

ಚಿತ್ರದುರ್ಗ: ಸಾಂಖ್ಯಿಕ ತಜ್ಞ ಪ್ರೊ.ಪಿ.ಸಿ.ಮಹಾಲನೋಬಿಸ್ ಅವರು ಸಂಖ್ಯಾಶಾಸ್ತ್ರಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ ಎಂದು ಜಿಪಂ ಮುಖ್ಯ ಯೋಜನಾಧಿಕಾರಿ ಸಿ.ಎಸ್.ಗಾಯತ್ರಿ ಹೇಳಿದರು.
ನಗರದ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಮಹಾಲನೋಬಿಸ್ ಅವರ ಜನ್ಮದಿನ-ಸಾಂಖ್ಯಿಕ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ‘ರಾಷ್ಟ್ರೀಯ ಮಾದರಿ ಸಮೀಕ್ಷೆಗೆ 75 ವರ್ಷಗಳು’ ಕುರಿತ ಉಪನ್ಯಾಸ ಕಾರ‌್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಾಲನೋಬಿಸ್ ಭಾರತ ಸಂಖ್ಯಾಶಾಸ್ತ್ರದ ಪಿತಾಮಹರಾಗಿದ್ದು, ಅವರು ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲರೂ ಸಾಗಬೇಕಿದೆ. ಸಾಂಖ್ಯಿಕ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಅಧಿಕಾರಿಗಳು, ಸಿಬ್ಬಂದಿ ಸಾಂಖ್ಯಿಕ ಕ್ಷೇತ್ರಕ್ಕೆ ತಮ್ಮದೇ ಕೊಡುಗೆ ನೀಡುವ ಮೂಲಕ ಗುರಿ ಸಾಧಿಸಬೇಕು. ಸಾಂಖ್ಯಿಕ ಇಲಾಖೆಯಲ್ಲಿ ಬಹುಮುಖ ವ್ಯಕ್ತಿತ್ವ ವಿಕಸನಕ್ಕೆ ಕಾರ್ಯನಿರ್ವಹಿಸುವವರಿಗೆ ಸಾಕಷ್ಟು ಅವಕಾಶಗಳಿವೆ ಎಂದರು.
ಭದ್ರಾ ಮೇಲ್ದಂಡೆ ಯೋಜನೆ ಉಪನಿರ್ದೇಶಕಿ ಕುಮುದಾ ಮಾತನಾಡಿ, ಯಾವುದೇ ಯೋಜನೆಗೆ ಸರ್ವೇ ಅಂಕಿ-ಅಂಶಗಳು ಪ್ರಮುಖ ಪಾತ್ರ ವಹಿಸುತ್ತವೆ. ಮಹಾಲನೋಬಿಸ್ ಅವರಿಂದಾಗಿ ಒಂದು ಇಲಾಖೆ, ಹಲವರಿಗೆ ಉದ್ಯೋಗ ದೊರಕಿದೆ ಎಂದರು. ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎನ್.ರವಿಕುಮಾರ ಮಾತನಾಡಿದರು. ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಚನ್ನಬಸಪ್ಪ ಉಪನ್ಯಾಸ ನೀಡಿದರು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಚೇರಿ ಸಹಾಯಕ ಸಂಖ್ಯಾ ಸಂಗ್ರಹಣಾಧಿಕಾರಿ ಅಶ್ವತ್ಥಾಮ, ಸಹಾಯಕ ನಿರ್ದೇಶಕಿ ಶಶಿರೇಖಾ, ತೋಟಗಾರಿಕೆ ಇಲಾಖೆ ಶಶಿಧರ್ ಮತ್ತಿತರರು ಇದ್ದರು.