ಭೂಗಳ್ಳರಿಂದ 8 ಎಕರೆ ಜಮೀನು ವಾಪಸ್

oplus_148897794
oplus_148897794
Published on

 ವಿಜಯವಾಣಿ ಸುದ್ದಿಜಾಲ ತೂಬಗೆರೆ

ಮೇಲಿನಜೂಗಾನಹಳ್ಳಿ(ಎಸ್‌ಎಸ್‌ಘಾಟಿ) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂಜೂರು ಗ್ರಾಮದಲ್ಲಿನ 120 ಎಕರೆ ಗೋಮಾಳದಲ್ಲಿ ಕೆಲವರಿಗೆ ಸರ್ಕಾರದಿಂದ ಗ್ರಾಂಟ್ ಆಗಿದೆ. ಮಿಕ್ಕುಳಿದ ಭೂಮಿಯನ್ನು ಕೆಲವರು ಕಬಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ 2022-23ನೇ ಸಾಲಿನಲ್ಲಿ ಗ್ರಾಮಸ್ಥರೆಲ್ಲ ಸೇರಿ ಕಬಳಿಸಿದ್ದ ಭೂಮಿ ಪತ್ತೆ ಮಾಡಿ ಆಶ್ರಯ ಯೋಜನೆಗಾಗಿ 8 ಎಕರೆ ಜಮೀನನ್ನು ಕಾನೂನು ಬದ್ಧವಾಗಿ ಮಂಜೂರು ಮಾಡಿಸಿಕೊಂಡಿದ್ದೇವೆ ಎಂದು ವಕೀಲ ಪ್ರತಾಪ್ ಹೇಳಿದರು.

ಮಾಕಳಿ ದುರ್ಗದ ಸಮೀಪದಲ್ಲಿ ಗುಂಜೂರು ಗ್ರಾಮದ ಸರ್ವೆ ನಂಬರ್ 33ರಲ್ಲಿ 8 ಎಕರೆ ಜಮೀನನ್ನು ಆಶ್ರಯ ಯೋಜನೆಗೆ ಮಂಜೂರಾಗಿರುವ ಹಿನ್ನೆಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಯಶಸ್ವಿ ಕಾರ್ಯಕ್ರಮದಲ್ಲಿ ಮಾತನಾಡಿದರು. 8 ಎಕರೆಗೆ ಪಹಣಿ, ಮ್ಯುಟೇಶನ್ ಸೇರಿ ಎಲ್ಲ ದಾಖಲೆಗಳು ಬಂದಿವೆ ಎಂದು ಮಾಹಿತಿ ನೀಡಿದರು.

500ಕ್ಕೂ ಹೆಚ್ಚು ಅರ್ಜಿ:ಘಾಟಿ ಸುತ್ತಾಮುತ್ತಾ ಸರ್ಕಾರಿ ಜಮೀನುಗಳನ್ನು ಭೂಗಳ್ಳರು ಕಬಳಿಕೆ ಮಾಡುತ್ತಿದ್ದಾರೆ. ಸ್ಥಳೀಯ ಗ್ರಾಮಸ್ಥರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಸರ್ಕಾರ ಈ ಕೂಡಲೇ ಪರಿಶೀಲನೆ ಮಾಡಿ, ಸರ್ಕಾರಿ ಜಮೀನುಗಳನ್ನು ಉಳಿಸಿ, ರೈತರು, ನಿರಾಶ್ರಿತರು, ಬಡವರಿಗೆ ನೀಡಬೇಕು ಎಂದು ಒತ್ತಾಯಿಸಿದರು.ಸದ್ಯ ಗುಂಜೂರು ಗ್ರಾಮದ ಸರ್ವೇ ನಂಬರ್ 33ರಲ್ಲಿ 8 ಎಕರೆ ನಿವೇಶನಕ್ಕಾಗಿ ಮಂಜೂರಾಗಿರುವ ಜಾಗಕ್ಕೆ 500ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಪಂಚಾಯಿತಿ ವತಿಯಿಂದ ಈ ಎಲ್ಲ ಅರ್ಜಿಗಳು ಪರಿಶೀಲನೆ ಆಗುತ್ತವೆ. ನಿಜವಾದ ಫಲಾನುಭವಿಗಳಿಗೆ ನಿವೇಶನ ದೊರಕುವ ನಂಬಿಕೆ ಇದೆ ಎಂದು ಪ್ರತಾಪ್ ತಿಳಿಸಿದರು.

ಹಳ್ಳಿಗಳಿಗೆ ಸುಸಂದರ್ಭ: ತೂಬಗೆರೆ ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣಪ್ಪ ಮಾತನಾಡಿ, ಮೇಲಿನ ಜುಗಾನಹಳ್ಳಿ ಪಂಚಾಯತಿ ವ್ಯಾಪ್ತಿಯ ಸುತ್ತಮುತ್ತ ಹಳ್ಳಿಗಳಿಗೆ ಇದೊಂದು ಸುಸಂದರ್ಭ ಎನ್ನಬಹುದು. ಕೆಲವು ಹಳ್ಳಿಗಳಿಗೆ ಆಶ್ರಯ ಯೋಜನೆಗೆ ಜಮೀನು ಸಿಕ್ಕಿರುವುದು ಒಳ್ಳೆಯ ಸಂಗತಿಯಾಗಿದೆ ಎಂದರು. ಬೆಂಗಳೂರಿನ ಭೂಕಳ್ಳರು ಬಂದು ಇಲ್ಲಿ ಜಮೀನನ್ನು ಕಬಳಿಕೆ ಮಾಡುತ್ತಿದ್ದಾರೆ. ನಾವು ಎಚ್ಚೆತ್ತುಕೊಂಡರೆ ಮಾತ್ರ ನಮಗೆ ಜಮೀನು ಸಿಗುತ್ತದೆ. ಇಲ್ಲದಿದ್ದರೆ ಜಮೀನುಗಳು ಸಿಗುವುದಿಲ್ಲ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net