

ಮಂಡ್ಯ: ಪ್ರೊ.ಎಚ್.ಎಲ್.ಕೇಶವಮೂರ್ತಿ ಪ್ರತಿಷ್ಠಾನದಿಂದ ಕೊಡಮಾಡುವ 7ನೇ ವರ್ಷದ ರಾಜ್ಯಮಟ್ಟದ ಪ್ರೊ.ಎಚ್ಚೆಲ್ಕೆ ವೈಚಾರಿಕ ಪ್ರಶಸ್ತಿಗೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಅಗಸನಹಾಳ ಗ್ರಾಮದ ಸಾಮಾಜಿಕ ಹೋರಾಟಗಾರ ಡಾ.ಸಿದ್ದನಗೌಡ ಪಾಟೀಲ ಅವರನ್ನು ಆಯ್ಕೆ ಮಾಡಲಾಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರತಿಷ್ಠಾನದ ಕಾರ್ಯದರ್ಶಿ ರಾಜೇಂದ್ರ ಪ್ರಸಾದ್ ಮಾತನಾಡಿ, ನಾಲ್ಕು ದಶಕದಿಂದ ರಾಜ್ಯದ ಸಾಮಾಜಿಕ ಚಳವಳಿಯಲ್ಲಿ ಕ್ರಿಯಾಶೀಲರಾಗಿರುವ ಡಾ. ಸಿದ್ದನಗೌಡ ಪಾಟೀಲ ಅವರು ರೈತರು, ಕೂಲಿ ಕಾರ್ಮಿಕರ ಶ್ರೇಯಸ್ಸಿಗಾಗಿ ಹೋರಾಟ ಮಾಡುತ್ತಿದ್ದಾರೆ. ಈ ಸೇವೆ ಪರಿಗಣಿಸಿ ಜ.4ರಂದು ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ 10 ಸಾವಿರ ರೂ ನಗದಿನ ಜತೆಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
ಅಂದು ಬೆಳಗ್ಗೆ 10.30ಕ್ಕೆ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಗಾಂಧಿ ಸ್ಮಾರಕ ನಿಧಿ ಕಾರ್ಯಾಧ್ಯಕ್ಷ ಎನ್.ವಿಶುಕುಮಾರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ವಿಮರ್ಶಕಿ ಎಂ.ಎಸ್.ಆಶಾದೇವಿ ಪ್ರಶಸ್ತಿ ಪುರಸ್ಕೃತರ ಕುರಿತು ಮಾತನಾಡಲಿದ್ದು, ಪ್ರತಿಷ್ಠಾನದ ಅಧ್ಯಕ್ಷ ಗುರುಪ್ರಸಾದ್ ಕೆರಗೋಡು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ವಿವರಿಸಿದರು.
ಪ್ರತಿಷ್ಠಾನದ ಟ್ರಸ್ಟಿ ಕೆ.ಬೋರಯ್ಯ ಮಾತನಾಡಿ, ಅಂದಿನ ಸಮಾರಂಭದಲ್ಲಿ ಪ್ರೊ.ಎಚ್ಚೆಲ್ಕೆ ಅವರ ಕೊನೆಯ ಪುಸ್ತಕ ‘ಎಲ್ಲಾ ಶ್ರೀಮಾನ್‌ಗಳು 420ಗಳೇ’ ಬಿಡುಗಡೆ ಮಾಡಲಾಗುವುದು ಎಂದರು.
ದಸಂಸ ಎಂ.ವಿ.ಕೃಷ್ಣ, ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಮುದ್ದೇಗೌಡ ಇದ್ದರು.