ಅಂತಿಮ ಪಿಜಿ, ಯುಜಿ ಪರೀಕ್ಷೆಗೆ ಆದ್ಯತೆ: ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ

yadapadithaya new
Published on

ಮಂಗಳೂರು: ಅಂತಿಮ ಪದವಿ ತರಗತಿ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಸರಿಯಾದ ವಿಧಾನದಲ್ಲಿ ಪರೀಕ್ಷೆ ಮಾಡಿ ಕಳುಹಿಸಿಕೊಡುವುದು ನಮ್ಮ ಮೊದಲ ಆದ್ಯತೆ. ಉಳಿದಂತೆ ತರಗತಿ ಮುಂದುವರಿಸುವುದು, ಹೊಸ ಪ್ರವೇಶಾತಿಗೆ ನಂತರದ ಪ್ರಾಧಾನ್ಯ.

ಮಂಗಳೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರ ಖಚಿತ ಮಾತುಗಳಿವು.

ಸರ್ಕಾರ ಈಗಾಗಲೇ ಅಂತಿಮ ಪದವಿಯವರಿಗೆ ಪರೀಕ್ಷೆ ಮಾಡುವುದು, ಸೆಪ್ಟಂಬರ್‌ನಿಂದ ಪದವಿ ತರಗತಿ ಮುಂದುವರಿಸುವ ಬಗ್ಗೆ ನಿರ್ಣಯ ತೆಗೆದುಕೊಂಡಿದೆ. ಆ ಹಿನ್ನೆಲೆಯಲ್ಲಿ ಕುಲಪತಿ ವಿಜಯವಾಣಿಗೆ ನೀಡಿದ ಸಂದರ್ಶನದಲ್ಲಿ ವಿಶ್ವವಿದ್ಯಾಲಯದ ಮುಂದಿನ ನಡೆಗಳ ಬಗ್ಗೆ ವಿವರಣೆ ನೀಡಿದ್ದಾರೆ.

ಅಂತಿಮ ಪದವಿ ಪರೀಕ್ಷೆಯ ಸ್ವರೂಪ ಹೇಗಿರುತ್ತದೆ?

-ಆನ್‌ಲೈನ್ ಪರೀಕ್ಷೆ ಅಥವಾ ಸಾಂಪ್ರದಾಯಿಕ ಸ್ವರೂಪದ ‘ಪೆನ್ ಮತ್ತು ಪೇಪರ್’ ಪರೀಕ್ಷೆ ಅಥವಾ ಇವೆರಡರ ಮಿಶ್ರಣದ ಪರೀಕ್ಷೆ ಮಾಡಬಹುದು ಎಂದು ಉನ್ನತ ಶಿಕ್ಷಣ ಸಚಿವರು ಸಲಹೆಯಿತ್ತಿದ್ದಾರೆ. ಯಾವುದಾದರೂ ಒಂದನ್ನು ನಡೆಸಬಹುದು. ಪದವಿ, ಸ್ನಾತಕೋತ್ತರ ಪದವಿ ಅಂತಿಮ ಪರೀಕ್ಷೆಗೆ ಹೆಚ್ಚು ಅಭ್ಯರ್ಥಿಗಳಿರುವುದಿಲ್ಲ, ಹಾಗಾಗಿ ಸರ್ಕಾರದ ಎಸ್‌ಒಪಿ ಆಧಾರದಲ್ಲಿ ಅಂತರ ಕಾಪಾಡಿಕೊಂಡು ಪೆನ್ ಮತ್ತು ಪೇಪರ್ ಪರೀಕ್ಷೆಯನ್ನೇ ನಡೆಸುವುದು ನಮ್ಮ ಇಚ್ಛೆ. ಆದರೆ ಈ ಕುರಿತು ಸಿಂಡಿಕೇಟ್ ಮತ್ತಿತರ ಪಾಲುದಾರರೊಂದಿಗೆ ಚರ್ಚೆ ನಡೆಸಿ ನಿರ್ಣಯ ಕೈಗೊಳ್ಳುತ್ತೇವೆ. ಕಳೆದ ಬಾರಿ 6ನೇ ಸೆಮಿಸ್ಟರ್‌ನಲ್ಲಿ ಅನುತ್ತೀರ್ಣರಾದವರು ಅಥವಾ ಐದನೇ ಸೆಮಿಸ್ಟರ್‌ನಲ್ಲಿ ಪೇಪರ್ ಬಾಕಿ ಇದ್ದವರಿಗೂ ಈ ಪರೀಕ್ಷೆಯಲ್ಲೇ ಪಾಲ್ಗೊಳ್ಳಲು ಅವಕಾಶ ನೀಡುತ್ತೇವೆ, ಇಲ್ಲವಾದರೆ ಅವರ ಒಂದು ವರ್ಷ ಹಾಳಾಗುತ್ತದೆ.

ಮೌಲ್ಯಮಾಪನ ತ್ವರಿತಗೊಳಿಸಲು ಏನು ಕ್ರಮ?

-ಈ ಬಾರಿ ಡಿಜಿಟಲ್ ಮೌಲ್ಯಮಾಪನ ನಡೆಸಲಾಗುವುದು. ಉತ್ತರ ಪತ್ರಿಕೆ ಸ್ಕಾೃನ್ ಮಾಡಿ ನಮ್ಮ ಸಾಫ್ಟ್‌ವೇರ್‌ಗೆ ಅಪ್‌ಲೋಡ್ ಮಾಡುತ್ತೇವೆ. ಮೌಲ್ಯಮಾಪಕರು ಆಯ್ದ ಕೇಂದ್ರಗಳಲ್ಲಿ ಕುಳಿತು ಫೇಸ್ ರೆಕಗ್ನಿಶನ್ ಸಾಫ್ಟ್‌ವೇರ್ ಮೂಲಕ ಲಾಗಿನ್ ಆಗಿ ಕೋಡ್ ಹಾಕಿ ಮೌಲ್ಯಮಾಪನ ಮಾಡಬಹುದು. ಒಂದೇ ಕೇಂದ್ರಕ್ಕೆ ಎಲ್ಲರೂ ಬರಬೇಕಾಗಿಲ್ಲ. ಹೀಗೆ ಮಾಡಿದರೆ 48 ಗಂಟೆಯಲ್ಲಿ ಫಲಿತಾಂಶ ಕೊಡಬಹುದು. ಸೆಪ್ಟಂಬರ್ 10ಕ್ಕೆ ಪರೀಕ್ಷೆ ಪ್ರಾರಂಭಿಸಿದರೆ ತಿಂಗಳ ಅಂತ್ಯಕ್ಕೆ ಫಲಿತಾಂಶ ಕೊಡಬೇಕು ಎನ್ನುವುದು ಗುರಿ.

ಉಳಿದ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಭಡ್ತಿ ಹೇಗೆ ?

-ಮಧ್ಯಂತರ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಭಡ್ತಿ ನೀಡುತ್ತೇವೆ. ಅದಕ್ಕೊಂದು ನಿಯಮಾವಳಿ ಇದೆ. ಇಂತಹ ಸಂದರ್ಭದಲ್ಲಿ ಅವರ ಹಿಂದಿನ ಸೆಮಿಸ್ಟರ್‌ನ ಫಲಿತಾಂಶದ ಶೇ.50 ಹಾಗೂ ಆಂತರಿಕ ಮೌಲ್ಯಮಾಪನದ ಶೇ.50ನ್ನು ಗಣನೆಗೆ ತೆಗೆದುಕೊಂಡು ಅವರನ್ನು ಮುಂದಿನ ಸೆಮಿಸ್ಟರ್‌ಗೆ ಕಳುಹಿಸುತ್ತೇವೆ. ಒಂದು ವೇಳೆ ಅಂಕದ ಬಗ್ಗೆ ಅವರಿಗೆ ಅಸಮಾಧಾನ ಇದ್ದರೆ ಮುಂದಿನ ವರ್ಷ ಪರೀಕ್ಷೆ ಬರೆಯಬಹುದು. ಆದರೆ ಆಗ ಆ ಸೆಮಿಸ್ಟರ್ ಪರೀಕ್ಷೆ ಜೊತೆಗೆ ಈ ಬಾಕಿಯನ್ನೂ ಬರೆಯಬೇಕಾಗುತ್ತದೆ. ಅದಕ್ಕೆ ಪೂರಕವಾಗಿ ಟೈಂಟೇಬಲ್ ಸಿದ್ಧಪಡಿಸುತ್ತೇವೆ.

ಉಳಿದ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಕ್ಲಾಸ್ ಹೇಗೆ ಮಾಡುವಿರಿ?

-ಸೆ.1ರಿಂದ ಕೆಳಗಿನ ಸೆಮೆಸ್ಟರ್ ವಿದ್ಯಾರ್ಥಿಗಳಿಗೆ ಆನ್‌ಲೈನ್ ಕ್ಲಾಸ್ ಶುರು ಮಾಡುತ್ತೇವೆ. ರೆಕಾರ್ಡ್ ಮಾಡಲಾದ ಪಾಠಗಳನ್ನು ವಾಟ್ಸಾೃಪ್ ಮೂಲಕ ಕಳುಹಿಸಲಾಗುವುದು. ಬೇರೆ ಮಾರ್ಗವಿಲ್ಲ. ಅಕ್ಟೋಬರ್ 1ರಿಂದ ಸಾಮಾನ್ಯ ತರಗತಿ ಪ್ರಾರಂಭ. ಒಂದು ವೇಳೆ ಆಗಲೂ ಕರೊನಾ ನಿಯಂತ್ರಣವಾಗದಿದ್ದರೆ ಡಿಸೆಂಬರ್‌ವರೆಗೂ ಆನ್‌ಲೈನೇ ಮಾಡಬೇಕಾಗಬಹುದು.

ಪಿಜಿ/ಯುಜಿ ಹೊಸ ಪ್ರವೇಶ ಯಾವಾಗಿನಿಂದ ? -ಪಿಯುಸಿ ಫಲಿತಾಂಶ ಬಂದ ಕೂಡಲೇ ಪದವಿ 1ನೇ ಸೆಮಿಸ್ಟರ್‌ಗೆ ಪ್ರವೇಶ ಶುರು ಮಾಡುತ್ತೇವೆ, ಈ ಬಾರಿ ಆನ್‌ಲೈನ್‌ನಲ್ಲೇ ಪ್ರವೇಶಾತಿ. ಶುಲ್ಕವನ್ನೂ ಆನ್‌ಲೈನ್ ಮೂಲಕ ಪಾವತಿಸಬಹುದು. ಸ್ನಾತಕೋತ್ತರ ಪ್ರವೇಶಾತಿ ಶುರು ಮಾಡಲು ನವೆಂಬರ್‌ವರೆಗೆ ಕಾಯಬೇ ಕಾಗಬಹುದು. ಆಗ ಒಂದು ಸೆಮಿಸ್ಟರ್ ಅವಧಿಯಷ್ಟು ಸಮಯ ಕಡಿತ ಆಗುತ್ತದೆ, ಉಳಿದ ಭಾಗದಲ್ಲಿ ಸಿಲೆಬಸ್ ಮುಗಿಸುವುದು ಹೇಗೆ ಎಂಬ ಬಗ್ಗೆ ಸರ್ಕಾರದ ತಜ್ಞರ ಅಭಿಪ್ರಾಯ ಪಡೆದುಕೊಳ್ಳಲಾಗುವುದು.

ಕೋವಿಡ್ ಕಾರಣಕ್ಕೆ ತುಸು ಮಾನವೀಯ ನೆಲೆಯಲ್ಲಿ ಪರೀಕ್ಷೆ, ಮೌಲ್ಯಮಾಪನ ಮಾಡಬೇಕು ಎನ್ನುವ ಉದ್ದೇಶವಿದೆ. ಆನ್‌ಲೈನ್ ಆದರೆ ಎಲ್ಲವೂ ನವಮಾದರಿಯಲ್ಲಿ ಆಗಬೇಕು, ಅದು ಕಷ್ಟ. ಸಾಂಪ್ರದಾಯಿಕವಾಗಿ ಮಾಡಿದರೆ ಸರಳವಾಗಿ ಇದನ್ನು ನಿರ್ವಹಿಸಬಹುದು. -ಪ್ರೊ.ಪಿ.ಎಸ್.ಯಡಪಡಿತ್ತಾಯ ವಿವಿ ಕುಲಪತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net