

ಬೆಂಗಳೂರು: ತ್ಯಾಜ್ಯ ಸಂಗ್ರಹಣೆಯಲ್ಲಿ ನಾಗರಿಕರ ಜವಾಬ್ದಾರಿ ಎಷ್ಟು ಮುಖ್ಯವೋ ಅಂತೆಯೇ ಸಂಗ್ರಹಣಾ ಸಿಬ್ಬಂದಿಯ ಜವಾಬ್ದಾರಿ ಕೂಡ ಅಷ್ಟೇ ಮುಖ್ಯ. ಈ ನಿಟ್ಟಿನಲ್ಲಿ ಎಲ್ಲರೂ ಸಮರ್ಥವಾಗಿ ಕಾರ್ಯ ನಿರ್ವಹಿಸುವುದು ಅಗತ್ಯ ಎಂದು ಆಡುಗೋಡಿ ವಾರ್ಡ್ನ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಸಂತೋಷ್ ಕುಮಾರ್ ಹೇಳಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ 'ಸಾಹಸ್' ಸ್ವಯಂಸೇವಾ ಸಂಸ್ಥೆಯ ಸಹಯೋಗದಲ್ಲಿ ಸದಾ ಶುಚಿತ್ವ ಯೋಜನೆಯ ಭಾಗವಾಗಿ ನಗರದ ಆಡುಗೋಡಿ ವಾರ್ಡ್ನ ಈಜಿಪುರದ ಆಡುಗೋಡಿ ಹಾಗೂ ನೀಲಸಂದ್ರ ವಾರ್ಡ್ನ ಎಲ್ಲಾ ತ್ಯಾಜ್ಯ ಸಂಗ್ರಹಣಾ ಸಿಬ್ಬಂದಿಗೆ ಆಯೋಜಿಸಲಾಗಿದ್ದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಶ್ರೀ ಕೋದಂಡರಾಮ ಸ್ವಾಮಿ ಸಮುದಾಯ ಭವನದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಾಹಸ್ ಸ್ವಯಂ ಸೇವಾ ಸಂಸ್ಥೆಯು ಹಲವು ವರ್ಷಗಳಿಂದ ತ್ಯಾಜ್ಯ ನಿರ್ವಹಣೆಯಲ್ಲಿ ಸಮುದಾಯ ಹಂತದಲ್ಲಿ ಹಲವಾರು ಜಾಗೃತಿ ಮೂಡಿಸುವುದರ ಮೂಲಕ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಾಹಸ್ ಸಂಸ್ಥೆಯ ಯೋಜನಾಧಿಕಾರಿಗಳಾದ ಅಶ್ವಿನಿರಾವ್ ಮತ್ತು ಅರ್ಜುನ್ ಕುಮಾರ್, ಸಂಸ್ಥೆಯ ಕುರಿತು ಮಾಹಿತಿ ನೀಡಿದರು. "ಸಾಹಸ್ ಒಂದು ಸ್ವಯಂ ಸೇವಾ ಸಂಸ್ಥೆಯಾಗಿದ್ದು ಕಳೆದ 20 ವರ್ಷಗಳಿಂದ ಘನ ತ್ಯಾಜ್ಯ ನಿರ್ವಹಣೆಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಘನತ್ಯಾಜ್ಯನಿರ್ವಹಣಾ 2016ರ ನಿಯಮದ ಅನ್ವಯ ವಿಕೇಂದ್ರೀಕೃತ ತ್ಯಾಜ್ಯ ನಿರ್ವಹಣೆ ಹಾಗೂ ತ್ಯಾಜ್ಯದ ಮೂಲದ ವಿಂಗಡಣೆಯ ಪರಿಕಲ್ಪನೆಯನ್ನು ಆಧರಿಸಿದ ಕಾರ್ಯಕ್ರಮಗಳ ಮೇಲೆ ಒಟ್ಟು 200 ಗ್ರಾಮ ಪಂಚಾಯ್ತಿ ಹಾಗೂ 8 ಮಹಾನಗರಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ' ಎಂದು ತಿಳಿಸಿದರು.
ಸಾಹಸ್ ಸಂಸ್ಥೆಯ ಯೊಜನಾ ನಿರ್ವಾಹಕರಾದ ಆಯೀಷಾ ಖಾನಂ ಅವರು, ಸುಸ್ಥಿರ ತ್ಯಾಜ್ಯ ನಿರ್ವಹಣೆ ಹಾಗೂ ತ್ಯಾಜ್ಯ ನಿರ್ವಣೆಯಲ್ಲಿ ಸಂಗ್ರಹಣಾ ಸಿಬ್ಬಂದಿಯ ಜವಾಬ್ದಾರಿಯ ಬಗ್ಗೆ ತರಬೇತಿ ಕಾರ್ಯಾಗಾರವನ್ನು ಇದೇ ವೇಳೆ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಅನೇಕ ಚಟುವಟಿಕೆಗಳನ್ನು ಕೊಡುವುದರ ಮೂಲಕ ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಆಡುಗೋಡಿ ವಾರ್ಡ್ನ ಆರೋಗ್ಯ ನಿರೀಕ್ಷಕರಾದ ದುರ್ಗಾ ಪ್ರಸಾದ್, ಮುತ್ತುರಾಜ್, ಆಡುಗೋಡಿ ಮಾರ್ಷಲ್ ಮೇಲ್ವಿಚಾರಕರಾದ ಭಕ್ತ ಹಾಗೂ ನೀಲಸಂದ್ರ ವಾರ್ಡ್ನ ಮಾರುತಿ, ಆಡುಗೋಡಿ ಹಾಗೂ ನೀಲಸಂದ್ರ ವಾರ್ಡ್ನ ಬಿ.ಬಿ.ಎಂ.ಪಿ ಸೂಪರ್ವೈಸರ್ಗಳು, ಮಾರ್ಷಲ್ಗಳು, ಕಾಂಟ್ರಾಕ್ಟರ್ಗಳು, ಸಂಗ್ರಹಣಾ ಸಿಬ್ಬಂದಿ ಹಾಗೂ ಸಾಹಸ್ನ ಎಲ್ಲಾ ಸಿಬ್ಬಂದಿ ಹಾಜರಿದ್ದರು.