ಗುಣಮಟ್ಟದ ಶಿಕ್ಷಣಕ್ಕೆ ಪ್ರಾಧ್ಯಾಪಕರು ಅವಶ್ಯ: ಡಾ.ಅವಿಚಲ ಕಪೂರ್

mysore
Published on

ಮೈಸೂರು: ಭಾರತದಲ್ಲಿ ಪ್ರಸ್ತುತ 4 ಕೋಟಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ವ್ಯಾಸಂಗ ಮಾಡುತ್ತಿದ್ದು, ಈ ಪೈಕಿ ಶೇ.71ರಷ್ಟು ವಿದ್ಯಾರ್ಥಿಗಳು ಬಿ.ಎ., ಬಿ.ಕಾಂ. ಮತ್ತು ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದಾರೆ. ಆದ್ದರಿಂದ ಗುಣಮಟ್ಟದ ಪ್ರಾಧ್ಯಾಪಕರ ಅವಶ್ಯಕತೆ ದೇಶಕ್ಕೆ ಹೆಚ್ಚಿದೆ ಎಂದು ದೆಹಲಿ ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗದ ಜಂಟಿ ಕಾರ್ಯದರ್ಶಿ ಡಾ.ಅವಿಚಲ ಕಪೂರ್ ಹೇಳಿದರು.


ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವತಿಯಿಂದ ಮುಕ್ತಗಂಗೋತ್ರಿ ಕಾವೇರಿ ಸಭಾಂಗಣದಲ್ಲಿ ಪ್ರಾಧ್ಯಾಪಕರಿಗೆ ಆಯೋಜಿಸಿದ್ದ ‘ಉನ್ನತ ಶಿಕ್ಷಣದ ಬದಲಾವಣೆಯಲ್ಲಿ ಶಿಕ್ಷಕರ ಪಾತ್ರ’ ಕುರಿತು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಪ್ರಾಧ್ಯಾಪಕರು ಉನ್ನತ ಶಿಕ್ಷಣದ ಪರಿಣಿತರು. ವಾಸ್ತವವಾಗಿ ವಿದ್ಯಾರ್ಥಿ ಸಮೂಹದೊಂದಿಗೆ ನಿರಂತರ ಒಡನಾಟ, ಬೋಧನೆ, ಶೈಕ್ಷಣಿಕ ನೀತಿ, ಪ್ರಯೋಗ, ನಿರ್ಣಯ ಅನುಷ್ಠಾನಗಾರರು ಪ್ರಾಧ್ಯಪಕರು. ಹೀಗಾಗಿ, ಈ ಬೋಧಕರ ಮೇಲೆ ದೊಡ್ಡ ಹೊಣೆಗಾರಿಕೆ ಇದೆ ಎಂದರು.


ಉನ್ನತ ಶಿಕ್ಷಣದಲ್ಲಿ ಗುಣಮಟ್ಟ, ಶೈಕ್ಷಣಿಕ ಪ್ರಗತಿ ಮತ್ತು ಉತ್ಕೃಷ್ಟತೆ ತರಬೇಕಿದೆ. ಇದು ದೇಶದ ಸುಸ್ಥಿರ ಪ್ರಗತಿ, ಸಮುದಾಯ ಅಭಿವೃದ್ಧಿಗೆ ನೆರವಾಗಬೇಕು. ಶೈಕ್ಷಣಿಕ ಬದಲಾವಣೆ ನಾಯಕತ್ವವೂ ಆಗಬೇಕಿದೆ. ಹೀಗಾಗಿ, ಪ್ರಾಧ್ಯಾಪಕರ ಪಾತ್ರ ನಿರ್ಣಾಯಕ. ವೃತ್ತಿಮೌಲ್ಯ, ವೃತ್ತಿಜ್ಞಾನ, ವೃತ್ತಿ ಅಭಿವೃದ್ಧಿ ಕಡೆಗೆ ಇವರು ಹೆಚ್ಚು ಗಮನ ನೀಡಬೇಕು. ಇದರ ಲಾಭ ವಿದ್ಯಾರ್ಥಿಗಳಿಗೆ ವರ್ಗಾವಣೆಯಾಗಬೇಕು ಎಂದರು.


ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ಕಾಯ್ದುಕೊಳ್ಳುವುದಲ್ಲ. ಅದು ನಿರಂತರವಾಗಿ ಪರಿಷ್ಕೃಣೆಯಾಗಿ ಉನ್ನತೀಕರಣ ಮಾಡಬೇಕು. ಕಲಿಕೆ ಯಾವತ್ತೂ ನಿಂತ ನೀರಲ್ಲ. ಅದು ಚಲನಶೀಲ ಮಹಾನದಿ. ಶಿಕ್ಷಣದಲ್ಲಿರುವ ಹಾಲಿ ಮಾದರಿಯನ್ನು ಮುರಿದು ಹೊಸ ಮಾದರಿ ಸೃಷ್ಟಿಸಬೇಕು. ಇದು ಪ್ರಾಧ್ಯಾಪಕರ ಕಾಯಕ ಎಂದರು.


ಇದೀಗ ಶಿಕ್ಷಣದ ಪಾತ್ರ, ಬೋಧನಾ ನಿರ್ವಹಣೆಯ ಸ್ವರೂಪವೇ ಬಹಳ ಬದಲಾಗಿದೆ. ಗುರುಕುಲದಿಂದ ಆಧುನಿಕ ಮಾಹಿತಿ- ತಂತ್ರಜ್ಞಾನ ಯುಗಕ್ಕೆ ಕಾಲಿಟ್ಟಿರುವ ಸಂದರ್ಭದಲ್ಲಿ ಶಿಕ್ಷಕರೂ ಸಹ ಪರಿವರ್ತನೆಯಾಗಬೇಕು. ಡಿಜಿಟಿಲ್ ಮಾಧ್ಯಮ, ತಂತ್ರಜ್ಞಾನ ಗರಿಷ್ಠ ಮಟ್ಟದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲೂ ಬಳಕೆಗೆ ಮುಂದಾಗಬೇಕು ಎಂದು ತಿಳಿಸಿದರು.


ಅರ್ಥ ಮಾಡಿಕೊಳ್ಳುವಿಕೆ, ಸ್ಪಷ್ಟತೆ, ಅನುಷ್ಠಾನದ ಗುಣಗಳು ಬೋಧಕರಿಗೆ ಇರಬೇಕು. ಸರ್ಕಾರ ಮಾಡುವ ನೀತಿಗಳು ಅರ್ಥವಾಗದಿದ್ದರೆ, ಅದರ ಸ್ಪಷ್ಟತೆ ಇಲ್ಲದಿದ್ದರೆ ಉತ್ತಮ ಕಾರ್ಯಕ್ರಮಗಳಾಗಿದ್ದರೂ ಜಾರಿಯಲ್ಲಿ ವಿಫಲತೆ ಉಂಟಾಗುತ್ತದೆ ಎಂದು ಎಚ್ಚರಿಕೆ ನೀಡಿದರು.


ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ವಾತಾವರಣ ನಿರ್ಮಾಣ ಮಾಡಿ ಜಾಗತಿಕ ಮಟ್ಟದಲ್ಲಿ ಪೈಪೋಟಿ ಮಾಡಲು ಸ್ಪರ್ಧಾತ್ಮಕ ಗುಣವನ್ನೂ ಪ್ರಾಧ್ಯಾಪಕರು ಬೆಳೆಸಬೇಕಿದೆ. ಉನ್ನತ ಶಿಕ್ಷಣ ಬರೀ ಪದವಿಪ್ರಮಾಣ ವಿತರಣೆಯಷ್ಟೇ ಅಲ್ಲ, ವಿದ್ಯಾರ್ಥಿಗಳನ್ನು ಉದ್ಯೋಗಿಗಳಾಗಿಯೂ ರೂಪಿಸಬೇಕು ಎಂದು ಸಲಹೆ ನೀಡಿದರು.


ಅಂತಾರಾಷ್ಟ್ರೀಯ ಶಿಕ್ಷಣ ತಜ್ಞ ಎ.ಎಚ್.ಸಾಗರ್, ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ, ಕುಲಸಚಿವ ಪ್ರೊ.ಕೆ.ಬಿ.ಪ್ರವೀಣ್, ಡೀನ್‌ಗಳಾದ ಪ್ರೊ.ಎನ್.ಲಕ್ಷ್ಮೀ, ಪ್ರೊ.ರಾಮನಾಥ್ ನಾಯ್ಕ, ಕಾರ್ಯಕ್ರಮ ಸಂಚಾಲಕಿ ಡಾ.ಎಚ್.ರಾಜೇಶ್ವರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net