ಲಾಭ ತಂದ ಆಧುನಿಕ ಬೇಸಾಯ

IMG-20231104-WA0285
Published on

ಆಲೂರು: ಆಧುನಿಕ ಪದ್ಧತಿ ಅಳವಡಿಸಿಕೊಂಡು ಲಾಭ ತರುವ ಅಪರೂಪದ ಬೆಳೆಗಳನ್ನು ಬೆಳೆದು ಲಾಭದಾಯಕ ಕೃಷಿ ಮಾಡಿ ಯಶಸ್ಸು ಕಾಣುತ್ತಿರುವ ಹಲವಾರು ಮಂದಿ ನಮ್ಮ ನಡುವೆ ಇದ್ದಾರೆ. ಅಂತಹವರ ಸಾಲಿನಲ್ಲಿ ತಾಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿಯ ಆನೆಗಳಲೆ ಗ್ರಾಮದ ರೈತ ಸಂತೋಷ್ ಒಬ್ಬರು.

ಅವರು ಹಳೇ ಪದ್ಧತಿ ಬೇಸಾಯ ಅವಲಂಬಿಸದೆ ಆಧುನಿಕ ಪದ್ಧತಿ ಅಳವಡಿಸಿಕೊಂಡು ಕೃಷಿಯಲ್ಲಿ ಯಶಸ್ಸು ಸಾಧಿಸಿದ್ದಾರೆ. ಸಂತೋಷ್ ತಮ್ಮ 5 ಎಕರೆ ಜಮೀನಿನಲ್ಲಿ ಅಡಕೆ, ಕಾಫಿ, ಏಲಕ್ಕಿ, ಕಾಳುಮೆಣಸು, ಶುಂಠಿ, ಬಾಳೆ ಇತ್ಯಾದಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ವೈಜ್ಞಾನಿಕ ಪದ್ಧತಿಯನ್ನು ಅಳವಡಿಸಿಕೊಂಡು 2 ಎಕರೆ ಜಮೀನಿನಲ್ಲಿ ಕಾಫಿ, ಏಲಕ್ಕಿ, ಮೆಣಸು ಬೆಳೆಯನ್ನು, 1 ಎಕರೆ ಜಮೀನಿನಲ್ಲಿ ಶುಂಠಿ, ಬಾಳೆ, ತೆಂಗು, ಗೇರು, ಮಾವು, ಸಿಲ್ವರ್ ಮತ್ತು ತೇಗದ ಮರ ಬೆಳೆದಿದ್ದಾರೆ. 1 ಎಕರೆಯಲ್ಲಿ ಮೀನು ಸಾಕಣೆ, ತರಕಾರಿ ಬೆಳೆಗಳಾದ ಬೀನ್ಸ್, ಮೆಣಸಿನಕಾಯಿ, ಟೊಮ್ಯಾಟೊ, ಸಾಂಬಾರ್ ಸೌತೆ, ಬೆಂಡೆಕಾಯಿ, ಕೊತ್ತಂಬರಿ ಸೊಪ್ಪನ್ನು ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಬೆಳೆದು ಅಧಿಕ ಲಾಭ ಪಡೆದು ಸುಸ್ಥಿರ ಜೀವನ ಸಾಗಿಸುತ್ತಿದ್ದಾರೆ.
ವಿರಳವಾದ ಮೆಣಸು ಕೃಷಿ ಮಾಡಿ ಮಾದರಿ ರೈತರಾಗಿ ಗುರುತಿಸಿಕೊಂಡಿದ್ದಾರೆ. ಪತ್ನಿ ಸೌಮ್ಯಾ ಅಂಗನವಾಡಿ ಕಾರ್ಯಕರ್ತೆಯಾಗಿದ್ದು ಇವರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ.

ಕೃಷಿ, ತೋಟಗಾರಿಕೆ, ಅರಣ್ಯ, ಮೇವಿನ ಬೆಳೆ, ಹೈನುಗಾರಿಕೆ ನಡೆಸುತ್ತಿದ್ದಾರೆ. ಬೋರ್‌ವೆಲ್ ಇದ್ದು, ಬೆಳೆಗಳಿಗೆ ಹನಿ ನೀರಾವರಿ ಪದ್ಧತಿಯಲ್ಲಿ ನೀರುಣಿಸುವುದರ ಜತೆಗೆ ಕೊಟ್ಟಿಗೆ ಗೊಬ್ಬರ ಬಳಸುತ್ತಾರೆ. ಸಾಮಾನ್ಯವಾಗಿ ಮಲೆನಾಡು ಭಾಗಕ್ಕಷ್ಟೇ ಸೀಮಿತವಾಗಿದ್ದ ಮೆಣಸು, ಕಾಫಿ, ಅಡಕೆ ಬೆಳೆಗಳನ್ನು ಈಗೀಗ ಜಿಲ್ಲೆಯ ಕೆಲ ರೈತರು ಬೆಳೆಯುತ್ತಿದ್ದಾರೆ. ಅಂತಹವರ ಪೈಕಿ ಸಂತೋಷ್ ಒಬ್ಬರು. ಇವರು ಜಮೀನಿನಲ್ಲಿ ಅರಣ್ಯ ಕೃಷಿ ನಡೆಸಿದ್ದು, ಪ್ರಾಯೋಗಿಕವಾಗಿ 100 ಕಾಳುಮೆಣಸಿನ ಬಳ್ಳಿಗಳನ್ನು ನೆಟ್ಟು ಉತ್ತಮ ಫಸಲು ಪಡೆದಿದ್ದಾರೆ. ಇಂದು ಇವರ ಜಮೀನಿನಲ್ಲಿ 500ಕ್ಕೂ ಹೆಚ್ಚಿನ ಮೆಣಸು ಗಿಡಗಳಿದ್ದು, ಲಾಭ ಕಂಡುಕೊಂಡಿದ್ದಾರೆ. ಇವರು ವೈಜ್ಞಾನಿಕವಾಗಿ ರೈತರ ಬೇಡಿಕೆಯ ಅನುಸಾರವಾಗಿ ಅಡಕೆ ಸಸಿಗಳನ್ನು ಉತ್ಪಾದಿಸಿ ಮಾರಾಟ ಮಾಡುತ್ತಿದ್ದಾರೆ.

ಸಾವಯವ ಕೃಷಿಗೂ ಆದ್ಯತೆ: ಬೆಳೆಗಳಿಗೆ ಹೆಚ್ಚಾಗಿ ರಸಗೊಬ್ಬರ ನೀಡದೆ ಕೊಟ್ಟಿಗೆ ಗೊಬ್ಬರ ನೀಡುವ ಸಂತೋಷ್ ಸಾವಯವ ಕೃಷಿಯತ್ತ ಚಿತ್ತ ಹರಿಸಿದ್ದಾರೆ. ಜಮೀನಿನ ಇಕ್ಕೆಲಗಳಲ್ಲಿ ಅರಣ್ಯ ಕೃಷಿ ಮರ ನೆಡಲಾಗಿದ್ದು, ಹನಿ ನೀರಾವರಿ ಮೂಲಕ ಮತ್ತಷ್ಟು ವಿಸ್ತಾರದಲ್ಲಿ ಮೆಣಸು ಕೃಷಿಗೆ ಉತ್ತೇಜನ ನೀಡಲು ತಯಾರಿ ನಡೆಸಿದ್ದಾರೆ.
ಹೈನುಗಾರಿಕೆ ಮಾಡುವ ಅವರು ಮಿಶ್ರತಳಿಯ ಹಸು ಸಾಕಿದ್ದಾರೆ. ಉತ್ತಮ ಹಾಲು ಉತ್ಪಾದನೆಯಲ್ಲೂ ಲಾಭ ಕಾಣುತ್ತಿದ್ದಾರೆ.
ಆನೆ ಕಾಟಕ್ಕೆ ಸೋಲಾರ್ ಉಪಾಯ: ಅರಣ್ಯದ ಸಮೀಪವೇ ಆನೆಗಳಲೆ ಗ್ರಾಮವಿರುವ ಕಾರಣ ಕಾಡಾನೆಗಳ ಕಾಟ ತಪ್ಪಿದ್ದಲ್ಲ. ಆನೆಗಳ ದಾಳಿಯಿಂದ ಜಮೀನಿನಲ್ಲಿ ಬೆಳೆದಿದ್ದ ಬೆಳೆಗಳಲ್ಲಿ ನಾಶವಾಗುತ್ತಿದ್ದವು. ಆನೆ ದಾಳಿಯಿಂದ ಬೆಳೆಗಳನ್ನು, ಮರಗಳನ್ನು ರಕ್ಷಿಸಿಕೊಳ್ಳಲು ಜಮೀನಿನ ಸುತ್ತಲೂ ಸೋಲಾರ್ ಬೇಲಿ ಅಳವಡಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net