ಲಿ 6 ಗಂಟೆ ನಿದ್ದೆ ಬಂದರೆ ಸಾಕು. ಅದರಲ್ಲಿ 2 ತಾಸಾದರೂ ಗಾಢವಾದ ನಿದ್ದೆ ಬೇಕು.
ಆ ನಿದ್ದೆಗೆ ಹೋಗದೇ ಇದ್ದರೆ ಮಾನಸಿಕ ದೈಹಿಕ ಆರೋಗ್ಯ ಹದಗೆಡುತ್ತದೆ. ಗಾಢ ನಿದ್ದೆಗೆ ಹೋಗಲು ಸಂಧ್ಯಾ ಕಾಲದ ದೇವರ ಧ್ಯಾನ, ಸ್ಮರಣೆ ಮಾಡಬೇಕು ಎಂದರು.
ದತ್ತಾತ್ರೇಯ ಹೆಗಡೆ ಕಣ್ಣಿಪಾಲ್, ನಾರಾಯಣ ಹೆಗಡೆ ಬೀಗಾರ, ತಿಮ್ಮಣ್ಣ ಭಟ್ಟ ನಡಿಗೆಮನೆ, ರವೀಂದ್ರ ಕೋಮಾರ್ ಸೂತ್ರೆಮನೆ, ಶ್ರೀಪಾದ ಭಟ್ಟ ಕಳಚೆ, ಆರ್.ಎಸ್.ಹೆಗಡೆ ಭೈರುಂಬೆ ಇತರರು ಇದ್ದರು.