

ಚಿಕ್ಕಮಗಳೂರು: ಜಗತ್ತನ್ನೇ ತಲ್ಲಣಗೊಳಿಸಿರುವ ಕರೊನಾ ವೈರಸ್ ಜನರ ಸಮಾಧಾನ ಕಿತ್ತುಕೊಂಡಿದೆ. ಸಂಪ್ರದಾಯಕ್ಕೂ ಪೆಟ್ಟು ಕೊಟ್ಟು ಎಲ್ಲೆಡೆ ತನ್ನ ಕರಾಳ ಬಾಹುಗಳನ್ನು ಚಾಚಿಕೊಂಡಿದ್ದು, ಪ್ರವಾಸ, ವಿಹಾರಗಳಿಗೂ ರೋಗದ ಕರಿನೆರಳು ಬಿದ್ದಿದೆ. ಅಷ್ಟು ಮಾತ್ರವಲ್ಲ, ಜನರ ಸ್ವಾತಂತ್ರ್ಯನ್ನೇ ಹರಣ ಮಾಡಿದೆ. ಜತೆಗೆ ವ್ಯವಸ್ಥೆಯ ಆರ್ಥಿಕ ಸ್ಥಿತಿಗೂ ದೊಡ್ಡ ಬರೆ ಎಳೆದಿದೆ.
ಜಿಲ್ಲೆಯ ಅನೇಕ ಕಡೆಗಳಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮ ಸದ್ಯ ಕೈಬಿಡುವ ಇಲ್ಲವೇ ರದ್ದುಗೊಳಿಸುವ ಅಸಹಾಯಕ ಸನ್ನಿವೇಶ ಸೃಷ್ಟಿಯಾಗಿದೆ. ಇನ್ನು ಕೆಲವು ಮುಂದೂಡಲ್ಪಟ್ಟಿವೆ. ಮತ್ತೆ ಕೆಲವು ಸರಳವಾಗಿ ಆಚರಣೆಗೊಂಡಿವೆ. ಕೆಲವು ಕಾಯ್ದಿರಿಸಲು ಹೋದಾಗಲೇ ರದ್ದಾಗಿವೆ. ಅಷ್ಟು ಮಾತ್ರವಲ್ಲ ನಗರದ ಕುವೆಂಪು ಕಲಾಮಂದಿರದಲ್ಲಿ ಯಾವುದೇ ಕಾರ್ಯಕ್ರಮಗಳಿಗೆ ಅವಕಾಶ ನೀಡುತ್ತಿಲ್ಲ. ಸರ್ಕಾರದ ಆದೇಶವೇ ಹಾಗಿದೆ.
ಅಷ್ಟೇ ಅಲ್ಲ, ಮದುವೆಯನ್ನೂ ಮುಂದೂಡುವಂತೆ ಮಾಡಿದೆ. ಹಲವೆಡೆ ವಿವಾಹ ದಿನಾಂಕ ನಿಗದಿಯಾಗಿದೆ. ಛತ್ರಕ್ಕೆ, ಪುರೋಹಿತರಿಗೆ ಮುಂಗಡ ನೀಡಲಾಗಿದೆ. ಎಲ್ಲ ಸಿದ್ಧತೆ ನಡೆದಿದೆ. ಮದುವೆ ಆಮಂತ್ರಣ ಪತ್ರಿಕೆ ಇನ್ನೇನು ಮುದ್ರಣಕ್ಕೆ ಹೋಗಬೇಕು. ಈಗೇನು ಮಾಡುವುದು ಎನ್ನುವ ಚಿಂತೆ ಮದುಮಕ್ಕಳ ಪಾಲಕರನ್ನು ಕಾಡುತ್ತಿದೆ. ಒಂದೋ ಸರಳ ವಿವಾಹದಲ್ಲಿ ಮಂತ್ರ ಮಾಂಗಲ್ಯದ ಮೊರೆ ಹೋಗಬೇಕು. ಇಲ್ಲವೇ ಮುಂದೂಡಬೇಕು. ಇಂತಹ ಸಂದಿಗ್ಧ ಪರಿಸ್ಥಿತಿಗೆ ತಂದಿರಿಸಿದೆ.
ಸರ್ಕಾರ ಹೊರಡಿಸಿದ ಸುತ್ತೋಲೆಯಂತೆ ಜಿಲ್ಲಾಡಳಿತ ಆದೇಶ ಹೊರಡಿಸಿದ್ದರಿಂದ ಎಲ್ಲ ಕಾರ್ಯಕ್ರಮಗಳಿಗೂ ಬ್ರೇಕ್ ಬಿದ್ದಿದೆ. ವಾರದ ಮೂರು-ನಾಲ್ಕು ವೈವಿಧ್ಯಮಯ ಕಾರ್ಯಕ್ರಮಗಳಿಂದ ಗಮನ ಸೆಳೆಯುತ್ತಿದ್ದ ನಗರದ ಕುವೆಂಪು ಕಲಾಮಂದಿರ ಸಂಪೂರ್ಣ ಸ್ತಬ್ಧಗೊಂಡಿದೆ.
ಆರಾಧನಾ ಮಹೋತ್ಸವಕ್ಕೆ ಅಡ್ಡಿ: ಮಾ.20 ಹಾಗೂ 21 ರಂದು ನಗರದ ರಂಗಣ್ಣನ ಛತ್ರದಲ್ಲಿ ತ್ಯಾಗರಾಜರು, ಪುರಂದರ ದಾಸರು ಹಾಗೂ ಕನಕದಾಸರ ಆರಾಧನಾ ಮಹೋತ್ಸವವನ್ನು ಸಂಘಟಿಸಲು ಸಾಂಸ್ಕೃತಿಕ ಸಂಘ ಎಲ್ಲ ಸಿದ್ಧತೆ ನಡೆಸಿತ್ತು. ಕಲಾವಿದರಿಗೂ ಆಹ್ವಾನ ನೀಡಲಾಗಿತ್ತು. ಆದರೆ ಕರೊನಾ ವೈರಸ್ ತಂದ ಅಸಹಾಯಕ ಸ್ಥಿತಿಯಲ್ಲಿ ಕಾರ್ಯಕ್ರಮ ಮುಂದೂಡಲಾಗಿದೆ. ಹಿರೇಮಗಳೂರಿನಲ್ಲಿ ಮಾ.22 ರಂದು ಸಹ ತ್ಯಾಗರಾಜರು, ಪುರಂದರದಾಸರ ಆರಾಧನಾ ಮಹೋತ್ಸವದಲ್ಲಿ ಊಂಛಾವೃತ್ತಿ, ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಆ ಕಾರ್ಯಕ್ರಮವನ್ನೂ ಕೈಬಿಡಲಾಗಿದೆ.
ಮುಂದೆ ಕಾರ್ಯಕ್ರಮ ನಿಗದಿಪಡಿಸಬೇಕಾದರೆ ಈಗಿನ ಕ್ಲಿಷ್ಟಕರ ಸನ್ನಿವೇಶ ತಿಳಿಯಾಗಿ ಮತ್ತೆ ಕಲಾವಿದರಿಂದ ದಿನಾಂಕ ಪಡೆದು ಕಾರ್ಯಕ್ರಮ ಆಯೋಜಿಸಬೇಕಾಗುತ್ತದೆ ಎನ್ನುತ್ತಾರೆ ಸಾಂಸ್ಕೃತಿಕ ಸಂಘದ ಉಜ್ವಲ್ ಪಡುಬಿದ್ರಿ.
ನಾಟಕ ವೀಕ್ಷಣೆ ಉತ್ಸಾಹಕ್ಕೆ ತಣ್ಣೀರು: ವಿಶ್ವ ರಂಗಭೂಮಿ ದಿನಾಚರಣೆ ಪ್ರಯುಕ್ತ ಕರ್ನಾಟಕ ನಾಟಕ ಅಕಾಡೆಮಿ ಹಾಗೂ ವಿಶ್ವ ಮಾನವ ಟ್ರಸ್ಟ್ ಆಶ್ರಯದಲ್ಲಿ ಕಲಾಮಂದಿರದಲ್ಲಿ ಅತಿಥಿಗಳಿಗೂ ಆಹ್ವಾನ ನೀಡಿ, ಜಿಲ್ಲಾ ಉತ್ಸವದ ಸಂದರ್ಭ ಸ್ಥಳೀಯ ಕಲಾವಿದರಿಂದ ಪ್ರದರ್ಶನಗೊಂಡಿದ್ದ ಹಗರಣ ನಾಟಕ ಪ್ರದರ್ಶನಗೊಳ್ಳಲಿತ್ತು. ಜಿಲ್ಲಾ ಉತ್ಸವದ ನಡುವೆ ನಾಟಕ ವೀಕ್ಷಣೆ ಮಾಡದವರು ಈ ಬಾರಿ ವೀಕ್ಷಣೆಗೆ ಬರಲು ಸಿದ್ಧರಾಗಿದ್ದರು. ಆದರೆ ಆ ಉತ್ಸಾಹಕ್ಕೂ ಕರೊನಾ ವೈರಸ್ ತಣ್ಣೀರೆರಚಿದೆ. ಈ ಕಾರ್ಯಕ್ರಮ ಹೆಚ್ಚು ಕಡಿಮೆ ರದ್ದಾದಂತೆಯೇ ಆಗಿದೆ. ಶೃಂಗೇರಿಯಲ್ಲಿ ಸಹ ವಿಶ್ವ ರಂಗಭೂಮಿ ದಿನಾಚರಣೆ ಪ್ರಯುಕ್ತ ಮಾ.27 ರಂದೇ ನಾಟಕ ಪ್ರದರ್ಶನ ಆಯೋಜನೆಗೊಂಡಿದ್ದು ಅದನ್ನು ಸಹ ಕೈಬಿಡಲಾಗಿದೆ.
ಕೊಪ್ಪ ತಾಲೂಕು ಸಿದ್ದರಮಠದಲ್ಲಿ ಶ್ರೀ ಭಾರತೀ ತೀರ್ಥ ಸಾಂಸ್ಕೃತಿಕ ಮತ್ತು ಜನಪದ ಅಧ್ಯಯನ ಕೇಂದ್ರ ಹಾಗೂ ಮೈಸೂರಿನ ರಂಗಾಯಣದ ಸಹಭಾಗಿತ್ವದಲ್ಲಿ ಮೂರು ದಿನಗಳ ನಾಟಕೋತ್ಸವ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮವನ್ನು ಒಂದೇ ದಿನಕ್ಕೆ ಮೊಟಕುಗೊಳಿಸಲಾಗಿದೆ.
ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯೆ ಮುಗಳಿ ಲಕ್ಷ್ಮೀದೇವಮ್ಮ ಸೋಬಾನೆ ಗೀತೆ ಸೇರಿದಂತೆ ಸಾಂಪ್ರದಾಯಿಕ ಗೀತಗಾಯನದ ತರಬೇತಿ ಕಾರ್ಯಕ್ರಮವನ್ನು ಅಜ್ಜಂಪುರ ತಾಲೂಕಿನಲ್ಲಿ ಮುಂದಿನ ವಾರದಿಂದ ಆಯೋಜಿಸಿದ್ದರು. ಅದನ್ನು ಸದ್ಯ ಕೈಬಿಡಲಾಗಿದೆ.