

ಎಚ್.ಡಿ.ಕೋಟೆ: ರೈತ ನಾಯಕ ದಿ.ಪ್ರೊ ಎಂ.ಡಿ.ನಂಜುಂಡಸ್ವಾಮಿ ಅವರ 89ನೇ ಜನ್ಮದಿನದ ಅಂಗವಾಗಿ ಮೈಸೂರು ನಗರದ ಪುರಭವನ ಆವರಣದಲ್ಲಿ ಫೆ.13ರಂದು ಜಿಲ್ಲಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾಹಿತಿ ನೀಡಿದರು.
ಪಟ್ಟಣದ ಸರ್ಕಾರಿ ವಸತಿಗೃಹ ಆವರಣದಲ್ಲಿ ಗುರುವಾರ ಕರೆಯಲಾಗಿದ್ದ ರೈತ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಜನ್ಮದಿನವಾದ ಫೆ. 13ರಂದು ಈ ದಿನವನ್ನು ಕರ್ನಾಟಕ ರಾಜ್ಯ ರೈತ ಸಂಘ ಪ್ರತಿ ವರ್ಷ ವಿಶೇಷವಾಗಿ ಆಚರಿಸುತ್ತದೆ. ಈ ವರ್ಷ ಮೈಸೂರಿನಲ್ಲಿ ಜಿಲ್ಲಾ ರೈತ ಸಮಾವೇಶವನ್ನು ಹಮ್ಮಿಕೊಂಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಯನ್ನು ಖಂಡಿಸಿ ರೈತಪರ, ಗ್ರಾಮೀಣ ಪರ ಯೋಜನೆಗಳನ್ನು ರೂಪಿಸಿ ಕೃಷಿಯನ್ನು ಉಳಿಸಲು ಆಗ್ರಹಿಸಿ ಹಲವಾರು ನಿರ್ಣಯಗಳನ್ನು ಕೈಗೊಳ್ಳಲಿದೆ.
ಹೊಸತನದೊಂದಿಗೆ ಹಳ್ಳಿ ಹಳ್ಳಿಗೆ ರೈತ ಚಳವಳಿಯನ್ನು ಕೊಂಡೊಯ್ಯುವ ಉದ್ದೇಶದಿಂದ ಈ ಒಂದು ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ಸಮಾವೇಶವನ್ನು ಮಾಜಿ ಶಾಸಕ, ಸಂಯುಕ್ತ ಮತ್ತು ರಾಷ್ಟ್ರೀಯ ಸಂಚಾಲಕ ಡಾ. ಸುನೀಲಂ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಬಿ.ಆರ್ ಪಾಟೀಲ್, ಜಾಗೃತಾ ಕರ್ನಾಟಕ ಡಾ.ವಿ. ವಾಸು, ಕೃಷಿ ವಿಜ್ಞಾನಿ ಹಾಗೂ ಕರ್ನಾಟಕದ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ.ಪ್ರಕಾಶ್ ಕಮ್ಮರಡಿ ಸೇರಿದಂತೆ ರಾಜ್ಯ ರೈತ ಸಂಘದ ರಾಜ್ಯ ಮಟ್ಟದ ನಾಯಕರು, ಪ್ರಗತಿಪರ ಸಂಘಗಳ ನಾಯಕರು ಭಾಗವಹಿಸಲಿದ್ದಾರೆ ಎಂದರು.
ಸಮಾವೇಶದಲ್ಲಿ ಸುಮಾರು ಐದು ಸಾವಿರ ರೈತ ಮುಖಂಡರು ಭಾಗಿಯಾಗಲಿದ್ದಾರೆ. ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕಿನಿಂದ ಒಂದು ಸಾವಿರ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮರಂಕಯ್ಯ, ಪಳನಿಸ್ವಾಮಿ, ಸೋಗಹಳ್ಳಿ ಪುಟ್ಟಣ್ಣ, ಮಹಾದೇವನಾಯಕ, ಚನ್ನನಾಯಕ, ಪ್ರಸಾದ್, ದೇವಮ್ಮ ಇದ್ದರು.
ರೈತ ಸಮುದಾಯವನ್ನು ಸದೃಢಗೊಳಿಸುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರೈತ ಕುಲವನ್ನು ನಾಶ ಮಾಡುವಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ಜಾರಿಗೆ ತರುತ್ತಿದೆ. ವಿರೋಧ ಪಕ್ಷದ ಆಡಳಿತವಿರುವ ರಾಜ್ಯ ಸರ್ಕಾರಗಳು ಕೂಡ ಈ ನೀತಿ ಮತ್ತು ಕಾರ್ಯಕ್ರಮಗಳಿಗೆ ಪ್ರತಿರೋಧ ವ್ಯಕ್ತಪಡಿಸದೆ ಇರುವುದರಿಂದ ವೇಗವಾಗಿ ಜಾರಿಗೆ ತರುತ್ತೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಗಳ ವಿರುದ್ಧ ಹೋರಾಟವನ್ನು ಹೊಸ ಆಯಾಮದೊಂದಿಗೆ ಕಟ್ಟದಿದ್ದರೆ ರೈತ ಕುಲಕ್ಕೆ ಭವಿಷ್ಯವಿಲ್ಲ ಎಂದು ಬಡಗಲಪುರ ನಾಗೇಂದ್ರ ಹೇಳಿದರು.