'ಸಿವಿಲ್ ಇಂಜಿನಿಯರ್‌ಗಳಿಗೂ ವೃತ್ತಿಪರ ಕಾಯ್ದೆ ಜಾರಿಗೊಳಿಸಲಿ'

4
Published on

ಮೈಸೂರು: ವೈದ್ಯಕೀಯ, ನರ್ಸಿಂಗ್ ಸೇರಿದಂತೆ ವಿವಿಧ ವೃತ್ತಿಗಳಿಗೆ ಇರುವಂತೆ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವ ಸಿವಿಲ್ ಇಂಜಿನಿಯರ್‌ಗಳಿಗೂ ವೃತ್ತಿಪರ ಕಾಯ್ದೆ ಜಾರಿಗೊಳಿಸಬೇಕು ಎಂದು ಸಿವಿಲ್ ಇಂಜಿನಿಯರ್ಸ್‌ ಒಕ್ಕೂಟದ ಅಧ್ಯಕ್ಷ ಶ್ರೀಕಾಂತ್ ಎಸ್. ಚನ್ನಾಳ್ ಸರ್ಕಾರವನ್ನು ಒತ್ತಾಯಿಸಿದರು.
ಸಿವಿಲ್ ಇಂಜಿನಿಯರ್ಸ್‌ ಒಕ್ಕೂಟದಿಂದ ನಗರದ ವಿಶ್ವೇಶ್ವರನಗರದಲ್ಲಿರುವ ಕಟ್ಟಡ ನಿರ್ಮಾಣಗಾರರ ಸಂಘದ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ‘ವೃತ್ತಿಪರ ಸಿವಿಲ್ ಇಂಜಿನಿಯರ್‌ಗಳ ಕಾಯ್ದೆ’ ಕುರಿತ ‘ಸಂವಾದಾತ್ಮಕ ಅಧಿವೇಶನ’ದಲ್ಲಿ ಅವರು ಮಾತನಾಡಿದರು.
ಅತಿ ಹೆಚ್ಚು ಉದ್ಯೋಗ ಸೃಷ್ಟಿಸುವ ದೇಶದ ಎರಡನೇ ಅತಿ ದೊಡ್ಡ ಕ್ಷೇತ್ರವಾಗಿರುವ ನಿರ್ಮಾಣ ಕ್ಷೇತ್ರಕ್ಕೆ ವೃತ್ತಿಪರತೆ ಬೇಕಿದೆ. ನಿರ್ಮಾಣ ಹಾಗೂ ರಿಯಲ್ ಎಸ್ಟೇಟ್‌ನಲ್ಲಿ ಒಟ್ಟಾರೆ ದೇಶದ ಜಿಡಿಪಿಯ ಸುಮಾರು ಶೇ.24ರಷ್ಟು ಕೊಡುಗೆ ನೀಡುವ ದೊಡ್ಡ ಉದ್ಯಮವಾಗಿದೆ ಬೆಳೆದಿದೆ ಎಂದರು.
ಇಂತಹ ಮಹತ್ವದ ಉದ್ಯಮಕ್ಕೆ ವೈದ್ಯಕೀಯ, ನರ್ಸಿಂಗ್, ಲೆಕ್ಕಪರಿಶೋಧಕರು, ವಕೀಲ ವೃತ್ತಿ ಸೇರಿದಂತೆ ಇತರ ವೃತ್ತಿಗಳಿಗೆ ಇರುವ ವೃತ್ತಿಪರತೆ ಕಾಯ್ದೆ ಇಲ್ಲ. ಹೀಗಾಗಿ ಅನನುಭವಿಗಳು, ಸಿವಿಲ್ ಇಂಜಿನಿಯರಿಂಗ್ ಜ್ಞಾನ ಇಲ್ಲದವರು ಕ್ಷೇತ್ರಕ್ಕೆ ಬರುತ್ತಿದ್ದಾರೆ. ಇದರಿಂದ ನಿರ್ಮಾಣ ಕಾರ್ಯದಲ್ಲಿ ಗುಣಮಟ್ಟ, ನಿಖರತೆ ಇಲ್ಲದೆ ಸಾಕಷ್ಟು ಕಟ್ಟಡಗಳು ದೀರ್ಘಾವಧಿ ಬಾಳಿಕೆ ಬಾರದೆ ಕುಸಿಯುತ್ತಿವೆ ಎಂದು ಹೇಳಿದರು.
ದೇಶದ ನಿರ್ಮಾಣ ಕಾರ್ಯದಲ್ಲಿ ಸಿವಿಲ್ ಇಂಜಿನಿಯರಿಂಗ್ ಬಹುದೊಡ್ಡ ಪಾತ್ರ ವಹಿಸುತ್ತದೆ. ವಸತಿ, ಮೂಲಸೌಲಭ್ಯ, ಜಲಸಂಪನ್ಮೂಲ, ರೈಲ್ವೆ, ಬಂದರು, ಕೈಗಾರಿಕೆ, ರಸ್ತೆ ನಿರ್ಮಾಣ, ನೀರು ಸರಬರಾಜು, ಒಳಚರಂಡಿ ಸೇರಿದಂತೆ ಇನ್ನಿತರ ಕ್ಷೇತ್ರದಲ್ಲಿ ಸಿವಿಲ್ ಇಂಜಿನಿಯರಿಂಗ್ ಅತ್ಯಗತ್ಯವಾಗಿ ಬೇಕಿದೆ ಎಂದರು.
ಆದರೆ ಇಂತಹ ಮಹತ್ವದ ಕ್ಷೇತ್ರಕ್ಕೆ ಬಲ ನೀಡಲು ವೃತ್ತಿಪರತೆ ಕಾಯ್ದೆಯನ್ನು ಜಾರಿಗೊಳಿಸಬೇಕಿದೆ. ಇದರಿಂದ ತಜ್ಞರಿಂದ ಗುಣಮಟ್ಟದ ಕಾಮಗಾರಿ ಸಾಧ್ಯವಾಗುತ್ತದೆ. ಸರ್ಕಾರವೂ ಸಿವಿಲ್ ಅನುಭವವೇ ಇಲ್ಲದ ಜನರಿಗೆ ಕಾಮಗಾರಿ ಗುತ್ತಿಗೆಯನ್ನು ನೀಡುತ್ತಿದ್ದು, ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು.
ರಾಜ್ಯದಲ್ಲಿ ಸುಮಾರು 5 ಲಕ್ಷ ಸಿವಿಲ್ ಇಂಜಿನಿಯರುಗಳು, ದೇಶದಲ್ಲಿ ಒಂದೂವರೆ ಕೋಟಿ ಜನ ಇದ್ದಾರೆ. ಇವರ ಬಳಿ ಕೆಲಕಾಲ ಕೆಲಸ ಮಾಡುವವರು ಕೆಲ ದಿನಗಳಲ್ಲಿಯೇ ತಾವೇ ನಿರ್ಮಾಣ ಕಾರ್ಯಕ್ಕೆ ಇಳಿಯುತ್ತಿದ್ದಾರೆ. ಇದರಿಂದ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿಯೂ ‘ವೃತ್ತಿಪರ ಸಿವಿಲ್ ಇಂಜಿನಿಯರ್‌ಗಳ ಕಾಯ್ದೆ’ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರದ ಕಾನೂನು ಇಲಾಖೆಯ ಉಪ ಕಾರ್ಯದರ್ಶಿ ಎಂ.ಮಹೇಶ್ ಬಾಬು, ಸಿವಿಲ್ ಇಂಜಿನಿಯರ್ಸ್‌ ಒಕ್ಕೂಟದ ಕಾರ್ಯದರ್ಶಿ ಎಸ್.ಎಂ.ಅಜಿತ್‌ಕುಮಾರ್, ಖಜಾಂಚಿ ಟಿ.ಎಸ್.ರಾಜಗೋಪಾಲನ್, ಒಕ್ಕೂಟದ ಮೈಸೂರು ಶಾಖೆಯ ಅಧ್ಯಕ್ಷ ಡಾ.ಎಸ್.ರವಿರಾಜ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net