ಸ್ವಯಂ ಉದ್ಯೋಗದಿಂದ ಜೀವನ ಸುಗಮ ಹೈನುಗಾರಿಕೆ ಲಾಭದಾಯಕ ಉದ್ಯಮ

IMG_20221215_100137-07
Published on

ಚಿತ್ರದುರ್ಗ: ಸ್ತ್ರೀಯರು ಸ್ವಯಂ ಉದ್ಯೋಗ ರೂಪಿಸಿಕೊಂಡು ಸ್ವಾವಲಂಬನೆಯೊಂದಿಗೆ ಯಶಸ್ವಿ ಬದುಕನ್ನು ಸುಗಮವಾಗಿ ಸಾಗಿಸಲು ಮುಂದಾಗಬೇಕು ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಸಲಹೆ ನೀಡಿದರು.

ಎಪಿಎಂಸಿ ಕುರಿ ಮಾರುಕಟ್ಟೆ ಆವರಣದಲ್ಲಿ ಕೇಂದ್ರ ಪುರಸ್ಕೃತ ಯೋಜನೆಯಡಿ ಪರಿಶಿಷ್ಟ ಪಂಗಡಗಳ ಅರ್ಹ ಫಲಾನುಭವಿಗಳು ಸ್ವಯಂ ಉದ್ಯೋಗ ಸೃಷ್ಟಿಸಿಕೊಳ್ಳಲು ಜಾರಿಯಲ್ಲಿರುವ ಕುರಿ, ಮೇಕೆಗಳನ್ನು ಗುರುವಾರ ವಿತರಿಸಿ ಮಾತನಾಡಿದರು.

ಸರ್ಕಾರದ ಕುರಿ-ಮೇಕೆ ಘಟಕ ಯೋಜನೆಯಡಿ ನನ್ನ ಕ್ಷೇತ್ರದಲ್ಲಿ ಅರ್ಹ 37 ಮಂದಿ ಮಹಿಳೆರನ್ನು ಆಯ್ಕೆ ಮಾಡಿದ್ದು, ತಲಾ ಒಬ್ಬ ಫಲಾನುಭವಿಗೆ 35.500 ರೂ. ಮೊತ್ತದಲ್ಲಿ ನಾಲ್ಕು ಕುರಿ, ಒಂದು ಟಗರು ವಿತರಿಸಲಾಗಿದೆ ಎಂದರು.

ಎರಡ್ಮೂರು ಕುರಿ ಮರಿಯೊಂದಿಗೆ ಉದ್ಯಮ ಆರಂಭಿಸಿ ಜೀವನ ಸಾಗಿಸುತ್ತಿರುವ ಸಾಕಷ್ಟು ಮಂದಿ ಇದ್ದಾರೆ. ಕುರಿಯನ್ನು ಉತ್ತಮವಾಗಿ ಆರೈಕೆ ಮಾಡುವುದರಿಂದ ಕುರಿಗಳ ಸಂಖ್ಯೆ ಹೆಚ್ಚಾಗಲಿದೆ. ಇದರಿಂದ ಕುಟುಂಬದ ಆದಾಯ ದ್ವಿಗುಣಗೊಳಿಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು. ಈ ಮೂಲಕ ಯೋಜನೆಯ ಉದ್ದೇಶ ಸಕಾರಗೊಳಿಸಬೇಕು ಎಂದು ಸಲಹೆ ನೀಡಿದರು.

ಸರ್ಕಾರ ಎಲ್ಲರಿಗೂ ಉದ್ಯೋಗ ನೀಡಲು ಸಾಧ್ಯವಿಲ್ಲ. ಇದಕ್ಕಾಗಿ ಕಾದು ಕುಳಿತುಕೊಳ್ಳುವ ಬದಲು ಸರ್ಕಾರಿ ಅಥವಾ ಖಾಸಗಿ ಉದ್ಯೋಗ ಪ್ರಯತ್ನದ ಜೊತೆ ಸ್ವಯಂ ಉದ್ದಿಮೆಗೆ ಒತ್ತು ನೀಡಿದರೆ ಜೀವನದಲ್ಲಿ ಆತ್ಮವಿಶ್ವಾಸ ಇಮ್ಮಡಿಗೊಳ್ಳಲಿದೆ. ಅಲ್ಲದೆ, ಕಷ್ಟಪಟ್ಟರೆ ಅದಕ್ಕೆ ತಕ್ಕ ಪ್ರತಿಫಲ ಖಂಡಿತ ದೊರೆಯುತ್ತದೆ ಎಂದು ಹೇಳಿದರು.

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ತಾಲೂಕು ಕಲ್ಯಾಣಾಧಿಕಾರಿ ಪರಮೇಶ್ವರಪ್ಪ, ಎಪಿಎಂಸಿ ಉಪ ಕಾರ್ಯದರ್ಶಿ ವಾಣಿ, ಪಶುಪಾಲನ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಇದ್ದರು.

(ಸಿಟಿಡಿ 15 ಜಿಎಚ್‌ಟಿ)

ಚಿತ್ರದುರ್ಗದಲ್ಲಿ ಗುರುವಾರ ಕುರಿ-ಮೇಕೆ ವಿತರಣೆ ಕಾರ್ಯಕ್ರಮದಲ್ಲಿ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿದರು. ವಾಣಿ, ಪರಮೇಶ್ವರಪ್ಪ, ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net