ಶ್ರೀ ಸಿದ್ಧಾರೂಢ ಸ್ವಾಮಿ ಕಥಾಮೃತ ಗ್ರಂಥಗಳ ಶೋಭಾಯಾತ್ರೆ

h19-Siddarud SHobha Yatre 3
Published on

ಹುಬ್ಬಳ್ಳಿ: ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಯವರ ಕಥಾಮೃತ ಗ್ರಂಥದ ಶತಮಾನೋತ್ಸವ ನಿಮಿತ್ತ ಬುಧವಾರ ನಗರದಲ್ಲಿ ಅದ್ದೂರಿ ಮೆರವಣಿಗೆಯ ಶೋಭಾಯಾತ್ರೆ ಜರುಗಿತು.

ಗಣೇಶ ಪೇಟೆಯ ಶ್ರೀ ಜಡಿಸಿದ್ಧಾಶ್ರಮದಿಂದ ಹೊರಟ ಮೆರವಣಿಗೆಯು ಮರಾಠಾಗಲ್ಲಿ, ಕೊಪ್ಪಿಕರ ರಸ್ತೆ, ಮಹಾನಗರ ಪಾಲಿಕೆ, ಉಪನಗರ ಪೊಲೀಸ್ ಠಾಣೆ, ದಾಜಿಬಾನ ಪೇಟೆ, ಮೈಸೂರು ಸ್ಟೋರ್ಸ್, ಸರಾಫ ಗಟ್ಟಿ, ಬಮ್ಮಾಪುರ ಓಣಿ, ನ್ಯೂ ಇಂಗ್ಲಿಷ್ ಸ್ಕೂಲ್, ಹಳೇ ಹುಬ್ಬಳ್ಳಿ ಶ್ರೀ ವೀರಭದ್ರೇಶ್ವರ ದೇವಸ್ಥಾನ, ಇಂಡಿಪಂಪ್ ವೃತ್ತಗಳಲ್ಲಿ ಹಾಯ್ದು ಮಧ್ಯಾಹ್ನದ ವೇಳೆಗೆ ಶ್ರೀಮಠ ತಲುಪಿತು. ಮೆರವಣಿಗೆ ಸಾಗಿದ ಎಲ್ಲ ಮಾರ್ಗಗಳ ಇಕ್ಕೆಲಗಳಲ್ಲಿ ನೆರೆದ ಭಕ್ತಸಮೂಹವು ಮೆರವಣಿಗೆೆ ಮೇಲೆ ಪುಷ್ಪವೃಷ್ಟಿಗೈದು ಸಿದ್ಧಾರೂಢ ಮಹಾರಾಜ ಕೀ ಜೈ ಎಂಬ ಘೋಷಣೆ ಕೂಗಿತು.

ಆನೆ ಮೇಲೆಯ ಅಂಬಾರಿಯೊಳಗಿದ್ದ ಶ್ರೀ ಸಿದ್ಧಾರೂಢ ಸ್ವಾಮಿ ಹಾಗೂ ಶ್ರೀ ಗುರುನಾಥಾರೂಢ ಸ್ವಾಮಿಗಳ ಮೂರ್ತಿಗಳಿಗೆ ಮತ್ತು ಪಲ್ಲಕ್ಕಿಯಲ್ಲಿದ್ದ ಮೂರ್ತಿಗಳಿಗೆ ಮಹಿಳೆಯರು ಪುಷ್ಪಾಂಜಲಿ ಸಲ್ಲಿಸಿ, ಆರತಿ ಬೆಳಗಿದರು. ಒಂದೇ ಬಣ್ಣದ ಸೀರೆಯುಟ್ಟು ಕಲಶ ಹೊತ್ತ ಸಾವಿರರಾರು ಮಹಿಳೆಯರು ಹಾಗೂ ಕಥಾಮೃತ ಗ್ರಂಥವನ್ನು ತಲೆಯ ಮೇಲಿಟ್ಟು ನಡೆದ ನೂರಾರು ಪುರುಷರು ಮತ್ತು ಮಹಿಳೆಯರು ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿದ್ದರು.

ಮಹಿಳೆಯರ ಡೊಳ್ಳು, ಡೋಲು, ವೀರಗಾಸೆ, ಪುರವಂತರ ತಂಡ, ಚೆಟ್ಟಿ ಮೇಳ, ಗೊಂಬೆ ಕುಣಿತ, ಬ್ಯಾಂಡ್, ಜಾಂಜ್ ವಾದ್ಯ ಮೆರವಣಿಗೆ ಮಾರ್ಗದಲ್ಲಿ ನೋಡುಗರ ಮನ ಸೆಳೆದವು. ಪುಟ್ಟ ಬಾಲಕರ ಭಜನಾ ತಂಡವು ಗಮನ ಸೆಳೆಯಿತು.

ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಮಠಾಧೀಶರು. ಸ್ವಾಮೀಜಿಗಳು, ಸಾಧು, ಸಂತರು ಮತ್ತು ಮಾತೆಯರನ್ನು ಸಾರೋಟಗಳಲ್ಲಿ ಕರೆತರಲಾಯಿತು.

ಈರಣ್ಣ ಪಾಳೇದ ಉಸ್ತುವಾರಿಯಲ್ಲಿ ಕರ್ನಾಟಕ, ಆಂಧ್ರ, ಮಹಾರಾಷ್ಟ್ರ, ಗೋವಾ ರಾಜ್ಯಗಳಲ್ಲಿ 60 ದಿನಗಳ ಕಾಲ ಅಂದಾಜು ಎಂಟು ಸಾವಿರ ಕಿ.ಮೀ. ಸಂಚರಿಸಿದ ಶ್ರೀ ಸಿದ್ಧಾರೂಢ ಸ್ವಾಮಿ ಜ್ಯೋತಿ ಯಾತ್ರೆ ಕೂಡ ಮೆರವಣಿಗೆಯಲ್ಲಿತ್ತು.

ಮಾಜಿ ಶಾಸಕ ಹಾಗೂ ಕಾರ್ಯಕ್ರಮ ಸ್ವಾಗತ ಸಮಿತಿ ಗೌರವಾಧ್ಯಕ್ಷ ಡಿ.ಆರ್. ಪಾಟೀಲ, ವಿಶ್ವವೇದಾಂತ ಪರಿಷತ್ ಅಧ್ಯಕ್ಷ ಹಾಗೂ ಕಥಾಮೃತ ಮೆರವಣಿಗೆ ಕಾರ್ಯಾಧ್ಯಕ್ಷ ಶ್ಯಾಮಾನಂದ ಪೂಜೇರಿ ನೇತೃತ್ವದಲ್ಲಿ ಮೆರವಣಿಗೆ ಜರುಗಿತು. ಜಡಿಸಿದ್ಧಾಶ್ರಮದಲ್ಲಿ ಶ್ರೀ ಸಿದ್ಧಾರೂಢರ ಪ್ರತಿಮೆಗೆ ಪೂಜೆ ಸಲ್ಲಿಸಿ, ಆರತಿ ಬೆಳಗುವುದರೊಂದಿಗೆ ಐರಣಿ ಮುಪ್ಪಿನಾರ್ಯ ಹೊಳೆಮಠದ ಜಗದ್ಗುರು ಡಾ. ಬಸವರಾಜ ದೇಶಿಕೇಂದ್ರ ಮಹಾಸ್ವಾಮಿಗಳು ಉದ್ಘಾಟಿಸಿದರು.

ಇಂಚಲ ಸಾಧು ಸಂಸ್ಥಾನ ಮಠದ ಡಾ. ಶಿವಾನಂದ ಭಾರತಿ ಸ್ವಾಮೀಜಿ ಹಾಗೂ ಬೀದರ ಸಿದ್ಧಾರೂಢ ಮಠ, ಭಗೀರಥ ಪೀಠದ ಜಗದ್ಗುರು ಶ್ರೀ ಪುರುಷೋತ್ತಮಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಚಿತ್ರದುರ್ಗದ ಕಬೀರಾನಂದ ಆಶ್ರಮದ ಜಗದ್ಗುರು ಶಿವಲಿಂಗಾನಂದ ಸ್ವಾಮೀಜಿ, ಹುಕ್ಕೇರಿಯ ಗುರುಶಾಂತೇಶ್ವರ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು.

ಶಾಂತಾಶ್ರಮದ ಅಭಿನವ ಸಿದ್ಧಾರೂಢ ಸ್ವಾಮೀಜಿ, ಕಾಡರಕೊಪ್ಪ ದಯಾನಂದ ಸರಸ್ವತಿ ಸ್ವಾಮೀಜಿ, ಚಿಕ್ಕನಂದಿಯ ಸಹಜಾನಂದ ಸ್ವಾಮೀಜಿ, ಕಥಾಮೃತ ಮೆರವಣಿಗೆ ಸಮಿತಿ ಅಧ್ಯಕ್ಷ ವಿ.ವಿ. ಮಲ್ಲಾಪುರ, ಸ್ವಾಗತ ಸಮಿತಿ ಅಧ್ಯಕ್ಷ ಕೆ.ಎಲ್. ಪಾಟೀಲ, ಟ್ರಸ್ಟ್ ಚೇರ್ಮನ್ ಬಸವರಾಜ ಕಲ್ಯಾಣಶೆಟ್ಟರ್, ವೈಸ್ ಚೇರ್ಮನ್ ಮಂಜುನಾಥ ಮುನವಳ್ಳಿ, ಗೌರವ ಕಾರ್ಯದರ್ಶಿ ಸರ್ವಮಂಗಳಾ ಪಾಠಕ, ಧರ್ಮದರ್ಶಿಗಳಾದ ಬಾಳು ಮಗಜಿಕೊಂಡಿ, ಡಾ.ಗೋವಿಂದ ಮಣ್ಣೂರ, ಉದಯಕುಮಾರ ನಾಯ್ಕ, ಅಂದಾನೆಪ್ಪ ಚಾಕಲಬ್ಬಿ, ವಿನಾಯಕ ಘೋಡಕೆ, ಚನ್ನವೀರ ಮುಂಗುರವಾಡಿ, ವಿ.ಡಿ. ಕಾಮರೆಡ್ಡಿ, ರಮೇಶ ಬೆಳಗಾವಿ, ಸಿದ್ದನಗೌಡ ಪಾಟೀಲ, ವಸಂತ ಸಾಲಗಟ್ಟಿ, ಬಿ.ಆರ್. ಬಾಗೇವಾಡಿ, ಗೀತಾ ಕಲಬುರ್ಗಿ, ವ್ಯವಸ್ಥಾಪಕ ಈರಣ್ಣ ತುಪ್ಪದ, ರಂಗಾ ಬದ್ದಿ, ಶಾಂತರಾಜ ಪೋಳ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net