

ವಿಜಯವಾಣಿ ಸುದ್ದಿಜಾಲ ಉಡುಪಿ
ಬದುಕಿನ ಸತ್ಯ, ಮಾಯೆಯ ನೆಲೆಯ ಜೀವನದಲ್ಲಿ ಪ್ರೊ.ಶಂಕರ್ ಅವರು ಕಲೆಗಾಗಿ ಬದುಕಿದ ವ್ಯಕ್ತಿ. ಮ್ಯಾಜಿಕ್ ಮೂಲಕವೂ ಜನರ ಮದ್ಯವ್ಯಸನ ಮುಕ್ತ ಬದುಕಿಗೆ ಕೊಡುಗೆ ನೀಡಿದ್ದಾರೆ. ನಾಡಿನ ಎಲ್ಲ ಕಲಾವಿದರೂ ಸಹ ಕಲೆಯೊಂದಿಗೆ ಗಳಿಸಿದ ಸಂಪತ್ತಿನಲ್ಲಿ ಅಲ್ಪ ಭಾಗವನ್ನು ಸಮಾಜಕ್ಕೆ ನೀಡುವ ಮೂಲಕ ಋಣ ತೀರಿಸಬೇಕು ಎಂದು ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ ನುಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಕಸಾಪ ಮಾಜಿ ಅಧ್ಯಕ್ಷ, ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡಿ, ಕರ್ನಾಟಕ ಕರಾವಳಿಯ ಮೊಟ್ಟ ಮೊದಲ ಜಾದೂಗಾರ ಪ್ರೊ.ಶಂಕರ್ ಅವರಿಗೆ ಎಂದೋ ಅಭಿನಂದನೆ, ಸನ್ಮಾನ ಆಗಬೇಕಿತ್ತು. ಪ್ರಶಸ್ತಿ ಸನ್ಮಾನಗಳಿಂದ ದೂರವಿರುವ ಅವರು, ನಾಡಿನ ಅದ್ಭುತ ಜಾದೂಗಾರ ಎಂದು ಸಂತಸ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರೊ.ಶಂಕರ್ ಅಭಿನಂದನಾ ಸಮಿತಿ ಅಧ್ಯಕ್ಷ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡ್ಕ ಮಾತನಾಡಿ, ಶಂಕರ್ ಅವರ ಜಾದೂ ಪ್ರದರ್ಶನ ನೋಡಿ ಕೋಟ ಡಾ. ಶಿವರಾಮ ಕಾರಂತ ಅವರು ಸಹ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದರು. ಜಾದೂ ಪ್ರದರ್ಶನದ ಮೂಲಕವೇ ಗ್ರಾಮೀಣ ಭಾಗದ ಬ್ಯಾಂಕಿಂಗ್ ವ್ಯವಸ್ಥೆ, ಯೋಜನೆ ತಲುಪಿಸಿದ ಏಕೈಕ ಜಾದೂಗಾರ ಅವರು ಎಂದು ಬಣ್ಣಿಸಿದರು.
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಮನೋವೈದ್ಯ ಡಾಕ್ಟರ್ ಪಿ.ವಿ. ಭಂಡಾರಿ, ಅಭಿನಂದನಾ ಸಮಿತಿ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ ಶೆಣೈ, ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಹರಿಶ್ಚಂದ್ರ, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ್ ರಾವ್, ಪ.ರಾಮಕೃಷ್ಣ ಶಾಸ್ತ್ರಿ, ಲಕ್ಷ್ಮೀಶಂಕರ್ ಉಪಸ್ಥಿತರಿದ್ದರು.
ಪ್ರೊ.ಕೆ.ಸದಾಶಿವ ರಾವ್ ಸ್ವಾಗತಿಸಿದರು. ಸಮಿತಿಯ ಸಂಚಾಲಕ ರವಿರಾಜ್ ಎಚ್. ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಜನಾರ್ದನ ಕೊಡವೂರು ವಂದಿಸಿದರು. ಪೂರ್ಣಿಮಾ ಜನಾರ್ದನ್ ಕಾರ್ಯಕ್ರಮ ನಿರೂಪಿಸಿದರು.
ಜನಸಾಮಾನ್ಯರಿಗೆ ಜಾದೂ ಮೂಲಕ ಆರ್ಥಿಕ ಸಾಕ್ಷರತೆ ಮೂಡಿಸಿದ ವಿಶಿಷ್ಟ, ಅಪರೂಪದ ವ್ಯಕ್ತಿ ಪ್ರೊ.ಶಂಕರ್. ಮರಣಾನಂತರ ಮಣಿಪಾಲ ಆಸ್ಪತ್ರೆಗೆ ದೇಹದಾನದ ವಾಗ್ದಾನ ಪತ್ರ ನೀಡಿದ್ದು, ಅವರಲ್ಲಿರುವ ಪರೋಪಕಾರ ಮನಸ್ಸಿನ ಗುಣಕ್ಕೆ ಹಿಡಿದ ಕೈಗನ್ನಡಿಯಾಗಿದೆ. | ತೋನ್ಸೆ ಜಯಕೃಷ್ಣ ಶೆಟ್ಟಿ. ಸ್ಥಾಪಕಾಧ್ಯಕ್ಷ, ಜಯಶ್ರೀಕೃಷ್ಣ ಪರಿಸರಪ್ರೇಮಿ ಸಮಿತಿ, ಮುಂಬಯಿ