

ಚಿಕ್ಕಬಳ್ಳಾಪುರ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಮತ್ತು ಬಿಳಿ ಜೋಳವನ್ನು ಖರೀದಿಸಲು ಜಿಲ್ಲಾಡಳಿತವು ಸಿದ್ಧತೆಗಳನ್ನು ಕೈಗೊಂಡಿದೆ.
ಡಿ.1 ರಿಂದ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಲಿದ್ದು 2025 ನೇ ಸಾಲಿನ ಜನವರಿಯಿಂದ ಖರೀದಿಸಲಾಗುತ್ತದೆ. ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶುಕ್ರವಾರ ಕೈಗೊಂಡಿದ್ದ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಿದರು.
2024-25 ನೇ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ರೈತರಿಂದ ರಾಗಿ, ಬಿಳಿಜೋಳವನ್ನು ಖರೀದಿಸಲು ತಾಲೂಕುಗಳಲ್ಲಿ ಕೇಂದ್ರಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ರಾಗಿ ನೋಂದಾಯಿಸಲ್ಪಟ್ಟ ರೈತರಿಂದ ಮಾತ್ರ ಉತ್ಪನ್ನವನ್ನು ಖರೀದಿಸಬೇಕು. ಯಾವುದೇ ಕಾರಣಕ್ಕೂ ವ್ಯಾಪರಸ್ಥರು, ದಲ್ಲಾಳಿಗಳಿಗೆ ಅವಕಾಶವಿಲ್ಲ. ಪ್ರತಿಯೊಂದು ಕೇಂದ್ರದಲ್ಲಿ ನೆಲಹಾಸು ಹಾಕಿ, ಅದರ ಮೇಲೆ ಖರೀದಿಸಲಾದ ರಾಗಿಯನ್ನು ರ್ನಿದಿಷ್ಟ ಗೋಣಿ ಚೀಲಗಳಲ್ಲಿ ನಿಗದಿತ ಪ್ರಮಾಣದಲ್ಲಿ ತುಂಬಿ, ಖರೀದಿಸಿದ ಆಯಾ ದಿನವೇ ಶೇಖರಣಾ ಘಟಕಕ್ಕೆ ಕ್ರಮಬದ್ಧ ಎಣಿಕೆಗೆ ಪೂರಕವಾಗಿ ಜೋಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಖರೀದಿಯ ಆರಂಭದಲ್ಲಿ ರೈತರ ಹೆಸರು, ವಿಳಾಸ, ಕೃಷಿ ಇಲಾಖೆಯಿಂದ ನೀಡಿರುವ ಐಡಿ ಸಂಖ್ಯೆ, ಪಹಣಿ, ಆಧಾರ್ ಸಂಖ್ಯೆ, ಹಾಗೂ ಮೊಬೈಲ್ ಸಂಖ್ಯೆ ಸೇರಿದಂತೆ ಅಗತ್ಯ ಮಾಹಿತಿ ದಾಖಲೆಗಳನ್ನು ರೈತರು ನೀಡಬೇಕು. ಖರೀದಿ ಕೇಂದ್ರಕ್ಕೆ ರಾಗಿಯನ್ನು ತರುವ ಮೊದಲೇ ತೇವಾಂಶವಿಲ್ಲದೇ ಚೆನ್ನಾಗಿ ಒಣಗಿಸಿ, ಧೂಳು ಹಾಗೂ ಮಣ್ಣು ಇರದಂತೆ ನೋಡಿಕೊಳ್ಳಬೇಕು ಎಂದು ರೈತರಿಗೆ ಮನವಿ ಮಾಡಿದ್ದಾರೆ. .
*ಸಭೆಯಲ್ಲಿ ಮಹತ್ವದ ನಿರ್ಧಾರ
ಪ್ರತಿ ಲಾಟ್‌ಗೆ ಜೋಡಣೆಯ ಚೀಲಗಳ ಸಂಖ್ಯೆ ನಮೂದು, ಖರೀದಿ ಏಜೆನ್ಸಿಯು ಸಾಗಾಣಿಕೆ ಗುತ್ತಿಗೆದಾರರನ್ನು ನೇಮಿಸುವ ಸಂಬಂಧ ತುರ್ತು ಟೆಂಡರ್ ಹೊರಡಿಸುವುದು ಹಾಗೂ ಖರೀದಿ ಕೇಂದ್ರದಲ್ಲಿ ರೈತರಿಂದ ಖರೀದಿಸಲಾದ ರಾಗಿಯನ್ನು ಶೇಖರಣಾ ಕೇಂದ್ರಕ್ಕೆ ಸಾಗಾಣಿಕೆಗೆ ಜಿ.ಪಿ.ಎಸ್ ಹೊಂದಿದ ವಾಹನಗಳ ಬಳಕೆ, ಪ್ರತಿಯೊಂದು ಖರೀದಿ ಕೇಂದ್ರಗಳಲ್ಲಿ ಮಾಹಿತಿಯ ಬ್ಯಾನರ್ ಪ್ರದರ್ಶನ, ಅಗತ್ಯ ಸೌಕರ್ಯಗಳ ವ್ಯವಸ್ಥೆ ಮತ್ತು ಸಿಬ್ಬಂದಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.