ಶ್ರದ್ಧೆ-ಶಕ್ತಿಯಿಂದ ಕೆಲಸ ಮಾಡಿದರೆ ಪ್ರಗತಿ: ಎಂಎಲ್ ಸಿ ಡಾ.ಡಿ.ತಿಮ್ಮಯ್ಯ ಅಭಿಮತ

4
Published on

ಮೈಸೂರು: ಅಂಧಕಾರಕ್ಕೆ ಒಳಗಾಗದೆ ಮೂಢನಂಬಿಕೆಯಿಂದ ಹೊರಬಂದು ಶ್ರದ್ಧೆ, ಶಕ್ತಿಯಿಂದ ಕೆಲಸ ಮಾಡಿ ಪ್ರತಿಯೊಬ್ಬರೂ ಮುಂದೆ ಬರಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ ಹೇಳಿದರು.

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕರ್ನಾಟಕ ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಕಾಯಕ ಶರಣರ ಜಯಂತಿ ಉದ್ಘಾಟಿಸಿ ಮಾತನಾಡಿದರು.

ಸಂವಿಧಾನದಲ್ಲಿ ಸಮಾನತೆ, ಸೌಹಾರ್ದತೆ, ಭಾತೃತ್ವವನ್ನು ಪ್ರಜೆಗಳಿಂದ ಪ್ರಜೆಗಳಿಗಾಗಿ ಎಂಬ ಪ್ರಜಾ ಸರ್ಕಾರವನ್ನು ಡಾ. ಬಿ. ಆರ್. ಅಂಬೇಡ್ಕರ್ ಅವರು ಕೊಡುಗೆಯಾಗಿ ನೀಡಿದ್ದಾರೆ. ಅದೇ ರೀತಿ ವಚನಕಾರರು ನಮಗೆ ಕೊಟ್ಟಿರುವ ವಚನ, ಸಾಹಿತ್ಯಗಳಂಥ ಕೊಡುಗೆ ಅಪಾರವಾಗಿವೆ ಎಂದು ತಿಳಿಸಿದರು.

ಸಂವಿಧಾನದ ಕಳಕಳಿಯನ್ನು 900 ವರ್ಷಗಳ ಹಿಂದೆಯೇ ಬಸವೇಶ್ವರರು ಅಲ್ಲಮಪ್ರಭು ಅವರ ಸಾನ್ನಿಧ್ಯದ ಅನುಭವ ಮಂಟಪದಲ್ಲಿ ಈ ಎಲ್ಲ ಶರಣರು ನಮಗೆ ತಿಳಿಸಿದ್ದಾರೆ. ಸಂವಿಧಾನವನ್ನು ಉಳಿಸಿ ಬೆಳೆಸುತ್ತ ಸಾಗಬೇಕು. ಜತೆಗೆ ಬಸವೇಶ್ವರರು ಸಮಾಜವನ್ನು ಒಂದುಗೂಡಿಸುವ ಕೆಲಸವನ್ನು ಮಾಡಿದ್ದಾರೆ. ಅದನ್ನು ಪಾಲಿಸಬೇಕು, ಕುವೆಂಪು ಅವರ ಆಶಯದಂತೆ ಸರ್ವ ಜನಾಂಗದ ಶಾಂತಿಯ ತೋಟವಾಗಿ ಮಾಡಬೇಕು ಎಂದರು.

ತತ್ವ ಆಧಾರದ ಮೇಲೆ ಆಚರಣೆ

ಕೆಲವರು ಜಯಂತಿಗಳನ್ನು ಅವರ ಹುಟ್ಟುಹಬ್ಬವಾಗಿ ಆಚರಣೆ ಮಾಡುತ್ತೇವೆ. ಆದರೆ ಕಾಯಕ ಶರಣ ಜಯಂತಿಯನ್ನು ಒಂದು ತತ್ವದ ಆಧಾರದ ಮೇಲೆ ಆಚರಿಸುತ್ತಿದ್ದೇವೆ. ಇಡೀ ಜಗತ್ತಿಗೆ ಯಾವುದಾದರೂ ಬೆಳಕಿನ ರೂಪದಲ್ಲಿ ಮಾರ್ಗದರ್ಶನವನ್ನು ನೀಡುತ್ತದೆ ಎಂದರೆ ಅದೇ ಕಾಯಕ ತತ್ವ ಎಂದು ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಹೇಳಿದರು.

ಬಸವಣ್ಣ ಅವರು ಹೇಳಿದ ಕಾಯಕವೇ ಕೈಲಾಸ ಮಾತು ಇಂದಿಗೂ, ಮುಂದೆಯೂ ಪ್ರಸುತ್ತವಾಗಿ ಇರುತ್ತದೆ. ಸಾರ್ವಕಾಲಿಕ ಸತ್ಯವನ್ನು ಆಧಾರವಾಗಿ ಇಟ್ಟುಕೊಂಡು ಅದರಂತೆ ಜಯಂತಿಯನ್ನು ಆಚರಣೆ ಮಾಡಿದರೆ ಸಮಾನತೆಯನ್ನು ನೋಡಬಹುದು ಎಂದು ಹೇಳಿದರು.

ಈ ಜಗತ್ತಿನಲ್ಲಿ ನಾವೆಲ್ಲರೂ ಒಂದೇ ಎಂಬ ತತ್ವಕ್ಕೆ ತಲೆ ಬಾಗಬೇಕು. ಕಾಯಕ ಎಂಬುದು ದುಡಿದು ತಿನ್ನುವುದಕ್ಕೆ ಸೀಮಿತವಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಈ ಮೂಲಕ ಇತರರಿಗೆ ಮಾದರಿಯಾಗಿ ಮನುಷ್ಯ ಹುಟ್ಟಿದಕ್ಕೂ ಸಾರ್ಥಕವಾಗುತ್ತದೆ ಎಂದರು.

ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಇತಿಹಾಸದ ಚರಿತ್ರೆಯನ್ನು ಮರು ನಿರ್ಮಾಣ ಮಾಡಬೇಕು ಎಂಬ ನಿಟ್ಟಿನಲ್ಲಿ ಈ ರೀತಿಯ ಕಾರ್ಯಕ್ರಮವನ್ನು ನಡೆಸುತ್ತ ಬರುತ್ತಿದ್ದೇವೆ. ಇಂಥ ಐವರು ಮಹನೀಯರು ಬರೀ ಕರ್ನಾಟಕಕ್ಕೆ ಮಾತ್ರ ಸೀಮಿತವಾಗದೆ ಇಡೀ ದೇಶಕ್ಕೆ ಒಂದು ಹೊಸ ಮಾದರಿಯನ್ನು ಕೊಟ್ಟಿದ್ದಾರೆ ಎಂದು ತಿಳಿಸಿದರು.

101 ಶರಣರ ಚಿಂತನೆಗಳು ಮೌಢ್ಯತೆಯಿಂದ ಕೂಡಿದ ಭಾರತಕ್ಕೆ ಅಜ್ಞಾನಕ್ಕೇ ಸವಾಲನ್ನು ಹಾಕಿ ಒಂದು ದೊಡ್ಡ ಚರಿತ್ರೆಯನ್ನು ನೀಡಿ ಜ್ಞಾನಕ್ಕೆ ಸುಜ್ಞಾನಕ್ಕೆ ಮಾರ್ಗದರ್ಶಕರಾಗಿದ್ದಾರೆ ಎಂದು ಹೇಳಿದರು.

ಜಯಂತಿಗಳು ಜಾತಿಗಳಾಗಿ ಮಾರ್ಪಟ್ಟರೆ ಅಪಾಯ

ಜಯಂತಿಗಳನ್ನು ಸಾಮರಸ್ಯ ಮತ್ತು ಸಮಾನತೆ ಉದ್ದೇಶದಿಂದ ಆಚರಿಸುತ್ತ ಬರುತ್ತಿದ್ದೇವೆ. ಜಯಂತಿಗಳು ಜಾತಿಗಳಾಗಿ ಮಾರ್ಪಟ್ಟರೆ ದೇಶಕ್ಕೆ, ನಾಡಿಗೆ ಅಪಾಯವಾಗುತ್ತದೆ ಎಂದು ಉರಿಲಿಂಗಪೆದ್ದಿ ಮಹಾಸಂಸ್ಥಾನ ಮಠದ ಶ್ರೀಜ್ಞಾನಪ್ರಕಾಶ ಸ್ವಾಮೀಜಿ ಎಚ್ಚರಿಸಿದರು.

ಇತ್ತೀಚಿನ ದಿನಗಳಲ್ಲಿ ಜ್ಞಾನದ ಕಡೆ ಮುಖ ಮಾಡದೆ ಅಜ್ಞಾನದ ಕಡೆ ಮುಖ ಮಾಡುತ್ತಿದ್ದೇವೆ. ಜ್ಞಾನದ ಕಡೆ ಪ್ರತಿಯೊಬ್ಬರೂ ಮುಖ ಮಾಡುವುದರಿಂದ ದೇಶ ಪ್ರಬುದ್ಧ ಭಾರತವಾಗುತ್ತದೆ. ಇಂಥ ಕಾಯಕ ಶರಣರ ಜಯಂತಿಯನ್ನು ಮಾಡುವುದರಿಂದ ಜ್ಞಾನದ ಕಡೆ ಮುಖ ಮಾಡಬಹುದು. ಅಜ್ಞಾನದಿಂದ ದೂರ ಇರಬಹುದು ಎಂದರು.

ಶರಣ ಜಯಂತಿಗಳು ವಿಚಾರ ವಿಜ್ಞಾನ ಜಯಂತಿಯಾಗಿ ಇಡೀ ಕರ್ನಾಟಕಕ್ಕೆ ಕೊಡುಗೆ ಕೊಟ್ಟಿರುವಂಥ ಮಹಾ ಶರಣರಾಗಿದ್ದಾರೆ. ಯಾವುದೇ ಕಾರ್ಯಕ್ರಮ ಎನ್ನದೆ ಎಲ್ಲರೂ ಸಮಾನತೆಯಿಂದ ಸಾಮರಸ್ಯವಾಗಿ ಬದುಕಬೇಕು ಎಂದು ಹೇಳಿದರು.

ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ನಾರಾಯಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್, ಕನ್ನಡ ಕಲಾಕೂಟದ ಎಂ. ಚಂದ್ರಶೇಖರ್, ಮುಖಂಡರಾದ ಯಡತೊರೆ ನಿಂಗರಾಜು, ಸೋಮಯ್ಯ ಮಲೆಯೂರು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net