

ಉಡುಪಿ: ಆಂಧ್ರಪ್ರದೇಶದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ದಲಿತ ಯುವಕನ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ತೆಲುಗು ಚಿತ್ರ ನಿರ್ಮಾಪಕ, ತೆಲುಗು ಬಿಗ್‌ಬಾಸ್ ಮೊದಲ ಆವೃತ್ತಿಯ ಸ್ಪರ್ಧಿ ಆರೋಪಿ ನೂತನ್ ನಾಯ್ಡುನನ್ನು ಉಡುಪಿ ರೈಲ್ವೆ ನಿಲ್ದಾಣದಲ್ಲಿ ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶ, ವಿಶಾಖಪಟ್ಟಣ ಪೊಲೀಸರಿಂದ ಶನಿವಾರ ಬೆಳಗ್ಗೆ ಖಚಿತ ಮಾಹಿತಿ ಪಡೆದ ಉಡುಪಿ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಮಂಗಳೂರಿನಿಂದ ಮುಂಬೈಗೆ ಪರಾರಿಯಾಗಲು ಯತ್ನಿಸಿದ್ದ ಎನ್ನಲಾಗಿದೆ. ಉಡುಪಿ ಮತ್ತು ಮಣಿಪಾಲ ಠಾಣೆ ಪಿಎಸ್‌ಐ ನೇತೃತ್ವದ ತಂಡದ ಪೊಲೀಸರು ಆರೋಪಿಯನ್ನು ಸುತ್ತುವರಿದಾಗ ತನ್ನ ಬಳಿಯಿದ್ದ ಒಂದು ಮೊಬೈಲನ್ನು ಎಸೆಯಲು ಮುಂದಾಗಿದ್ದಾನೆ. ಆರೋಪಿ ನೂತನ್ ಬಳಿಯಿಂದ ನಾಲ್ಕು ಮೊಬೈಲ್ ಫೋನ್‌ಗಳನ್ನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಒಂದು ಗಂಟೆ ಬಳಿಕ ಆರೋಪಿ ನೂತನ್‌ನ್ನು ವಿಶಾಖಪಟ್ಟಣ ಪೊಲೀಸರು ವಶಕ್ಕೆ ಪಡೆದುಕೊಂಡರು. ವಿಶಾಖಪಟ್ಟಣ ಪೊಲೀಸರು ಆರೋಪಿಯನ್ನು ಉಡುಪಿ ನ್ಯಾಯಲಯಕ್ಕೆ ಹಾಜರುಪಡಿಸಿ ವಿಶಾಖಪಟ್ಟಣಕ್ಕೆ ಕರೆದೊಯ್ದಿದ್ದಾರೆ.
ಆ.28 ರಂದು ನೂತನ್ ನಾಯ್ಡು ಅವರ ಪತ್ನಿ ಮಾಧುರಿ ಎಂಬಾಕೆ ಪೆನ್ನು ಕದ್ದಿದ್ದ ಆರೋಪ ಹೊರಿಸಿ 20 ವರ್ಷದ ದಲಿತ ಯುವಕನ ತಲೆಬೋಳಿಸಿ ವಿಕೃತಿ ಮೆರೆದಿದ್ದರು. ಇದಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಯಿಂದಾಗಿ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತಗೊಂಡಿತ್ತು. ಇದು ಮಾತ್ರವಲ್ಲದೇ ಆರೋಪಿ ನೂತನ್ ನಾಯ್ಡು ಪತ್ನಿಯನ್ನು ಪೊಲೀಸ್ ಬಂಧನದಿಂದ ಬಚಾವ್ ಮಾಡಲು ನಿವೃತ್ತ ಪೊಲೀಸ್ ಅಧಿಕಾರಿ ಹೆಸರಲ್ಲಿ ವೈದ್ಯರಿಗೆ ಕರೆ ಮಾಡಿ ಪತ್ನಿಗೆ ಅನಾರೋಗ್ಯದ ಪ್ರಮಾಣ ಪತ್ರ ನೀಡಲು ಒತ್ತಡ ಹೇರಿದ್ದ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.