

ಅರಸೀಕೆರೆ: ಸತತ ಪರಿಶ್ರಮ ಹಾಗೂ ಪ್ರಾಮಾಣಿಕತೆಯಿಂದ ಮಾತ್ರವೇ ಸಂಘ ಸಂಸ್ಥೆಗಳನ್ನು ಪ್ರಗತಿಪಥದತ್ತ ಕೊಂಡೊಯ್ಯಲು ಸಾಧ್ಯ ಎಂದು ವಾಸವಿ ಪೀಠದ ಎರಡನೇ ಪೀಠಾಧ್ಯಕ್ಷ ಶ್ರೀ ಸಚ್ಚಿದಾನಂದ ಸರಸ್ವತಿ ಗುರೂಜಿ ಹೇಳಿದರು.
ನಗರದ ವೆಂಕಟೇಶ್ವರ ಕಲಾ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಆರ್ಯವೈಶ್ಯ ಸೇವಾ ಸಹಕಾರ ಸಂಘದ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಹಳೇ ಬೇರು, ಹೊಸ ಚಿಗುರು ಕೂಡಿದರೆ ಮರ ಸೊಬಗು ಎನ್ನುವ ನಾಣ್ಣುಡಿಯಂತೆ ಹಿರಿಯರ ಸೇವಾಬದ್ಧತೆ, ಕಿರಿಯರ ನಿಷ್ಠೆಯಿಂದಾಗಿ ಬೆರಳೆಣಿಕೆ ಸದಸ್ಯರ ಸಹಕಾರದಿಂದ ಅರಂಭಗೊಂಡಿದ್ದ ಸೊಸೈಟಿ ಹೆಮ್ಮರವಾಗಿ ಬೆಳೆದಿದ್ದು ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ಪರಿಶ್ರಮ ಹಾಗೂ ಪ್ರಾಮಾಣಿಕತೆಯಿಂದ ಮಾತ್ರವೇ ಯಶಸ್ಸು ಸಾಧ್ಯವಾಗಿದ್ದು ಮತ್ತಷ್ಟು ಪ್ರಗತಿ ಸಾಧಿಸಲಿ ಎಂದು ಆಶಿಸಿದರು.
ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್‌ಕುಮಾರ್ ಮಾತನಾಡಿ, ಆರ್ಯವೈಶ್ಯ ಸಮಾಜ ರಾಜ್ಯದ ಉದ್ದಗಲಕ್ಕೂ ಸಹಕಾರ ಸಂಘ ಸ್ಥಾಪಿಸುವ ಮೂಲಕ ದುಡಿಯುವ ಕೈಗಳಿಗೆ ಸಾಲ ಸೌಲಭ್ಯ ನೀಡುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದರು.
ಸ್ಥಳೀಯ ಯೊಜನಾ ಪ್ರಾಧಿಕಾರದ ಅಧ್ಯಕ್ಷ ಹಾಗೂ ಉದ್ಯಮಿ ಬಿ.ಎಸ್.ಅರುಣ್‌ಕುಮಾರ್ ಮಾತನಾಡಿ, ಅರ್ಯವೈಶ್ಯ ಸಮಾಜ ಬಾಂಧವರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಜಾಗೃತರಾಗಬೇಕು ಎಂದರು.
ಆರ್ಯವೈಶ್ಯ ರಾಜ್ಯ ಘಟಕದ ಅಧ್ಯಕ್ಷ ಪಿ.ರವಿಶಂಕರ್, ಆರ್ಯವೈಶ್ಯ ಕೋ-ಆಪರೇಟೀವ್ ಸೊಸೈಟಿ ಅಧ್ಯಕ್ಷ ಮುರುಳೀಧರ್ ಮಾತನಾಡಿದರು. ಪ್ರತಿಭಾನ್ವಿತ ವಿದ್ಯಾರ್ಥಿಗಳು, ಪಿಗ್ಮಿ ಏಜೆಂಟರು, ನಿರ್ದೇಶಕರನ್ನು ಪುರಸ್ಕರಿಸಲಾಯಿತು. ವಾಸವಿ ಮಹಿಳಾ ಹಾಗೂ ಯುವತಿಯರು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಮನಸೂರೆಗೊಂಡವು. ಸಂಘದ ಉಪಾಧ್ಯಕ್ಷ ಅರುಣ್‌ಕುಮಾರ್, ನಗರಸಭೆ ಮಾಜಿ ಉಪಾಧ್ಯಕ್ಷ ಪಾರ್ಥಸಾರಥಿ, ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ವೆಂಕಟೇಶ್, ಕಿರಣ್, ಪ್ರಸನ್ನಕುಮಾರ್, ಬಾಲಚಂದ್ರ ರವಿಕುಮಾರ್, ಶ್ರೀಧರ್, ದೇವರಾಜ್, ಮಂಜುನಾಥ್ ಇನ್ನಿತರರು ಹಾಜರಿದ್ದರು.