ಲಾಭದ ಫಸಲು ಡ್ರ್ಯಾಗನ್ ಹಣ್ಣು

7mnv01
Published on

ಮಾನ್ವಿ: ತುಂಗಭದ್ರಾ ಕಾಲುವೆಗೆ ಸಮರ್ಪಕ ನೀರು ಹರಿಯುತ್ತಿಲ್ಲ. ವಾಡಿಕೆಯಂತೆ ಮಳೆಯೂ ಆಗುತ್ತಿಲ್ಲ. ಹೀಗಾಗಿ ಕೃಷಿ ನಂಬಿ ಬದುಕುವುದು ಹೇಗೆ ಎಂದು ರೈತರು ಚಿಂತೆ ಮಾಡುವಂತಾಗಿದೆ. ಆದರೆ, ಪಟ್ಟಣದ ರೈತ ಸತ್ಯನಾರಾಯಣ ಖಾಸಗಿ ಕಂಪನಿಯಲ್ಲಿನ ಉದ್ಯೋಗ ಬಿಟ್ಟು ಡ್ರ್ಯಾಗನ್ ಹಣ್ಣು ಬೆಳೆಯುವ ಮೂಲಕ ಉತ್ತಮ ಲಾಭ ಕಂಡಿದ್ದಾರೆ.

ರಸಗೊಬ್ಬರ ಕಂಪನಿಯ ಹಣಕಾಸು ವಿಭಾಗದಲ್ಲಿ ವ್ಯವಸ್ಥಾಪಕರಾಗಿದ್ದ ಸತ್ಯನಾರಾಯಣ ಕರೋನಾ ಸಮಯದಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿ, ಪಟ್ಟಣದ ಯರಮದೊಡ್ಡಿ ರಸ್ತೆಯಲ್ಲಿ ಎರಡು ಎಕರೆ ಜಮೀನು ಖರೀದಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿನ ಮಾಹಿತಿ ಆಧರಿಸಿ ತಾಲೂಕಿನಲ್ಲಿ ಪ್ರಥಮ ಬಾರಿಗೆ ಡ್ರ್ಯಾಗನ್ ಹಣ್ಣು ಬೆಳೆದು ಯಶಸ್ಸು ಕಂಡಿದ್ದಾರೆ.

ಡ್ರ್ಯಾಗನ್ ಹಣ್ಣು ಥೈಲ್ಯಾಂಡ್, ವಿಯೆಟ್ನಾಂ ದೇಶಗಳಲ್ಲಿ ಜನಪ್ರಿಯವಾಗಿದೆ. ಕಡಿಮೆ ಸಕ್ಕರೆ ಅಂಶ, ಅಧಿಕ ಐರನ್, ಕ್ಯಾಲ್ಸಿಯಂ, ವಿಟಮಿನ್ ಹೊಂದಿರುವ ಈ ಹಣ್ಣು ಆರೋಗ್ಯಕ್ಕೆ ಪೂರಕವಾಗಿದೆ. ಸತ್ಯನಾರಾಯಣ ಅವರ ಕೃಷಿಗೆ ಪತ್ನಿ ಉಮಾ ಕೈಜೋಡಿಸಿದ್ದಾರೆ. ಎರಡು ಎಕರೆ ಜಮೀನಿನಲ್ಲಿ ಕೊಳವೆ ಬಾವಿ ಹಾಕಿಸಿ ಹನಿ ನೀರಾವರಿ ಮೂಲಕ ಡ್ರ್ಯಾಗನ್ ಹಣ್ಣು ಬೆಳೆಯುತ್ತಿದ್ದಾರೆ.

ಏಳು ಅಡಿಗಳ ಅಂತರದಲ್ಲಿ ಕಲ್ಲಿನ ಕಂಬಗಳನ್ನು ನೆಡಲಾಗಿದೆ. ಕಂಬದ ನಾಲ್ಕು ದಿಕ್ಕಿನಲ್ಲಿ ನಾಲ್ಕು ಡ್ರ್ಯಾಗನ್ ಸಸಿ ನೆಡಲಾಗಿದೆ. ಎರಡು ಎಕರೆ ಪ್ರದೇಶದಲ್ಲಿ 1040 ಕಂಬಗಳನ್ನು ಹಾಕಲಾಗಿದೆ. ಮಧ್ಯಪ್ರದೇಶದಿಂದ ಪ್ರತಿ ಸಸಿಗೆ 25 ರೂಪಾಯಿಯಂತೆ 4200 ಕ್ಕೂ ಹೆಚ್ಚು ಕೆಂಪು ಡ್ರ್ಯಾಗನ್ ಹಣ್ಣಿನ ಸಸಿ ತಂದು ನೆಡಲಾಗಿದೆ. ಅಧಿಕ ಇಳುವರಿಗಾಗಿ ಸಾವಯವ ಗೊಬ್ಬರ ಹಾಕುತ್ತಿದ್ದಾರೆ.

ಡ್ರಾೃಗನ್ ಹಣ್ಣು ಒಮ್ಮೆ ಸಸಿ ನಾಟಿ ಮಾಡಿದರೆ 30 ವರ್ಷದವರೆಗೆ ಫಲ ನೀಡುತ್ತದೆ. ನೀರು ಸರಾಗವಾಗಿ ಹರಿದು ಹೋಗುವ ಮಸಾರಿ (ಕೆಂಪು) ಭೂಮಿಯಲ್ಲಿ ಡ್ರ್ಯಾಗನ್ ಫ್ರೂಟ್ ಉತ್ತಮವಾಗಿ ಬೆಳೆಯುತ್ತದೆ. ಕಡಿಮೆ ನಿರ್ವಹಣೆ, ಕಡಿಮೆ ನೀರು ಬಳಕೆ ಡ್ರಾೃಗನ್ ಕೃಷಿಯ ವಿಶೇಷತೆಯಾಗಿದೆ.
ವರ್ಷದಲ್ಲಿ 4ರಿಂದ 5 ತಿಂಗಳು ಬೆಳೆ ಬರುವ ಡ್ರ್ಯಾಗನ್‌ನಿಂದ ಗಿಡವೊಂದಕ್ಕೆ 10 ರಿಂದ 12 ಕೆಜಿ ಹಣ್ಣು ಪಡೆಯಬಹುದಾಗಿದೆ. ಬೇಡಿಕೆ ಹೆಚ್ಚಿರುವ ಸಂದರ್ಭದಲ್ಲಿ ಕೆಜಿಗೆ 200 ರೂ. ವರಗೆ ಮಾರಾಟ ಮಾಡಲಾಗುತ್ತದೆ. ಸ್ಥಳೀಯವಾಗಿ ಹಾಗೂ ಇತರೆಡೆಯಿಂದ ವ್ಯಾಪಾರಸ್ಥರು ಬಂದು ಖರೀದಿ ಮಾಡುತ್ತಿದ್ದಾರೆ. ಹೊರ ರಾಜ್ಯಗಳಿಗೆ ರಫ್ತು ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದಾಗಿದೆ.

ಕೊಯ್ಲು ಮಾಡಿದ ವರ್ಷದಲ್ಲಿ ಹೂವು ಬಿಡುತ್ತದೆ. ಎರಡನೇ ವರ್ಷದಲ್ಲಿ ಹಣ್ಣು ಬಿಡುತ್ತದೆ. ಮೊದಲ ವರ್ಷ 7 ಕ್ವಿಂಟಾಲ್ ಹಣ್ಣು ಮಾರಾಟ ಮಾಡಲಾಗಿದೆ. ಈ ವರ್ಷ 2 ಟನ್ ಬಂದಿದೆ. ಸೀಜನ್ ಮುಗಿಯುವ ವೇಳೆಗೆ ಇನ್ನೂ 3 ಟನ್ ಹಣ್ಣು ಬರುತ್ತದೆ ಮಳೆ ಹೆಚ್ಚು ಬಂದರೆ ಅಧಿಕ ಇಳುವರಿ ಬರಲಿದೆ ಎನ್ನುತ್ತಾರೆ ರೈತ ಸತ್ಯನಾರಾಯಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net