

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಸಾರ್ವಜನಿಕ ಕುಂದುಕೊರತೆಗಳನ್ನು ಆಲಿಸಿ ಸ್ಥಳದಲ್ಲೇ ಪರಿಹಾರ ಕಲ್ಪಿಸುವ ಜನಸ್ಪಂದನ ಕಾರ್ಯಕ್ರಮಕ್ಕೆ ಮರುಜೀವ ಬಂದಿದೆ. ಕಳೆದ ಏಳೆಂಟು ತಿಂಗಳಿಂದ ತೆರೆಮರೆಗೆ ಸರಿದಿದ್ದ ಕಾರ್ಯಕ್ರಮ ಪುನಾರಂಭಗೊಳ್ಳಲಿದ್ದು ತಾಲೂಕು ಮಟ್ಟದಲ್ಲಿ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಪ್ರತಿ ತಿಂಗಳ ಮೊದಲನೇ ಶನಿವಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಪ್ರತಿ ತಿಂಗಳ ಮೂರನೇ ಶನಿವಾರ ಜಿಲ್ಲಾಮಟ್ಟದ ಜನಸ್ಪಂದನ ಕಾರ್ಯಕ್ರಮ ನಡೆಸಲು ಜಿಲ್ಲಾಡಳಿತ ಸಿದ್ದತೆ ನಡೆಸಿದೆ.
ಜಿಲ್ಲೆಯಲ್ಲಿ ಭುಗೆಲಿದ್ದಿರುವ ಭೂಸ್ವಾಧೀನ ವಿರೋಧಿ ಹೋರಾಟದ ಪರಿಣಾಮವಾಗಿ ಇಂಥ ಸಾರ್ವಜನಿಕ ಕಾರ್ಯಕ್ರಮ ಆಯೋಜಿಸಲು ಜನಪ್ರತಿನಿಧಿಗಳು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪ ವ್ಯಕ್ತವಾಗಿತ್ತು. ಇದಕ್ಕೆ ಪೂರಕ ಎಂಬಂತೆ ಸರ್ಕಾರದ ವತಿಯಿಂದ ಆಯೋಜನೆಯಾಗುತ್ತಿದ್ದ ಜನತಾದರ್ಶನ ಕಾರ್ಯಕ್ರಮಕ್ಕೆ ಸದ್ದಿಲ್ಲದಂತಾಗಿತ್ತು. ಇದೀಗ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ ಭೂಸ್ವಾಧೀನ ವಿರೋಧಿ ಹೋರಾಟಕ್ಕೆ ಗೆಲುವು ಸಿಕ್ಕ ಬಳಿಕ ಸರ್ಕಾರವೂ ಕೊಂಚ ನಿರಾಳವಾಗಿದೆ ಎಂಬ ಮಾತು ಕೇಳಿಬರುತ್ತಿದ್ದು ಆಡಳಿತ ಯಂತ್ರ ಹಳಿಗೆ ಮರಳುತ್ತಿದೆ ಎಂಬ ಮಾತು ಕೇಳಿಬರುತ್ತಿದೆ.
ಒಂದೇ ವೇದಿಕೆಯಲ್ಲಿ ಅಹವಾಲು: ಸಾರ್ವಜನಿಕರು ಅಹವಾಲನ್ನು ಸಲ್ಲಿಸಲು ಒಂದೇ ವೇದಿಕೆಯನ್ನು ಕಲ್ಪಿಸುವ ಸಲುವಾಗಿ ಜನಸ್ಪಂದನ ಎಂಬ ಹೆಸರಿನಲ್ಲಿ ಸಾರ್ವಜನಿಕ ಕುಂದು ಕೊರತೆ ಸಭೆ ಆಯೋಜಿಸಿ ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಜನರ ಅಹವಾಲನ್ನು ಆಲಿಸಿ ಸಮಸ್ಯೆಗಳನ್ನು ನಿವಾರಿಸುವ ಉದ್ದೇಶದಿಂದ ಜನಸ್ಪಂದನ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.
ಅಧಿಕಾರಿಗಳ ಹಾಜರಿಗೆ ತಾಕೀತು: ಜಿಲ್ಲಾಮಟ್ಟದಲ್ಲಿ ನಡೆಯುವ ಜನಸ್ಪಂದನ ಕಾರ್ಯಕ್ರಮದಲ್ಲಿ ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು ಹಾಗೂ ತಾಲೂಕು ಮಟ್ಟದಲ್ಲಿ ನಡೆಯುವ ಜನಸ್ಪಂದನ ಕಾರ್ಯಕ್ರಮದಲ್ಲಿ ಎಲ್ಲ ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿದ್ದು ಸಾರ್ವಜನಿಕರ ಅಹವಾಲು ಆಲಿಸಬೇಕು ಎಂದು ಜಿಲ್ಲಾಧಿಕಾರಿ ಎ.ಬಿ.ಬಸವರಾಜು ತಾಕೀತು ಮಾಡಿದ್ದಾರೆ. ತಾಲೂಕು ಮಟ್ಟದಲ್ಲಿ ನಡೆಯುವ ಜನಸ್ಪಂದನ ಕಾರ್ಯಕ್ರಮಗಳಲ್ಲಿ ಸಂಬಂಧಿತ ಉಪವಿಭಾಗಾಧಿಕಾರಿಗಳು ಒಂದೊಂದು ತಿಂಗಳು ಒಂದೊಂದು ತಾಲೂಕಿನಲ್ಲಿ ಹಾಜರಿರಬೇಕು. ಜನಸ್ಪಂದನ ಕಾರ್ಯಕ್ರಮದ ಸಮಯ ಹಾಗೂ ದಿನಾಂಕ, ಸ್ಥಳವನ್ನು ಆಯಾ ತಾಲೂಕು, ಜಿಲ್ಲೆಯಲ್ಲಿ ಹೆಚ್ಚಿನ ಪ್ರಚಾರ ಮಾಡಬೇಕು ಎಂದು ಡಿಸಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಆನ್‌ಲೈನ್ ಮೂಲಕ ಅಹವಾಲು ದಾಖಲಿಸಿ: ಜಿಲ್ಲೆಯ ಎಲ್ಲ ರೈತಾಪಿ ವರ್ಗದವರಿಗೆ ಸಾರ್ವಜನಿಕರಿಗೆ ಹಾಗೂ ಗ್ರಾಮೀಣ ಜನತೆಗೆ ಸಾಮಾಜಿಕ ಶೈಕ್ಷಣಿಕ ವಾಣಿಜ್ಯ ಹಾಗೂ ಕೃಷಿ ಚಟುವಟಿಕೆಗಳಿಗೆ ವಿವಿಧ ಇಲಾಖೆಗಳಲ್ಲಿ ದೊರೆಯಬೇಕಾದ ಸೌಲಭ್ಯಗಳು ನಿಗಧಿತ ಅವಧಿಯೊಳಗೆ ದೊರೆಯದೆ ಇದ್ದಾಗ ತಮ್ಮ ಅಹವಾಲನ್ನು ದಾಖಲಿಸಲು ಸರ್ಕಾರ ಏಕೀಕೃತ ಸಾರ್ವಜನಿಕ ದೂರು ನಿವಾರಣ ತಂತ್ರಾಂಶ ವ್ಯವಸ್ಥೆ ಅನುಷ್ಠಾನಗೊಳಿಸಿದೆ.
ಸಹಾಯವಾಣಿಯೂ ಇದೆ: ಏಕೀಕೃತ ಸಾರ್ವಜನಿಕ ಕುಂದು ಕೊರತೆ ವ್ಯವಸ್ಥೆಗೆ ಮೀಸಲಾದ 1902 ಸಹಾಯವಾಣಿಯೂ ನಾಗರಿಕರಿಗೆ ಲಭ್ಯವಿರುತ್ತದೆ. ಅಂತರ್ಜಾಲ ವ್ಯವಸ್ಥೆ ಇಲ್ಲದ ಕುಗ್ರಾಮಗಳಿಂದಲೂ ಸಾರ್ವಜನಿಕರು 1902 ಸಹಾಯವಾಣಿಗೆ ಕರೆ ಮಾಡಿ ದೂರು, ಕುಂದು ಕೊರತೆಗಳನ್ನು ದಾಖಲಿಸಬಹುದಾದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಇದೊಂದು ಸಾರ್ವಜನಿಕ ಸ್ನೇಹಿ ಕಾರ್ಯಕ್ರಮವಾಗಿದೆ ಒಂದೇ ವೇದಿಕೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದು ಸಾರ್ವಜನಿಕರು ಹಾಗೂ ಅಧಿಕಾರಿಗಳ ಮುಖಾಮುಖಿಯಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮಹತ್ತರ ಕಾರ್ಯಕ್ರಮವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಜನಸ್ಪಂದನ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.
ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು
ಎ.ಬಿ ಬಸವರಾಜು, ಜಿಲ್ಲಾಧಿಕಾರಿ ಬೆಂ.ಗ್ರಾಮಾಂತರ