ಮುಂಬರುವ ಸಾಲಿಗೆ 23.27 ಲಕ್ಷ ರೂ. ಲಾಭದ ನಿರೀಕ್ಷೆ

ಹುಣಸೂರು ನಗರದ ಪರಸಯ್ಯನ ಛತ್ರದಲ್ಲಿ ಸೋಮವಾರ ಆಯೋಜಿಸಿದ್ದ ಟಿಎಪಿಸಿಎಂಎಸ್ ವಾರ್ಷಿಕ ಸಭೆಯಲ್ಲಿ ಅಧ್ಯಕ್ಷ ಎಚ್.ಟಿ.ಬಾಬು ಮಾತನಾಡಿದರು. ಉಪಾಧ್ಯಕ್ಷ ರೇವಣ್ಣ, ನಿರ್ದೇಶಕರಾದ ಬಸವಲಿಂಗಯ್ಯ, ರಮೇಶ್, ವೆಂಕಟೇಶ್, ಪ್ರೇಮ್‌ಕುಮಾರ್ ಇತರರಿದ್ದಾರೆ.
ಹುಣಸೂರು ನಗರದ ಪರಸಯ್ಯನ ಛತ್ರದಲ್ಲಿ ಸೋಮವಾರ ಆಯೋಜಿಸಿದ್ದ ಟಿಎಪಿಸಿಎಂಎಸ್ ವಾರ್ಷಿಕ ಸಭೆಯಲ್ಲಿ ಅಧ್ಯಕ್ಷ ಎಚ್.ಟಿ.ಬಾಬು ಮಾತನಾಡಿದರು. ಉಪಾಧ್ಯಕ್ಷ ರೇವಣ್ಣ, ನಿರ್ದೇಶಕರಾದ ಬಸವಲಿಂಗಯ್ಯ, ರಮೇಶ್, ವೆಂಕಟೇಶ್, ಪ್ರೇಮ್‌ಕುಮಾರ್ ಇತರರಿದ್ದಾರೆ.
Published on

ಹುಣಸೂರು: 2024-25ನೇ ಸಾಲಿನಲ್ಲಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘವು (ಟಿಎಪಿಸಿಎಂಎಸ್) 20 ಲಕ್ಷದ 51 ಸಾವಿರ ರೂ.ಗಳ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಚ್.ಟಿ.ಬಾಬು ತಿಳಿಸಿದರು.

ಸೋಮವಾರ ನಗರದ ಪರಸಯ್ಯನ ಛತ್ರದಲ್ಲಿ ಆಯೋಜಿಸಿದ್ದ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಸಂಘದಲ್ಲಿ ಒಟ್ಟು 2457 ಸದಸ್ಯರಿದ್ದು, 28,18 ಲಕ್ಷ ರೂ.ಗಳ ಷೇರು ಬಂಡವಾಳವಿದೆ. ಆಪದ್ಧನ ನಿಧಿಯಿಂದ 5 ಲಕ್ಷ ರೂ.ಗಳು, ಷೇರು ಡಿವಿಡೆಂಟ್ ನಿಧಿಯಿಂದ 94 ಸಾವಿರ ರೂ.ಗಳು, ಕಟ್ಟಡ ನಿಧಿಯಿಂದ 3.78 ಲಕ್ಷ ರೂ.ಗಳ ಲಾಭಾಂಶ ಪಡೆಯಲಾಗಿದೆ. ಮುಂಬರುವ 2025-26ನೇ ಸಾಲಿಗಾಗಿ 23.27 ಲಕ್ಷ ರೂ.ಗಳ ನಿವ್ವಳ ಲಾಭ ಗಳಿಸುವ ನಿರೀಕ್ಷೆ ಹೊಂದಲಾಗಿದೆ ಎಂದರು.

ಬಾಕಿ ಸಾಲ ವಸೂಲಿಗೆ ಆಗ್ರಹ: ಷೇರುದಾರ ಬಿ.ಎನ್.ನಾಗರಾಜಪ್ಪ ಮಾತನಾಡಿ, 10 ವರ್ಷಗಳಿಂದ ಸಂಘದಿಂದ ಸಾಲ ಪಡೆದು ಮರುಪಾವತಿ ಮಾಡದ ಒಟ್ಟು 29.77 ಲಕ್ಷ ರೂ.ಗಳ ವಸೂಲಾತಿ ಪ್ರಕ್ರಿಯೆ ನಡೆಯದಿರುವುದು ವಿಷಾದದ ಸಂಗತಿಯಾಗಿದೆ. ಆದರೆ ಪ್ರತಿ ವರ್ಷ ಆಡಿಟ್ ರಿಪೋರ್ಟ್‌ನಲ್ಲಿ ಈ ಮೊತ್ತವನ್ನು ಕಾಣಿಸುತ್ತಲೇ ಇದ್ದೀರಿ. ಇದಕ್ಕೊಂದು ತಾರ್ಕಿಕ ಅಂತ್ಯ ಕಾಣಬೇಕಿದೆ. ಸಾಲ ಪಡೆದವರು ಮರಣ ಹೊಂದಿದ್ದರೆ ಅದನ್ನು ಬಿಟ್ಟು ಮಿಕ್ಕವರಿಂದ ಸಾಲ ವಸೂಲು ಮಾಡಿ. ಜತೆಗೆ ಷೇರುದಾರರ ಅನುಕೂಲಕ್ಕಾಗಿ ಮರಣನಿಧಿ ಸ್ಥಾಪಿಸಿದ್ದುಮ ಮರಣ ನಿಧಿಯ ಮೊತ್ತ ಕನಿಷ್ಠ 10 ಸಾವಿರ ರೂ.ಗಳಿಗೆ ಹೆಚ್ಚಿಸಿರಿ ಎಂದು ಒತ್ತಾಯಿಸಿದರು. ಇದಕ್ಕೆ ಇತರ ಸದಸ್ಯರು ಸಾಥ್ ನೀಡಿದರು.

ರಾಮಕೃಷ್ಣೇಗೌಡ ಮಾತನಾಡಿ, ಕಳೆದ ವಾರ್ಷಿಕ ಸಭೆಯಲ್ಲಿ ಈ ಮೊತ್ತವನ್ನು ಕೈಬಿಡಲು ನಿರ್ಧರಿಸಲಾಗಿದ್ದು, ಮತ್ತಿನ್ನೇಕೆ ಆಡಿಟ್ ರಿಪೋರ್ಟ್‌ನಲ್ಲಿ ತಂದಿದ್ದೀರಿ ಎಂದು ಬೇಸರ ವ್ಯಕ್ತಪಡಿಸಿದರು.

ಹೊಸೂರು ರಾಮೇಗೌಡ ಮಾತನಾಡಿ, ಡಿವಿಡೆಂಡ್ ನಿಧಿಯನ್ನು ಪ್ರತಿ ಬಾರಿಯೂ ಕಟ್ಟಡ ನಿಧಿಗೆ ಬಳಸುತ್ತಿದ್ದೀರಿ. ಷೇರುದಾರರಾದ ನಮಗೆ ಏನು ಕೊಡುತ್ತಿಲ್ಲವಲ್ಲ. ಕನಿಷ್ಠ ಪಕ್ಷ ಮುಂದಿನ ವಾರ್ಷಿಕ ಸಭೆಯಿಂದಲಾದರೂ ಪ್ರತಿಯೊಬ್ಬ ಷೇರುದಾರರಿಗೆ ಏನಾದರೂ ಗಿಫ್ಟ್ ಕೊಡಿ ಎಂದು ಒತ್ತಾಯಿಸಿದರು.

ಬೋಳನಹಳ್ಳಿ ಕುಬೇರೇಗೌಡ, ಯೋಗಣ್ಣ ಮುತ್ತಿತರರು, ನಮಗೆ ಸಭೆಯ ಆಹ್ವಾನ ಪತ್ರಿಕೆಯೇ ಬಂದಿಲ್ಲ. ಬೋಳನಹಳ್ಳಿಯಲ್ಲಿ 400 ಜನರ ಷೇರುದಾರರಿದ್ದು ಒಬ್ಬರಿಗೂ ಪತ್ರಿಕೆ ಬಂದಿಲ್ಲ. ಇದರಲ್ಲಿ ಯಾವುದಾದರು ಷಡ್ಯಂತ್ರ ಇದೆಯೇ ಎಂದು ಪ್ರಶ್ನಿಸಿದಾಗ, ನಿರ್ದೇಶಕರಾದ ಅಸ್ವಾಳ್ ಕೆಂಪೇಗೌಡ, ಬಸವಲಿಂಗಯ್ಯ, ಪ್ರೇಮ್‌ಕುಮಾರ್ ಇತರರು, ಅಂಚೆ ಕಚೇರಿ ಮೂಲಕ ಬೋಳನಹಳ್ಳಿ ಸದಸ್ಯರಿಗೆ ಕಳುಹಿಸಲಾಗಿದೆ. ಆದರೆ ಯಾಕೆ ತಲುಪಿಲ್ಲ ಎನ್ನುವುದನ್ನು ವಿಚಾರಿಸಲಾಗುವುದು. ಜತೆಗೆ ಮುಂದೆ ಹೀಗಾಗದಂತೆ ಕ್ರಮ ವಹಿಸಲಾಗುವುದು ಎಂದು ಸಮಾಧಾನ ಪಡಿಸಿದರು.

ಸಭೆಯಲ್ಲಿ ಉಪಾಧ್ಯಕ್ಷ ರೇವಣ್ಣ, ನಿರ್ದೇಶಕರಾದ ಬಸವಲಿಂಗಯ್ಯ, ಅಸ್ವಾಳ್ ಕೆಂಪೇಗೌಡ, ಬಿ.ನಾಗರಾಜ್, ಬಿ.ಎನ್.ವೆಂಕಟೇಶ್, ರಮೇಶ್, ಎಚ್.ಎನ್.ಚಂದ್ರಶೇಖರ್,ಎಚ್.ಪ್ರೇಮ್‌ಕುಮಾರ್, ಇಂದುಕಲಾ, ಮಂಗಳಗೌರಿ, ಅನಸೂಯ ಪ್ರಭಾರ ಕಾರ್ಯದರ್ಶಿ ಎ.ಎಸ್.ಹೇಮಲತಾ, ಸಿಬ್ಬಂದಿಯಾದ ವಿ.ವೆಂಕಟೇಶ್, ಎಚ್.ಎನ್.ರವಿಕುಮಾರ್, ಎಸ್..ಪಿ.ಮಧು, ಎಂ.ಆರ್.ಸುದರ್ಶನ್ ಸೇರಿದಂತೆ ಷೇರುದಾರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net