

ಮಂಡ್ಯ: ಕೃಷ್ಣರಾಜಸಾಗರ ಅಣೆಕಟ್ಟಿನಲ್ಲಿ ಸರ್. ಎಂ. ವಿಶ್ವೇಶ್ವರಯ್ಯ ಪ್ರತಿಮೆ ವಿರೋಧಿಸಿ ಪ್ರಗತಿಪರ ಚಿಂತಕ ಪ್ರೊ.ನಂಜರಾಜೇ ಅರಸ್ ನೇತೃತ್ವದಲ್ಲಿ ಭಾರಿ ಪ್ರತಿಭಟನೆ ವ್ಯಕ್ತವಾಗುತ್ತಿದ್ದು, ಪ್ರಸ್ತುತ ಮೈಸೂರು ರಾಜಮನೆತನದ ವಿರುದ್ಧ ನಂಜರಾಜೇ ಅವರು ಕಿಡಿಕಾರಿದ್ದಾರೆ.
ಸರ್ಕಾರ . ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಡ್ಯಾಂ ಸೌತ್ ಗೇಟ್ ಬಳಿ 9 ಕೋಟಿ ವೆಚ್ಚದಲ್ಲಿ ನಾಲ್ವಡಿ ಮತ್ತು ವಿಶ್ವೇಶ್ವರಯ್ಯ ಪ್ರತಿಮೆ ನಿರ್ಮಾಣ ಮಾಡುತ್ತಿದೆ. ಆದರೆ, ಇದನ್ನು ವಿರೋಧಿಸಿ ಪ್ರೊ.ನಂಜರಾಜೇ ಅರಸ್ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು. ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಸರಿಸಮನಾಗಿ ವಿಶ್ವೇಶ್ವರಯ್ಯ ಪ್ರತಿಮೆ ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಒಂದು ವೇಳೆ ಮಾಡಿದರೆ ಅದು ನಾಲ್ವಡಿ ಕೃಷ್ಣರಾಜ ಒಡೆಯರ್ಗೆ ಮಾಡುವ ಅಪಮಾನ ಎಂದು ಜರಿದರು.
ವಿಶ್ವೇಶ್ವರಯ್ಯ ಇಂಜಿನಿಯರ್ ಆಗಿ ಕೇವಲ 1 ವರ್ಷ ಡ್ಯಾಂ ನಿರ್ಮಾಣ ಜವಾಬ್ದಾರಿ ಹೊತ್ತಿದ್ರು. ಸಂಬಳ ಪಡೆದು ತಮಗೆ ವಹಿಸಿದ್ದ ಜವಾಬ್ದಾರಿ ನಿರ್ವಹಿಸಿದ್ದಾರೆ. ನಾಲ್ವಡಿ ಅವರು ಹಣಕ್ಕೆ ತೊಂದರೆಯಾದಾಗ ಒಡವೆ ಇಟ್ಟು ಡ್ಯಾಮ್ ಪೂರ್ಣಗೊಳಿಸಿದ್ರು. ಡ್ಯಾಂ ನಿರ್ಮಾತೃ ಕೃಷ್ಣರಾಜ ಒಡೆಯರ್ ಮಾತ್ರ. ಸರ್‌ಎಂವಿ ಪ್ರತಿಮೆಯನ್ನು ಸರ್ಕಾರ ಬೇರೆ ಕಡೆ ಮಾಡಲಿ. ಆದರೆ, ಕೆಆರ್ಎಸ್ ಬಳಿ ನಾಲ್ವಡಿ ಪ್ರತಿಮೆ ಸಮನಾಗಿ ಬೇಡ ಎಂದು ಆಗ್ರಹಿಸಿದರು.
ರಾಜಮನೆತನದ ವಿರುದ್ಧ ಕಿಡಿ
ಇದೇ ಸಮಯದಲ್ಲಿ ಪ್ರಸ್ತುತ ಮೈಸೂರು ರಾಜ ಮನೆತನದ ವಿರುದ್ಧ ಲಘುವಾಗಿ ಟೀಕಿಸಿದ ಇತಿಹಾಸ ತಜ್ಞ ನಂಜೇರಾಜೇ ಅರಸ್, ನಾಲ್ವಡಿ ಬಗ್ಗೆ ಮೈಸೂರು ರಾಜಮನೆತನದವರಿಗೆ ಅಭಿಮಾನ ಹಾಗೂ ಕಿಂಚಿತ್ತು ಗೌರವವಿಲ್ಲ. ಅವರಿಗೆ ಗೌರವ ಇದ್ದಿದ್ರೆ ಪ್ರತಿಮೆ ಬಗ್ಗೆ ಪ್ರತಿಭಟಿಸಬೇಕಿತ್ತು. ಮೈಸೂರು ಮಹಾರಾಣಿ ಅವರಿಗೆ ರಾಜಕೀಯದ ತೆವಲು. ಅದಕ್ಕಾಗಿ ಹೀಗೆ ನಡೆದುಕೊಳ್ಳುತ್ತಿದ್ದಾರೆ. ಯದುವೀರ ಮಾನ ಮರ್ಯಾದೆ ಇಲ್ಲದೇ ಸಿಂಹಾಸನದ ಮೇಲೆ ಕೂರುತ್ತಾನೆ. ಆ ಮನುಷ್ಯ ಈ ಬಗ್ಗೆ ಪ್ರತಿಭಟನೆ ಮಾಡಬೇಕಿತ್ತು. ಸಿದ್ದರಾಮಯ್ಯ ಮೂರ್ಖತನ ನಿರ್ಧಾರ ಮಾಡಿದ್ದಾನೆ. ನಮಗೆ ಸರ್‌ಎಂವಿ ಪ್ರತಿಮೆ ನಿರ್ಮಾಣ ಬಗ್ಗೆ ವಿರೋಧ ಇಲ್ಲ. ನಮ್ಮ ವಿರೋಧ ಅವರ ಪ್ರತಿಮೆಯನ್ನು ಕೆಆರ್ಎಸ್ ಡ್ಯಾಂ ಬಳಿ ನಿರ್ಮಾಣ ಮಾಡಬಾರದು. ಇಲ್ಲಿ ಕೇವಲ ನಾಲ್ವಡಿ ಅವರ ಪ್ರತಿಮೆ ಇರಬೇಕು. ಸರ್‌ಎಂವಿ ಅವರ ಪ್ರತಿಮೆಯನ್ನು ಬೇರೆ ಕಡೆ ಮಾಡಿಕೊಳ್ಳಲಿ ಎಂದರು. (ದಿಗ್ವಿಜಯ ನ್ಯೂಸ್)