ಜೇನು ಸಾಕಣೆಯಿಂದ ಕೃಷಿಯಲ್ಲಿ ಲಾಭ

ನಂಜನಗೂಡು ತಾಲೂಕು ಸುತ್ತೂರಿನ ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶನಿವಾರ ಭಾರತದ ತೋಟಗಾರಿಕಾ ಪಿತಾಮಹ ಡಾ.ಎಂ.ಎಚ್.ಮರಿಗೌಡರ ಜನ್ಮದಿನ ಪ್ರಯುಕ್ತ ರಾಷ್ಟ್ರೀಯ ತೋಟಗಾರಿಕಾ ದಿನಾಚರಣೆ ಹಾಗೂ ಜೇನು ಕೃಷಿ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಡಾ.ಬೋರೇಗೌಡ, ಡಾ.ಜಿ.ಎಂ.ವಿನಯ್, ಎಚ್.ವಿ.ದಿವ್ಯಾ, ಕಾಶಪ್ಪ, ಶಾಮರಾಜ್, ಡಾ.ದೀಪಕ್, ಡಾ.ವೈ.ಪಿ.ಪ್ರಸಾದ್ ಇತರರು ಇದ್ದರು.
ನಂಜನಗೂಡು ತಾಲೂಕು ಸುತ್ತೂರಿನ ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶನಿವಾರ ಭಾರತದ ತೋಟಗಾರಿಕಾ ಪಿತಾಮಹ ಡಾ.ಎಂ.ಎಚ್.ಮರಿಗೌಡರ ಜನ್ಮದಿನ ಪ್ರಯುಕ್ತ ರಾಷ್ಟ್ರೀಯ ತೋಟಗಾರಿಕಾ ದಿನಾಚರಣೆ ಹಾಗೂ ಜೇನು ಕೃಷಿ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಡಾ.ಬೋರೇಗೌಡ, ಡಾ.ಜಿ.ಎಂ.ವಿನಯ್, ಎಚ್.ವಿ.ದಿವ್ಯಾ, ಕಾಶಪ್ಪ, ಶಾಮರಾಜ್, ಡಾ.ದೀಪಕ್, ಡಾ.ವೈ.ಪಿ.ಪ್ರಸಾದ್ ಇತರರು ಇದ್ದರು.
Published on

ನಂಜನಗೂಡು: ರೈತರು ಜೇನು ಸಾಕಣೆಯಿಂದ ಕೃಷಿ ಇಳುವರಿಯನ್ನು ನೈಸರ್ಗಿಕವಾಗಿ ಹೆಚ್ಚಳ ಮಾಡಬಹುದು ಎಂದು ನಿವೃತ್ತ ಕೆಎಎಸ್ ಅಧಿಕಾರಿ ಡಾ.ಬೋರೇಗೌಡ ಅಭಿಪ್ರಾಯಪಟ್ಟರು.

ತಾಲೂಕಿನ ಸುತ್ತೂರಿನ ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶನಿವಾರ ಭಾರತದ ತೋಟಗಾರಿಕಾ ಪಿತಾಮಹ ಡಾ.ಎಂ.ಎಚ್.ಮರಿಗೌಡ ಅವರ ಜನ್ಮದಿನದ ಪ್ರಯುಕ್ತ ಆಯೋಜಿಸಿದ್ದ ರಾಷ್ಟ್ರೀಯ ತೋಟಗಾರಿಕಾ ದಿನಾಚರಣೆ ಹಾಗೂ ಜೇನು ಕೃಷಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮರಿಗೌಡರು ತೋಟಗಾರಿಕೆಯನ್ನೇ ತಮ್ಮ ಜೀವನವಾಗಿ ಮಾಡಿಕೊಂಡಿದ್ದರು. ಅವರು ಮಾಡಿರುವ ಕೆಲಸದಿಂದ ಪ್ರಸ್ತುತ ತೋಟಗಾರಿಕೆ ಬೆಳೆಗಳಿಂದ ರೈತರು ಹೆಚ್ಚಿನ ಆದಾಯ ಪಡೆಯುವಂತಾಗಿದೆ. ಜತೆಗೆ ಕರ್ನಾಟಕ ರಾಜ್ಯವು ತೋಟಗಾರಿಕೆ ರಾಜ್ಯ ಎಂದು ಕರೆಯಲ್ಪಟ್ಟಿದೆ ಎಂದರು.

ರೈತರಿಗೆ ತೋಟಗಾರಿಕಾ ಬೆಳೆಗಳ ಮೌಲ್ಯವರ್ಧನೆ ಬಗ್ಗೆ ಮಾಹಿತಿ ನೀಡಿದ ಡಾ.ಬೋರೇಗೌಡ, ತಾವೇ ಬೆಳೆಯುತ್ತಿರುವ ಮಾವು, ಲಕ್ಷ್ಮಣಪಲ, ಲಿಚ್ಚಿ ಹಾಗೂ ಇನ್ನಿತರ ನೂತನ ಕೃಷಿಯ ಬಗ್ಗೆ ತಮ್ಮ ಅನುಭವವನ್ನು ರೈತರೊಂದಿಗೆ ಹಂಚಿಕೊಂಡು ಅಗತ್ಯ ಸಲಹೆ, ಸೂಚನೆಗಳನ್ನು ಒದಗಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಬಿ.ಎನ್.ಜ್ಞಾನೇಶ್ ಮಾತನಾಡಿ, ತೋಟಗಾರಿಕೆ ದಿನಾಚರಣೆ ಅಂಗವಾಗಿ ಪ್ರತಿ ವರ್ಷ ನಮ್ಮ ಕೇಂದ್ರದಲ್ಲಿ ತೋಟಗಾರಿಕೆ ವಿಷಯದ ಕುರಿತು ತರಬೇತಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಅದರಲ್ಲಿ ರೈತರು ಭಾಗವಹಿಸಿ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೃಷಿಯಲ್ಲಿ ಹೆಚ್ಚಾಗಿ ರಾಸಾಯನಿಕಗಳನ್ನು ಬಳಸುವುದರಿಂದ ನೈಸರ್ಗಿಕವಾಗಿ ಜೇನು ಹುಳುಗಳ ಸಂಖ್ಯೆ ಕಡಿಮೆಯಾಗಿದೆ. ಆದ್ದರಿಂದ ರೈತರು ಜೇನು ಕೃಷಿ ಕೈಗೊಂಡರೆ ಉತ್ತಮ ಇಳುವರಿ ಪಡೆಯಬಹುದು ಎಂದು ಹೇಳಿದರು.

ಡಾ. ಜಿ.ಎಂ.ವಿನಯ್ ಮಾತನಾಡಿ, ತೋಟಗಾರಿಕೆ ದಿನಾಚರಣೆಯ ಉದ್ದೇಶ, ತೋಟಗಾರಿಕೆ ಕ್ಷೇತ್ರಕ್ಕೆ ಡಾ.ಎಂ.ಎಚ್.ಮರಿಗೌಡರ ಕೊಡುಗೆ, ಅವರ ಸಾಧನೆಯನ್ನು ಪರಿಗಣಿಸಿ ಆಗಸ್ಟ್ 8ರಂದು ತೋಟಗಾರಿಕೆ ದಿನ ಆಚರಿಸಲಾಗುತ್ತಿದೆ ಎಂದರು. ಇದೇ ವೇಳೆ ಕೃಷಿ ವಿಜ್ಞಾನ ಕೇಂದ್ರದ ಜೇನು ಕೃಷಿ ತಾಕಿನಲ್ಲಿ ಪ್ರಾಯೋಗಿಕವಾಗಿ ಜೇನು ಸಾಕುವ ಹಾಗೂ ಜೇನು ತುಪ್ಪ ತೆಗೆಯುವ ಕುರಿತು ರೈತರಿಗೆ ಮಾಹಿತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞೆ ಎಚ್.ವಿ.ದಿವ್ಯಾ, ನ್ಯಾಷನಲ್ ಫರ್ಟಿಲೈಜರ್ ಲಿಮಿಟೆಡ್‌ನ ಜಿಲ್ಲಾ ವ್ಯವಸ್ಥಾಪಕರಾದ ಕಾಶಪ್ಪ, ಶಾಮರಾಜ್, ಡಾ.ದೀಪಕ್, ತಜ್ಞರಾದ ಡಾ.ವೈ.ಪಿ.ಪ್ರಸಾದ್ ಇತರರು ಇದ್ದರು. ಈ ಸಂದರ್ಭದಲ್ಲಿ ಸುಮಾರು 70ಕ್ಕೂ ಹೆಚ್ಚು ರೈತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net