

ವಿಜಯವಾಣಿ ಸುದ್ದಿಜಾಲ ಬೆಳಗಾವಿ
ನೈತಿಕ ಮೌಲ್ಯಗಳನ್ನು ಕಳೆದುಕೊಂಡು ಸಮಾಜ ದಾರಿ ತಪ್ಪುತ್ತಿರುವ ಸಮಯದಲ್ಲಿ ಶರಣರ ವಿಚಾರಗಳನ್ನು ಅವಲೋಕಿಸುವ ಅಗತ್ಯವಿದೆ ಎಂದು ಆರ್‌ಎಲ್ ವಿಜ್ಞಾನ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಶಶಿಕಾಂತ ತಾರದಾಳೆ ಹೇಳಿದರು.
ಶಿವಬಸವ ನಗರದ ಲಿಂಗಾಯತ ಭವನದಲ್ಲಿ ಗುರವಾರ ಆಯೋಜಿಸಿದ್ದ ಅಮಾವಾಸ್ಯೆ ಅನುಭಾವ ಗೋಷ್ಠಿಯಲ್ಲಿ ವಚನಗಳಲ್ಲಿ ನೀತಿ ಸಂಹಿತೆ ವಿಷಯವಾಗಿ ಮಾತನಾಡಿದ ಅವರು, ಇಂದು ಯುವ ಜನಾಂಗ ದಾರಿ ತಪ್ಪಿ ವ್ಯಸನಗಳಿಗೆ ಈಡಾಗುತ್ತಿದ್ದಾರೆ. ಯುವಜನಾಂಗ ದಾರಿ ತಪ್ಪಿದರೆ ಸಮಾಜ ಹಾಗೂ ಧರ್ಮ ಉಳಿಸುವುದು ದುರ್ಲಭ. ಅವರಿಗೆ ವಚನ ಸಂಸ್ಕಾರ, ನೈತಿಕ ಶಿಕ್ಷಣ ನೀಡಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಮಾತನಾಡಿ, ಸಮಾಜ ಶುದ್ಧೀಕರಿಸುವ ಸಂಜೀವಿನಿ ಶರಣರ ಮಾತುಗಳಲ್ಲಿ ಅಡಗಿದೆ. ವಚನಗಳು ಆದರ್ಶ ಜೀವನಕ್ಕೆ ಸೋಪಾನವಾಗಿವೆ ಎಂದರು.
ಸಾನ್ನಿಧ್ಯ ವಹಿಸಿದ್ದ ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಮಾತನಾಡಿ, ನಡೆನುಡಿಯ ಸಿದ್ಧಾಂತಕ್ಕೆ ಹೆಚ್ಚು ಒತ್ತು ನೀಡಿದ್ದ ಶರಣರು ಕಾಯಕ ಸಂಸ್ಕೃತಿ ಎತಿ ್ತಹಿಡಿದರು. ಸಾಮರಸ್ಯದ ಮೂಲಕ ಜೀವನ ದರ್ಶನ ಮಾಡಿಕೊಟ್ಟರು. ಸತ್ಸಂಗ ಆಲಿಸಿ ಜೀವನವನ್ನು ರೂಪಿಸಿಕೊಳ್ಳಿ ಎಂದು ಕರೆ ನೀಡಿದರು.
ಡಾ.ಎಫ್.ವಿ.ಮಾನ್ವಿ, ಸೋಮಲಿಂಗ ಮಾವಿನಕಟ್ಟಿ, ಆರ್.ಪಿ. ಪಾಟೀಲ, ಜ್ಯೋತಿ ಬದಾಮಿ, ನಿಖಿಲ್ ಅರಳಿಮಟ್ಟಿ, ಶೋಭಾ ಬನಶಂಕರಿ, ಶೈಲಜಾ ಸಂಸುದ್ದಿ, ಮಂಗಲಾ ಕಾಕತಿಕರ, ಅನಿತಾ ಮಾಲಗತ್ತಿ, ದಾನಮ್ಮ ಅಂಗಡಿ, ವಿದ್ಯಾ ಸವದಿ ಇತರರಿದ್ದರು.