ಮೈಸೂರು: ದಲಿತ ಚಳವಳಿಯನ್ನು ದೇವನೂರ ಮಹದೇವ ಒಡೆದ ಪಿತಾಮಹ ಎಂದು ದಲಿತ ಮುಖಂಡ ಪ್ರೊ.ಎಚ್.ಗೋವಿಂದಯ್ಯ ಹೇಳಿರುವುದು ದ್ವೇಷಕಾರ ಹೇಳಿಕೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಎನ್.ಮುನಿಸ್ವಾಮಿ ಟೀಕಿಸಿದರು.
ಒಳ ಮೀಸಲಾತಿ ಸಂಬಂಧ ನಗರದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ದಲಿತ ಮುಖಂಡ ಎಚ್.ಗೋವಿಂದಯ್ಯ ಅವರು ಹಿರಿಯ ಸಾಹಿತಿ ದೇವನೂರ ಮಹದೇವ ಹಾಗೂ ದಲಿತ ಚಳವಳಿ ಬಗ್ಗೆ ಪ್ರಸ್ತಾಪಿಸಿ, ದಲಿತ ಸಂಘರ್ಷ ಸಮಿತಿ ಒಡಕಿನ ಪಿತಾಮಹ ದೇವನೂರು ಮಹಾದೇವ ಎಂದು ಟೀಕಿಸಿರುವುದು ದುರುದ್ದೇಶ ಪೂರಕ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ದೇವನೂರ ಮಹದೇವ ಅವರು ವಿಧಾನ ಪರಿಷತ್ತಿನ ಸದಸ್ಯರಾಗಲು ಎರಡು ಬಾರಿ ಬಂದ ಅವಕಾಶವನ್ನು ತಿರಸ್ಕರಿಸಿ ರಾಜಕೀಯದಿಂದ ದೂರ ಉಳಿದಿದ್ದಾರೆ. ಸಾಹಿತ್ಯ, ಸಂಸ್ಕೃತಿ, ವೈಚಾರಿಕ, ಪ್ರಗತಿಪರ ಚಳವಳಿ ಕ್ಷೇತ್ರ ಹಾಗೂ ಸಾರ್ವಜನಿಕವಾಗಿ ಅಪಾರ ಪ್ರೀತಿ, ವಿಶ್ವಾಸ, ನಂಬಿಕೆ, ಗೌರವದ ಸದಭಿಪ್ರಾಯವಿದೆ. ಹೀಗಾಗಿ ಇಂತಹ ಮೌಲ್ಯಯತ ಪ್ರತಿಭಾವಂತರ ವಿರುದ್ಧ ಗೋವಿಂದಯ್ಯ ಅವರು ತಳಬುಡವಿಲ್ಲದ ನಿಂದನೆಗೆ ಇಳಿದಿರುವುದು ಅವರ ವಿಕೃತಿ ತೋರುತ್ತದೆ ಎಂದು ಟೀಕಿಸಿದರು.
ಗೋವಿಂದಯ್ಯ ಅವರು ಮೈಸೂರು ವಿವಿ ಬಾಬು ಜಗಜೀವನರಾಂ ಅಧ್ಯಯನ ಮತ್ತು ಸಂಶೋಧನಾ ಹಾಗೂ ವಿಸ್ತರಣ ಕೇಂದ್ರದ ನಿರ್ದೇಶಕ ಪ್ರೊ.ಆರ್. ತಿಮ್ಮರಾಯಪ್ಪ ಅವರ ಸಮ್ಮುಖದಲ್ಲಿ ವಿವಿಗಳ ಅಂಬೇಡ್ಕರ್ ಅಧ್ಯಯನ ಕೇಂದ್ರಗಳು ದಲಿತ ಜಾತಿವಾದಿಗಳ ಕೇಂದ್ರಗಳಾಗಿವೆ ಎಂದು ಸಹಾ ದುರುದ್ದೇಶಪೂರ್ವಕ ಹೇಳಿಕೆ ನೀಡಿದ್ದಾರೆ ಎಂದರು.
ಆರ್‌ಎಸ್‌ಎಸ್‌ನ ವಾದಿರಾಜ್ ಅವರ ಶಿಷ್ಯತ್ವ ಸ್ವೀಕರಿಸಿರುವ ಗೋವಿಂದಯ್ಯ ಅವರು, ಆರ್‌ಎಸ್‌ಎಸ್‌ನ ಕೇಶವ ಕೃಪಾದ ಅಂಗಳದಲ್ಲಿ ನಿಂತು ಮಾತನಾಡುತ್ತಿದ್ದಾರೆ. ಹೀಗಾಗಿ ಇವರಿಂದ ದಲಿತ ಸಮುದಾಯ ಮತ್ತು ಸಮಾಜ ಏನನ್ನು ತಾನೇ ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದರು.
ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ಮಾತನಾಡಿ, ಒಳ ಮೀಸಲಾತಿಯನ್ನೂ ಯಾರೊಬ್ಬರೂ ವಿರೋಧಿಸಿಲ್ಲ. ಆದರೆ ವೈಜ್ಞಾನಿಕವಾಗಿರಬೇಕೆಂದಷ್ಟೇ ಹೇಳುತ್ತಿದ್ದಾರೆ. ಹೀಗಿದ್ದರೂ ದಲಿತ-ಮಾದಿಗ ಜನಾಂಗದ ಮಧ್ಯೆ ಅನಗತ್ಯ ಗೊಂದಲ ಮೂಡಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮುಖಂಡರಾದ ಬೆಟ್ಟಯ್ಯಕೋಟೆ, ಎನ್.ವೆಂಕಟೇಶ್, ಆಲಗೂಡು ಶಿವಕುಮಾರ್, ಶಂಭುಲಿಅಗಸ್ವಾಮಿ, ಬಿ.ಡಿ. ಶಿವಬುದ್ಧಿ ಇತರರು ಇದ್ದರು.