

ತುಮಕೂರು: ನಗರವಾಸಿಗಳ ನೆಮ್ಮದಿ ಕೆಡಿಸಿರುವ ಸ್ಮಾರ್ಟ್‌ಸಿಟಿ ಯೋಜನೆ ಕಾಮಗಾರಿಗಳ ಬಗ್ಗೆ ಜನಾಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಗತಿ ಪರಿಶೀಲನೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಮಾಧುಸ್ವಾಮಿ, ಸ್ಮಾರ್ಟ್‌ಸಿಟಿ ಕಾಮಗಾರಿ ಬಗ್ಗೆ ಸಾಕಷ್ಟು ದೂರುಗಳು ಕೇಳಿಬರುತ್ತಿದೆ, ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಕಾಮಗಾರಿಗಳನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸದಿದ್ದರೆ ಸಂಬಂಧಪಟ್ಟವರಿಗೆ ಗ್ರಹಚಾರ ಬಿಡುಸುತ್ತೇನೆ ಎಂದು ಗುಡುಗಿದರು.
ಕಾಮಗಾರಿ ಆರಂಭಿಸಲು ಕಾರ್ಯಾದೇಶ ನೀಡಿ ಎರಡು ವರ್ಷವಾದರೂ ಕಾಮಗಾರಿ ಪೂರ್ಣಗೊಂಡಿಲ್ಲ, ಅಭಿವೃದ್ಧಿಯ ಹೆಸರಿನಲ್ಲಿ ನಿಧಾನಗತಿಯಲ್ಲಿ ಕೆಲಸ ಮಾಡಿದರೆ ಸಹಿಸಿಕೊಂಡಿರಲು ಸಾಧ್ಯವಿಲ್ಲ, ಇಷ್ಟು ವರ್ಷವಾದರೂ ನೀವು ಆರಂಭಿಸಿರುವ ಒಂದು ಕಾಮಗಾರಿಯಾದರೂ ಜನರ ಸೇವೆಗೆ ಕೊಟ್ಟಿದ್ದೀರ ಗುತ್ತಿಗೆದಾರರ ಪರವಾಗಿ ನೀವಿದ್ದರೆ ಸಹಿಸಿಕೊಂಡಿರುವುದಿಲ್ಲ ಎಂದು ಹರಿಹಾಯ್ದರು.
ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಆರಂಭಿಸಿರುವ ಎಲ್ಲ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದ ಸಚಿವರು, ಮಾ.31ರೊಳಗಾಗಿ ಕಾಮಗಾರಿ ಪೂರ್ಣಗೊಳಿಸಬೇಕು. ಸಂಬಂಧಿಸಿದ ಗುತ್ತಿಗೆದಾರರಿಗೆ ಸೂಚನೆ ನೀಡಿ ಕಾಲಾಕಾಲಕ್ಕೆ ಪರಿಶೀಲಿಸಿ ಕಾಮಗಾರಿ ಮುಗಿಸಬೇಕು. ಇದಾಗದಿದ್ದರೆ ನಿಮ್ಮನ್ನು ಜಿಲ್ಲೆಯಿಂದ ಕಳುಹಿಸಬೇಕಾಗುತ್ತದೆ ಎಂದು ಸ್ಮಾರ್ಟ್‌ಸಿಟಿ ಎಂಡಿ ರಂಗಸ್ವಾಮಿಗೆ ತರಾಟೆಗೆ ತೆಗೆದುಕೊಂಡರು.
ಅಮಾನಿಕೆರೆಯಲ್ಲಿ ಕಾಮಗಾರಿ ಪೂರ್ಣವಾಗಿದೆ ಎಂಬ ಅಧಿಕಾರಿಗಳ ಸುಳ್ಳು ಮಾಹಿತಿಗೆ ಕೆಂಡಾಮಂಡಲರಾದ ಸಚಿವರು, ಕೈಗೊಂಡಿರುವ ಎಲ್ಲ ಕಾಮಗಾರಿ ಪೂರ್ಣಗೊಳಿಸಿದ ನಂತರವೇ ಪೂರ್ಣಗೊಂಡಿದೆ ಎನ್ನಬೇಕು. ಅಮಾನಿಕೆರೆಗೆ ಸಂಪರ್ಕಿಸುವ ರಾಜಗಾಲುವೆಗಳ ಒತ್ತುವರಿ ತೆರವುಗೊಳಿಸಿ, ಅವರ ವಿರುದ್ಧ ಕೇಸ್ ದಾಖಲಿಸಬೇಕು. ಅಮಾನಿಕೆರೆಗೆ ರಾಜಗಾಲುವೆಗಳಿಂದ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್‌ಗೆ ಸೂಚಿಸಿದರು. ಮೇಯರ್ ಫರೀದಾಬೇಗಂ, ಉಪ ಮೇಯರ್ ಶಶಿಕಲಾ ಹಾಗೂ ಅಧಿಕಾರಿಗಳು ಇದ್ದರು.
ಬಜೆಟ್‌ಗೆ ಸೇರ್ಪಡೆಗೆ ಮಾಹಿತಿ : 2021-22ನೇ ಸಾಲಿನ ಆಯವ್ಯಯದಲ್ಲಿ ತುಮಕೂರು ಜಿಲ್ಲೆಗೆ ಅಗತ್ಯವಿರುವ ಕಾರ್ಯಕ್ರಮಗಳ ಸೇರ್ಪಡೆ ಬಗ್ಗೆ ಅಧಿಕಾರಿಗಳಿಂದ ಸಚಿವ ಜೆ.ಸಿ.ಮಾಧುಸ್ವಾಮಿ ಮಾಹಿತಿ ಪಡೆದರು. 10 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಗ್ರಾಪಂಗಳನ್ನು ಪಟ್ಟಣ ಪಂಚಾಯಿತಿಗಳನ್ನಾಗಿ ಮೇಲ್ದರ್ಜೆಗೇರಿಸುವುದು, ಜಿಲ್ಲಾ ಆಸ್ಪತ್ರೆಯಲ್ಲಿ ಪಿಜಿ ಕೋರ್ಸ್, ತಾಲೂಕು ಆಸ್ಪತ್ರೆಯಲ್ಲಿ ವೈರಲ್ ಲ್ಯಾಬ್ ಸ್ಥಾಪನೆ, ಅಗತ್ಯವಿರುವ ಕಡೆ ಪೊಲೀಸ್ ಠಾಣೆ, ಪ್ರವಾಸಿ ಮಂದಿರಗಳ ನಿರ್ಮಾಣ ಮತ್ತಿತರರ ಕಾಮಗಾರಿಗಳ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು.
ಬಾರ್‌ಲೈನ್ ರಸ್ತೆಯನ್ನು ಮಾದರಿಯಾಗಿ ಮಾಡುತ್ತೇವೆ ಎಂದು ಕಳೆದೆರಡು ವರ್ಷದಿಂದಲೂ ಜನರಿಗೆ ತೊಂದರೆ ಕೊಟ್ಟು ದುಭಾರಿ ಹಣದಲ್ಲಿ ನಿರ್ಮಿಸಿರುವ ರಸ್ತೆ ಜನರಿಗೆ ತೊಂದರೆ ನೀಡುತ್ತಿದೆ, ಮೊದಲಿದ್ದ ರಸ್ತೆಯೇ ಹೆಚ್ಚು ಅನುಕೂಲವಾಗಿತ್ತು. ರಸ್ತೆ ಕಿರಿದಾಗಿದೆ, ಪಾರ್ಕಿಂಗ್ ದೊಡ್ಡದಾಗಿ ಮಾಡಲಾಗಿದೆ, ಸ್ಥಳೀಯ ವ್ಯಾಪರಸ್ಥರಿಗೆ ತೊಂದರೆಯಾಗಿದ್ದು ಕೂಡಲೇ ಸರಿಪಡಿಸಬೇಕು. ಜಿ.ಎಸ್.ಬಸವರಾಜು ಸಂಸದ ಸ್ಮಾರ್ಟ್‌ಸಿಟಿ ಕಾಮಗಾರಿ ಆರಂಭವಾಗಿ 3 ವರ್ಷವಾದರೂ ಮುಗಿದಿಲ್ಲ. ಆದರೂ, ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಂಡಿಲ್ಲ, ಹಣ ಕೂಡ ಖರ್ಚು ಮಾಡುತ್ತಿಲ್ಲ, ಹಣ ಖರ್ಚಾಗದಿದ್ದರೆ ಕಾಮಗಾರಿ ಶೇ.90 ಪೂರ್ಣವಾಗಿದೆ ಎಂದು ವರದಿ ನೀಡುತ್ತೀರ. ನನ್ನ ದಾರಿ ತಪ್ಪಿಸಲು ಸಾಧ್ಯವಿಲ್ಲ, ವಸ್ತುನಿಷ್ಟ ವರದಿ ನೀಡಬೇಕು. ಹಾಳಾದ ರಸ್ತೆಯಿಂದ ಜನರಿಗೆ ತೊಂದರೆಯಾದರೆ ಅಧಿಕಾರಿಗಳನ್ನೇ ಹೊಣೆಯಾಗಿಸುತ್ತೇವೆ. ಜೆ.ಸಿ.ಮಾಧುಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವ ಸ್ಮಾರ್ಟ್‌ಸಿಟಿ ಕಾಮಗಾರಿಗೆ ಹೆಸರೇಳಿಕೊಂಡು ನಗರದಲ್ಲಿ 4 ಸಾವಿರ ಕೊಳಚೆ ಒಳಚರಂಡಿ(ಚೇಂಬರ್)ಗಳನ್ನು ತೆರೆದು ಕಾಮಗಾರಿ ಕೈಗೊಳ್ಳಲಾಗಿದೆ. ಇದರಿಂದ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ ತೊಂದರೆಯಾಗಿದೆ, ಅಪಾಯಕ್ಕೂ ಆಹ್ವಾನ ನೀಡುವಂತಿದ್ದು ಸಾರ್ವಜನಿಕರಿಂದ ದೂರುಗಳು ನಿರಂತರವಾಗಿ ಬರುತ್ತಿವೆ. ಸ್ಮಾರ್ಟ್ ಸಿಟಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಬೇಕು. ಜಿ.ಬಿ.ಜ್ಯೋತಿಗಣೇಶ್ ಶಾಸಕ