ಹೆಸಗಲ್ ಶಾಲೆಗೆ ಅಮೃತಮಹೋತ್ಸವ ಸಂಭ್ರಮ

web 3
Published on

ಬಣಕಲ್: ಮೂಡಿಗೆರೆ ಸಮೀಪದ ಹೆಸಗಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 75 ವರ್ಷ ಪೂರೈಸಿ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ.

1940ರಲ್ಲಿ 1ರಿಂದ 4ನೇ ತರಗತಿಗಳೊಂದಿಗೆ ಪ್ರಾರಂಭವಾದ ಈ ಶಾಲೆ 1997ರಲ್ಲಿ 5ನೇ ತರಗತಿ ಆರಂಭಿಸಿ ಕಿರಿಯ ಪ್ರಾಥಮಿಕ ಶಾಲೆಯಾಯಿತು. 2005-06ನೇ ಸಾಲಿನಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಯಿತು. ಪಾಲಕರಿಗೆ ಖಾಸಗಿ ಶಾಲೆಗಳ ಬಗ್ಗೆ ಇರುವ ವ್ಯಾಮೋಹ ಮತ್ತಿತರ ಕಾರಣಗಳಿಂದ ಪ್ರಸ್ತುತ 62 ವಿದ್ಯಾರ್ಥಿಗಳು ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಒಬ್ಬರು ಬಡ್ತಿ ಮುಖ್ಯಶಿಕ್ಷಕರು, ಮೂವರು ಶಿಕ್ಷಕರು ಹಾಗೂ ಓರ್ವ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

1940ರಿಂದ 1994ರವರೆಗೆ ಒಂದೇ ಕೊಠಡಿಯಲ್ಲಿ ನಡೆಯುತ್ತಿದ್ದ ಶಾಲೆಯಲ್ಲಿ ಪ್ರಸ್ತುತ 6 ಕೊಠಡಿಗಳು ನಿರ್ವಣವಾಗಿವೆ. 2019ರಲ್ಲಿ ತಾಪಂನಿಂದ ಸ್ಮಾರ್ಟ್​ಕ್ಲಾಸ್ ವ್ಯವಸ್ಥೆ ಕಲ್ಪಿಸಲಾಗಿದ್ದು ಡಿಜಿಟಲ್ ತಂತ್ರಜ್ಞಾನದ ಮೂಲಕ ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಶಿಕ್ಷಣ ನೀಡಲಾಗುತ್ತಿದೆ. ದಾನಿಗಳು ಹಾಗೂ ಸಂಘಸಂಸ್ಥೆಗಳು ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದು ಕಂಪ್ಯೂಟರ್, ಪೀಠೋಪಕರಣ ಹಾಗೂ ಬಿಸಿಯೂಟದ ಪರಿಕರಗಳನ್ನು ಶಾಲೆಗೆ ದಾನವಾಗಿ ನೀಡಿದ್ದಾರೆ.

ಎಸ್​ಡಿಎಂಸಿ ಸಮಿತಿ ಶಾಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದು ಪಾಲಕರು ಮತ್ತು ವಿದ್ಯಾರ್ಥಿಗಳೊಂದಿಗೆ ರ್ಚಚಿಸಿ ವಿದ್ಯಾರ್ಥಿಗಳು ಪರಿಣಾಮಕಾರಿಯಾಗಿ ಕಲಿಕೆಯಲ್ಲಿ ತೊಡಗಲು ಕ್ರಮ ಕೈಗೊಂಡಿದೆ. ಉತ್ತಮ ಬೋಧಕ ವರ್ಗ ವಿದ್ಯಾರ್ಥಿಗಳನ್ನು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಉತ್ಸಾಹದಿಂದ ತೊಡಗುವಂತೆ ಪ್ರೇರಣೆ ನೀಡುತ್ತಿದೆ. ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿ, ಕ್ರೀಡಾಕೂಟ, ಕಲಿಕೋತ್ಸವ, ಸಹಪಠ್ಯ ಚಟುವಟಿಕೆ, ವಿಜ್ಞಾನ ಮತ್ತು ಗಣಿತ ಮೇಳ ಮುಂತಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಉತ್ತಮ ಸಾಧನೆ ತೋರಿದ್ದಾರೆ.

ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಶಿಕ್ಷಣ, ವೈದ್ಯಕೀಯ, ಪೊಲೀಸ್ ಇಲಾಖೆ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಸಾಲು ಸಾಲು ಸರ್ಕಾರಿ ಶಾಲೆಗಳು ಮುಚ್ಚಿಹೋಗುತ್ತಿರುವ ಈ ಸಂದರ್ಭದಲ್ಲಿ ಸರ್ಕಾರಿ ಶಾಲೆಯೊಂದು ಅಮೃತಮಹೋತ್ಸವ ಆಚರಿಸಿಕೊಳ್ಳುತ್ತಿದೆ.

ಜ.26ರ ಅಪರಾಹ್ನ 3 ಗಂಟೆಗೆ ಅಮೃತಮಹೋತ್ಸವ ಕಾರ್ಯಕ್ರಮ ನಡೆಯಲಿದೆ. ಅಮೃತ ಮಹೋತ್ಸವ ನೆನಪಿಗಾಗಿ ಹಳೇ ವಿದ್ಯಾರ್ಥಿಗಳು, ಶಿಕ್ಷಕರ ಬರಹಗಳು ಮತ್ತು ಶಿಕ್ಷಣ, ಮಲೆನಾಡಿಗೆ ಸಂಬಂಧಿಸಿದ ಲೇಖನಗಳನ್ನು ಒಳಗೊಂಡ ಸ್ಮರಣ ಸಂಚಿಕೆ ಹೊರ ತರಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net