

ಮಡಿಕೇರಿ: ರಾಜ್ಯ ಸಹಕಾರ ಮಹಾಮಂಡಳದ ಪ್ರಮುಖ ಸಂಪನ್ಮೂಲವಾದ ಸಹಕಾರ ಶಿಕ್ಷಣ ನಿಧಿ ಸಂಗ್ರಹದಲ್ಲಿ ಜಿಲ್ಲೆಯು ಶೇ.೧೦೦ ರ?್ಟು ಪ್ರಗತಿ ಸಾಧಿಸಿ ಇತರ ಜಿಲ್ಲೆಗಳಿಗೆ ಮಾದರಿಯಾಗಿದೆ ಎಂದು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎ.ಕೆ.ಮನುಮುತ್ತಪ್ಪ ತಿಳಿಸಿದರು.
ನಗರದ ಪೆನ್‌ಶನ್ ಲೇನ್‌ನಲ್ಲಿನ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನ ೫೫ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಕಾಲಿಕ ಮಳೆ ಹಾಗೂ ಕರೊನಾ ಹಿನ್ನಲೆಯಲ್ಲಿ ಜಿಲ್ಲೆಯ ಸಹಕಾರಿಗಳು ಹಲವಾರು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಸಹಕಾರಿಗಳ ಕೋರಿಕೆಗಳಿಗೆ ತಕ್ಕಂತಹ ವೇದಿಕೆಗಳನ್ನು ಕಲ್ಪಿಸುವಲ್ಲಿಯೂ ತೊಡಕುಂಟಾಗುತ್ತಿದೆ. ಆ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ವಿನೂತನವಾದ ಕಾರ್ಯಕ್ರಮ ರೂಪಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ರಾಜ್ಯ ಸಹಕಾರ ಮಹಾಮಂಡಳದ ಪ್ರಮುಖ ಸಂಪನ್ಮೂಲವಾದ ಸಹಕಾರ ಶಿಕ್ಷಣ ನಿಧಿಯನ್ನು ಸಹಕಾರ ಸಂಘಗಳ ಕಾನೂನು ಮತ್ತು ನಿಬಂಧನೆಗಳು ಹಾಗೂ ನಿಯಮಗಳ ಪ್ರಕಾರ ಪ್ರತಿಯೊಂದು ಸಹಕಾರ ಸಂಘವು ಗಳಿಸಿದ ಲಾಭದಲ್ಲಿ ಶೇ.೨ ರ?್ಟು ಸಹಕಾರ ಶಿಕ್ಷಣ ನಿಧಿಯನ್ನು ಪಾವತಿಸಬೇಕಾಗಿದೆ. ಆ ನಿಟ್ಟಿನಲ್ಲಿ ೧೪೭ ಸಂಘಗಳಿಂದ ರೂ.೫೭ ಲಕ್ಷ ಹಣವನ್ನು ಸಂಗ್ರಹಿಸಲಾಗಿದೆ. ಜಿಲ್ಲೆಯ ಸಹಕಾರ ಚಳುವಳಿಗೆ ಪೂರಕವಾಗಿ ಯೂನಿಯನ್ ವತಿಯಿಂದ ತ್ರೈಮಾಸಿಕ ಪತ್ರಿಕೆ ’ಸಹಕಾರ ಆಂದೋಲನ’ ಪತ್ರಿಕೆಯನ್ನು ಹೊರತಂದಿದೆ. ಇದರಲ್ಲಿ ಸಹಕಾರಿಗಳ ಕಾರ್ಯವೈಖರಿ ಹಾಗೂ ಕೃಷಿಗೆ ಸಂಬಂಧಿಸಿದ ಹಲವಾರು ಮಾಹಿತಿ ನೀಡಲಾಗುತ್ತಿದೆ. ಇದರಿಂದ ಕೃಷಿಕರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಸಹಕಾರಿಯಾಗುತ್ತದೆ. ಆ ನಿಟ್ಟಿನಲ್ಲಿ ಸಹಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಚಂದಾದಾರರಾಗಿ ಯಶಸ್ವಿ ಮುನ್ನಡೆಗೆ ಸಹಕರಿಸುವಂತೆ ಮನುಮುತ್ತಪ್ಪ ತಿಳಿಸಿದರು.
ಸಹಕಾರಿ ಯೂನಿಯನ್ ವತಿಯಿಂದ ಶಿಕ್ಷಣ ತರಬೇತಿ, ಆಡಳಿತ ಮಂಡಳಿ ಸದಸ್ಯರಿಗೆ ತಮ್ಮ ಹಕ್ಕು ಮತ್ತು ಜವಾಬ್ದಾರಿ ಹಾಗೂ ಕಾನೂನು ಕಾಯ್ದೆಗಳ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮ ನಡೆಸಲಾಗುತ್ತಿದೆ ಪ್ರತಿಯೊಬ್ಬರೂ ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಅವರು ಹೇಳಿದರು.
ಸಭೆಯಲ್ಲಿ ಆಡಳಿತ ಮಂಡಳಿ ವರದಿ, ೨೦೨೦-೨೧ ನೇ ಸಾಲಿನ ಲೆಕ್ಕಪರಿಶೋಧನಾ ವರದಿ, ನಿವ್ವಳ ಲಾಭ ಹಂಚಿಕೆ, ದವಸ ಭಂಡಾರಗಳ ಪುನಶ್ಚೇತನ ಹೀಗೆ ಹಲವಾರು ವಿ?ಯಗಳ ಬಗ್ಗೆ ಚರ್ಚಿಸಲಾಯಿತು. ಇದೇ ಸಂದರ್ಭದಲ್ಲಿ ಸ್ವರ್ಗಸ್ಥರಾದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು.
ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ನ ಸಿಇಒ ಯೋಗೇಂದ್ರ ನಾಯಕ್, ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ನ ನಿರ್ದೇಶಕರಾದ ಕೊಡಪಾಲು ಗಣಪತಿ, ಎನ್.ಎ.ರವಿಬಸಪ್ಪ, ಯೂನಿಯನ್‌ನ ವ್ಯವಸ್ಥಾಪಕಿ ಆರ್.ಮಂಜುಳ, ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ವರ್ಗದವರು ಇತರರು ಇದ್ದರು.