ವಿಶ್ವದ ಶ್ರೇಷ್ಠ, ಅಪರೂಪದ 'ಜಾದೂಗಾರ' ಪ್ರೊ.ಶಂಕರ...

Main
Published on

ವಿದೇಶದಲ್ಲೂ ಕೈಚಳಕ ಪ್ರದರ್ಶನ

'ಗಿಲಿಗಿಲಿ ಮ್ಯಾಜಿಕ್​'ನ ಗಾರುಡಿಗ

ಪ್ರಶಾಂತ ಭಾಗ್ವತ, ಉಡುಪಿ

ಮನೋರಂಜಕ, ಅಚ್ಚರಿಯ ಹಾಗೂ ಅಪರಿಚಿತವಾಗಿದ್ದ ಅಪರೂಪದ ಜಾದೂ ಕಲೆಯನ್ನು ಅಭ್ಯಸಿಸಿ, 60ರ ದಶಕದಲ್ಲಿ ದಕ್ಷಿಣ ಭಾರತದಲ್ಲಿ ಆ ಕಲೆಗೆ ಮಾನ್ಯತೆ ದೊರಕಿಸಿಕೊಟ್ಟ ಹೆಗ್ಗಳಿಗೆ ಉಡುಪಿಯ ಜಾದೂಗಾರ ಪ್ರೊ.ಶಂಕರ್​ ಅವರಿಗೆ ಸಲ್ಲುತ್ತದೆ.

ದೇಶವಷ್ಟೇ ಅಲ್ಲದೆ, ಯುಎಸ್​ಎ, ಯುಕೆ, ಸ್ವಿಜರ್​ಲ್ಯಾಂಡ್​, ಜರ್ಮನಿ, ಯುಎಇ, ಶ್ರೀಲಂಕಾ, ಮಲೇಷಿಯಾ, ಮಾರಿಷಸ್​ ಮುಂತಾದ ಅನೇಕ ವಿದೇಶಿ ನೆಲದಲ್ಲಿ ಜಾದೂ ಕೈಚಳಕ ತೋರಿದ್ದಾರೆ. 18 ಜನರನ್ನೊಳಗೊಂಡ ಗಿಲಿಗಿಲಿ ಮ್ಯಾಜಿಕ್​ ತಂಡದೊಂದಿಗೆ ಹತ್ತು ಸಾವಿರಕ್ಕೂ ಅಧಿಕ ಪ್ರದರ್ಶನ ನೀಡಿ, ಭಾರತದ ಹಿರಿಮೆ ಹೆಚ್ಚಿಸಿದ್ದಾರೆ.

Galli
ಉಡುಪಿಯಲ್ಲಿ ನಡೆದ ಜಾಗತಿಕ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ವಿಶ್ವದ ಖ್ಯಾತ ಜಾದೂಗಾರ ಡೀನ್ ಗನರ್ಸನ್ ಹಾಗೂ ತಂಡದ ಸದಸ್ಯರು.

ಜಾಗತಿಕ ಜಾದೂ ಸಮ್ಮೇಳನ

ಉಡುಪಿಯಲ್ಲಿ ಮೂರು ಬಾರಿ (ಗಿಲಿಗಿಲಿ-94, ಗಿಲಿಗಿಲಿ-97 ಹಾಗೂ ಗಿಲಿಗಿಲಿ-2001) ಜಾಗತಿಕ ಜಾದೂ ಸಮ್ಮೇಳನ ಆಯೋಜಿಸಿ ಜಗತ್ತಿನ ಪ್ರಸಿದ್ಧ ಜಾದೂಗಾರರಿಂದ ಪ್ರದರ್ಶನ ಏರ್ಪಡಿಸಿದ್ದರು. ಅಳಿದು ಹೋಗುತ್ತಿದ್ದ ದೇಶ-ವಿದೇಶಗಳ ಬೀದಿಬದಿಯ ಜಾದೂಗಾರರಿಗೂ ಉತ್ತಮ ವೇದಿಕೆ ಒದಗಿಸಿದರು. ಭಾರತದ ಸಾಂಪ್ರದಾಯಿಕ ಜಾದೂ 'ದ ಗ್ರೇಟ್​ ಇಂಡಿಯನ್​ ರೋಪ್​ ಟ್ರಿಕ್​'ಅನ್ನು ಈ ಸಮ್ಮೇಳನದಲ್ಲಿ ಪರಿಚಯಿಸಿದರು. ಭಾರತದಲ್ಲೆಲ್ಲೂ ಪ್ರದರ್ಶನ ನೀಡಲು ಒಪ್ಪದ ವಿಶ್ವದ ಶ್ರೇಷ್ಠ ಎಸ್ಕೇಪ್​ ಏಕ್ಟ್​ ಜಾದೂಗಾರ ಡೀನ್​ ಗನರ್ಸನ್​ 3ನೇ ಜಾಗತಿಕ ಜಾದೂ ಸಮ್ಮೇಳನಕ್ಕೆ ಆಗಮಿಸಿದ್ದಲ್ಲದೆ, ಶಂಕರ ಅವರ ಮನೆಯಲ್ಲೇ ವಾಸ್ತವ್ಯ ಮಾಡಿದ್ದರು.

ಕಲೆಯಲ್ಲೇ ಬ್ಯಾಂಕಿಂಗ್​ ಸೇವೆ

Jaadu-1
ಪಿಯುಸಿಯಲ್ಲಿದ್ದಾಗ ಕಲ್ಕತ್ತಾ ಜಾದೂ ಪ್ರತಿಷ್ಠಾನದಿಂದ ಪ್ರೊಫೆಸರ್​ ಪದವಿ ಗಳಿಸಿ, ಆ ಕಾಲದ ಜಾದೂ ದಿಗ್ಗಜರಿಂದ 'ಬುಲೆಟ್​ ಪ್ರೂಫ್​ ಮೆಜೀಷಿಯನ್ ಎಂದು ಪ್ರಶಂಸಿಸಲ್ಪಟ್ಟರು. ಮೈಸೂರಿನಲ್ಲಿ ಮನ:ಶಾಸ್ತ್ರ ಪದವಿ ಗಳಿಸಿ ಹಿಪ್ನೋಟಿಸಂ ವಿದ್ಯೆಯಲ್ಲೂ ಪರಿಣತರಾದರು. ಸಿಂಡಿಕೇಟ್​ ಬ್ಯಾಂಕ್​ನವರು ಶಂಕರ ಅವರಿಗಾಗಿಯೇ ಇಂಡಸ್ಟ್ರಿಯಲ್​ ಮೆಜೀಶಿಯನ್​ ಹುದ್ದೆ ಸೃಷ್ಟಿಸಿ ನೀಡಿದರು. 1974ರಿಂದ 2001ರ ವರೆಗೂ ಉತ್ತರ ಭಾರತದ ಹಳ್ಳಿ ಹಳ್ಳಿಗಳಲ್ಲೂ ಜಾದೂ ಮೂಲಕ ಬ್ಯಾಂಕಿಂಗ್​ ಸೇವೆಗಳನ್ನು ಜನಸಾಮಾನ್ಯರಿಗೆ ತಲಪಿಸಿದ ವಿಶ್ವದ ಏಕೈಕ ಜಾದೂಗಾರ ಇವರಾಗಿದ್ದಾರೆ.

ಬಹುಮುಖಿ ವ್ಯಕ್ತಿತ್ವದ ಪ್ರೊ.ಶಂಕರ

ಎನ್​ಸಿಸಿ ಕೆಡೆಟ್​, ಚಿತ್ರ ಕಲಾವಿದ, ಕವಿ, ಕತೆಗಾರರೂ ಆಗಿದ್ದಾರೆ. 8ನೇ ತರಗತಿಯಲ್ಲಿದ್ದಾಗಲೇ ಬೆನ್ನು ಬಿಡದ ಬೇತಾಳ ಕಾದಂಬರಿ ಬರೆದು ಪ್ರಕಟಿಸಿದ್ದರು. ಯಕ್ಷಗಾನ, ತಾಳಮದ್ದಳೆ, ನಾಟಕ, ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ಪುತ್ರ ತೇಜಸ್ವಿ (ಜ್ಯೂ.ಶಂಕರ)ಗೂ ಜಾದೂ ತರಬೇತಿ ನೀಡಿದ್ದು, ಆತ 3ನೇ ವಯಸ್ಸಿನಲ್ಲಿಯೇ ಅಮೆರಿಕಾದಲ್ಲಿ ಜಗತ್​ ಪ್ರಸಿದ್ಧ 'ಹೌದಿನಿ ಜಾದೂ' ಪ್ರದರ್ಶಿಸಿದ್ದಾನೆ. ಆತನೂ ಸಹ ಜಗತ್ತಿನ ಶ್ರೇಷ್ಠ ಜಾದೂ ದಿಗ್ಗಜರಲ್ಲಿ ಒಬ್ಬನಾಗಿದ್ದಾನೆ.

ಡೊಂಬರಾಟ ನೋಡಿ ಹುಟ್ಟಿತು ಜಾದೂ ಆಸಕ್ತಿ

ಜಾದೂ ಪ್ರದರ್ಶಿಸುತ್ತಿರುವ ಪ್ರೊ.ಶಂಕರ

ಪ್ರೊ.ಶಂಕರ ಅವರು ಕಾಸರಗೋಡು ಬದಿಯಡ್ಕ ಸಮೀಪದ ಶಿಮ್ಲಡ್ಕದಲ್ಲಿ ಶಂಭಟ್ಟ ಮತ್ತು ಪರಮೇಶ್ವರಿ ದಂಪತಿಯ ಮಗನಾಗಿ 1951ರಲ್ಲಿ ಜನಿಸಿದರು. ಸ್ವಭಾವತಹ ಕುತೂಹಲಿ, ಸಾಹಸಿಯಾಗಿದ್ದ ಶಂಕರ, ಚಿಕ್ಕವನಿರುವಾಗ ಡೊಂಬರಾಟದವರ ಜಾದೂ ಆಟ ನೋಡಿ ಆ ವಿದ್ಯೆಯತ್ತ ಆಸಕ್ತಿ ಹುಟ್ಟಿತು. ಹೈಸ್ಕೂಲ್​ನಲ್ಲಿರುವಾಗಲೇ ಚಿಕ್ಕ ಜಾದೂ ಕಾರ್ಯಕ್ರಮ ನೀಡಿದರು. 14ನೇ ವಯಸ್ಸಿನಲ್ಲಿ ಬೆಳ್ತಂಗಡಿಯ ಸಮಾಜ ಮಂದಿರದಲ್ಲಿ ಕೋವಿಯಿಂದ ಹೊಡೆದ ಗುಂಡು ಹಿಡಿಯುವುದು, ಜೀವಂತ ಸಮಾಧಿಯಂತಹ ಅಪಾಯಕಾರಿ ಜಾದೂ ಪ್ರದರ್ಶಿಸಿ ಗಮನ ಸೆಳೆದರು. ಡಾ. ಕೋಟ ಶಿವರಾಂ ಕಾರಂತ್​ ಅವರೂ ಸಹ ಶಂಕರರ ಜಾದೂ ಕಾರ್ಯಕ್ರಮ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಮೈಸೂರು ಪೇಟವನ್ನೂ ತೊಡಿಸಿ ಸನ್ಮಾನಿಸಿ, ಗೌರವಿಸಿದ್ದರು. 

ಜಾದೂಗಾರನ ವಿವಿಧ ಸಾಮಾಜಿಕ ಬದ್ಧತೆ

* ಗೆಳೆಯರೊಂದಿಗೆ ಕಣ್ಣಿಗೆ ಪ್ಲಾಸ್ಟರ್​ ಬ್ಯಾಂಡೇಜ್​ ಕಟ್ಟಿಕೊಂಡು ಬೈಕ್​ನಲ್ಲಿ ಮಂಗಳೂರಿನಿಂದ ಕಾರವಾರದವರೆಗೆ 'ಜಾಗೃತಿಗಾಗಿ ಜಾದೂ' ಜಾಥಾ.  * ರೋಗಿಗಳ ಆರೈಕೆಗಾಗಿ ಆಸ್ಪತ್ರೆಗಳಲ್ಲೂ ಕೈಚಳಕದ ಮೂಲಕ ದೈಹಿಕ, ಮಾನಸಿಕ ಸದೃಢರಾಗಲು ಪ್ರಯೋಗ.

* ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದವರ ವಿನಂತಿಯಂತೆ ಜನರಿಗೆ ಅಧ್ಯಾತ್ಮದ ಒಲವು ಮೂಡಿಸಲು 'ಆಧ್ಯಾತ್ಮಿಕ ಜಾದೂ' ಕಾರ್ಯಕ್ರಮ. * ಕೈದಿಗಳ ಮನ:ಪರಿವರ್ತನೆಗಾಗಿ ದೆಹಲಿಯ ತಿಹಾರ್​ ಜೈಲಿನಲ್ಲಿ ಜಾದೂ ಪ್ರದರ್ಶನ. * ದೇಶದ ಪಾಕಿಸ್ಥಾನ ಮತ್ತು ಚೈನಾ ಗಡಿಗಳಲ್ಲಿ ಸೇವೆ ಸಲ್ಲಿಸುವ ಯೋಧರಿಗಾಗಿ ಜಾದೂ. * ಕಾರ್ಗಿಲ್​ ಯುದ್ಧದ ಸಮಯದಲ್ಲಿ 2000ನೇ ಇಸವಿಯಲ್ಲಿ 'ಕಾರ್ಗಿಲ್​ ಜಾದೂ' ವಿಶೇಷ ಕಾರ್ಯಕ್ರಮ ರೂಪಿಸಿ, ಪ್ರದರ್ಶನಗಳಿಂದ ಸಂಗ್ರಹಿತ ಹಣ 'ಕಾರ್ಗಿಲ್​ ಯೋಧರ ನಿಧಿ'ಗೆ ಸಮರ್ಪಣೆ. * ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯವರ ಕೋರಿಕೆಯಂತೆ "ಮದ್ಯವರ್ಜನ ಶಿಬಿರ'ಗಳಲ್ಲಿ ಮದ್ಯ ವ್ಯಸನಿಗಳ ಮನ:ಪರಿವರ್ತನೆಗೆ 'ಜಾದೂ ವಿದ್ಯಾ' ಪ್ರದರ್ಶನ.
Jaadu-4K
ಜಾಗತಿಕ ಜಾದೂ ವಲಯದಲ್ಲಿ ಪ್ರೊ.ಶಂಕರ ಅವರದ್ದು ಬಹಳ ದೊಡ್ಡ ಹೆಸರು. ರಾಜ್ಯವೂ ಸೇರಿದಂತೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಮೊದಲು ಜಾದೂ ಪ್ರದರ್ಶನ ನೀಡಿದವರು. ಕುಟುಂಬ ಸದಸ್ಯರೊಂದಿಗೆ ಜಾದೂ ಪ್ರದರ್ಶನ ನೀಡಿದ ದೇಶದ ಏಕಮೇವ 'ಫೆಮಿಲಿ ಟ್ರುಪ್​' ಹೆಗ್ಗಳಿಕೆ ಗಳಿಸಿದವರು. ಉಡುಪಿಯನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಿದ 74 ವರ್ಷದ ಹೆಮ್ಮೆಯ ಕನ್ನಡಿಗನಿಗೆ ಇಂದು (ಡಿ.14) ಅಭಿನಂದನಾ ಸಮಾರಂಭ ಏರ್ಪಡಿಸಿದ್ದೇವೆ. | ರವಿರಾಜ್​ ಎಚ್​.ಪಿ. ಸಂಚಾಲಕ, ಪ್ರೊ.ಶಂಕರ ಅಭಿನಂದನಾ ಸಮಿತಿ

ಉಡುಪಿಯಲ್ಲಿ ಅಭಿನಂದನಾ ಸಮಾರಂಭ

* ವಿಶ್ವಶ್ರೇಷ್ಠ ಕಲಾವಿದನಿಗೆ ತವರೂರು ಸನ್ಮಾನ ಡಿ.14ರಂದು ಮಧ್ಯಾಹ್ನ 3:30ಕ್ಕೆ ಪ್ರೊಫೆಸರ್​ ಶಂಕರ​ ಅಭಿನಂದನಾ ಸಮಿತಿ ಉಡುಪಿ, ಅಂತಾರಾಷ್ಟ್ರೀಯ ಜಾದು ಕಲಾವಿದ ಪ್ರೊ.ಶಂಕರ ಅವರ ಅಭಿನಂದನಾ ಕಾರ್ಯಕ್ರಮ ಆಯೋಜಿಸಿದ್ದು, ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಹವಾನಿಯಂತ್ರಿತ ಸಭಾಂಗಣದಲ್ಲಿ ಸಮಾರಂಭ ನಡೆಯಲಿದೆ. ಮಧ್ಯಾಹ್ನ 3:30ಕ್ಕೆ ವಿದುಷಿ ಮಂಜರಿಚಂದ್ರ ಅವರ ಶಿಷ್ಯರಿಂದ 'ನೃತ್ಯ ಸಿಂಚನ' ನಡೆಯಲಿದ್ದು, ಬಳಿಕ ಧರ್ಮದರ್ಶಿ, ಡಾ. ಹರಿಕೃಷ್ಣ ಪುನರೂರು ಉದ್ಘಾಟಿಸಲಿದ್ದಾರೆ. ಜಯಕೃಷ್ಣ ಪರಿಸರ ಪ್ರೇಮಿ ಸಮಿತಿ ಮುಂಬಯಿಯ ತೋನ್ಸೆ ಜಯಕೃಷ್ಣ ಶೆಟ್ಟಿ, ಭಾರತ ಸ್ಕೌಟ್ಸ್​ ಮತ್ತು ಗೈಡ್ಸ್​ನ ಜಿಲ್ಲಾ ಮುಖ್ಯ ಆಯುಕ್ತ ಜಯಕರ ಶೆಟ್ಟಿ ಇಂದ್ರಾಳಿ, ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್​ ಪಾಲ್ಗೊಳ್ಳಲಿದ್ದಾರೆ. ಪ್ರೊ. ಶಂಕರ ಕುರಿತಾದ ಪ.ರಾಮಕೃಷ್ಣ ಶಾಸ್ತ್ರಿ ರಚಿಸಿದ ಪುಸ್ತಕವನ್ನು ನಾಡೋಜ ಪ್ರೊ. ಕೆ.ಪಿ. ರಾವ್​ ಬಿಡುಗಡೆ ಮಾಡಲಿದ್ದಾರೆ. ಪ್ರೊ.ಶಂಕರ ಕುರಿತಾಗಿ ತೇಜಸ್ವಿ ಶಂಕರ್​ ಮಾತನಾಡಲಿದ್ದಾರೆ. ಸಂಜೆ 6:30ಕ್ಕೆ ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದ ವಿನಯ್​ ಹೆಗಡೆ ಅವರಿಂದ 'ಗಾಳಿಯಲ್ಲಿ ಚಿತ್ತಾರ' ಎನ್ನುವ ವಿನೂತನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ 7ಕ್ಕೆ ಪ್ರೊ.ಶಂಕರ ಅವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದ್ದು, ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಖ್ಯಾತ ವಾಗ್ಮಿ ಹಾಗೂ ಇಂದ್ರಜಾಲ ಪ್ರವೀಣ ಓಂ ಗಣೇಶ್​ ಉಪ್ಪುಂದ ಅಭಿನಂದನಾ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದ ನಂತರ ಸಂಘ-ಸಂಸ್ಥೆಗಳು ಹಾಗೂ ಅಭಿಮಾನಿಗಳಿಗೆ ಪ್ರೊ.ಶಂಕರ ಅವರನ್ನು ಗೌರವಿಸಲು ಅವಕಾಶ ನೀಡಲಾಗಿದೆ ಎಂದು ಅಭಿನಂದನಾ ಸಮಿತಿ ತಿಳಿಸಿದೆ.

Jaadu-5K
ಕೇವಲ ಮನೋರಂಜನೆಗಷ್ಟೇ ಅಲ್ಲದೆ ಮಾಟ-ಮಂತ್ರ, ಪವಾಡ, ಮೂಢನಂಬಿಕೆ, ಬ್ಲ್ಯಾಕ್ ಮ್ಯಾಜಿಕ್​ನಂತಹ ಅಂಧಶ್ರದ್ಧೆಗಳ ವಿರುದ್ಧ ಹೋರಾಡುವುದು, ನಾನಾ ಕಪಟಿಗಳ ಮೋಸದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ನನ್ನ ಗಿಲಿಗಿಲಿ ಮ್ಯಾಜಿಕ್​ ಪ್ರದರ್ಶನದ ಉದ್ದೇಶವಾಗಿತ್ತು. ಈಗಲೂ ಯಾರಾದರೂ ಆಸಕ್ತಿ ತೋರಿದರೆ ಸಂಘಟಕರಿಗೆ ಹೊರೆಯಾಗದಂತೆ ಖರ್ಚು-ವೆಚ್ಚ ಮಾತ್ರ ಸ್ವೀಕರಿಸಿ ಜನಜಾಗೃತಿಗಾಗಿ ಜಾದೂ ಮಾಡಲು ಸಿದ್ಧನಿದ್ದೇನೆ. (ಮೊ.ಸಂ. 9880312671)| ಪ್ರೊ. ಶಂಕರ. ಜಾದೂಗಾರ, ಉಡುಪಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net