

ತಿ.ನರಸೀಪುರ: ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಂಗಳವಾರ ಕುಂಭಮೇಳದಲ್ಲಿ ಭಾಗವಹಿಸುವ ವಿವಿಧ ಮಠಗಳ ಪರಮ ಪೂಜ್ಯ ಶ್ರೀಗಳನ್ನು ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡಲಾಯಿತು.
ಹೂವಿನಿಂದ ಅಲಂಕರಿಸಿದ್ದ ರಥದಲ್ಲಿ ವಿರಾಜಮಾನರಾಗಿದ್ದ ಮಠಾಧಿಪತಿಗಳ ಮೆರವಣಿಗೆ ಶ್ರೀ ಗುಂಜಾ ನರಸಿಂಹಸ್ವಾಮಿ ದೇವಾಲಯದ ಮುಂಭಾಗದಿಂದ ಆರಂಭಗೊಂಡಿತು. ಪಟ್ಟಣದ ವಿಶ್ವಕರ್ಮ ಬೀದಿ ಸೇರಿದಂತೆ ಚಿತ್ರಮಂದಿರ ವೃತ್ತ, ಲಿಂಕ್ ರಸ್ತೆ, ಬಸ್ ನಿಲ್ದಾಣ ವೃತ್ತ ಹಾಗೂ ಹೊಸ ತಿರುಮಕೂಡಲು ರಸ್ತೆಯ ಮಾರ್ಗವಾಗಿ ತ್ರಿವೇಣಿ ಸಂಗಮ ತಲುಪಿತು.
ಮಂಗಳವಾದ್ಯ, ವೀರಗಾಸೆ, ವಚನಾ ತಂಡಗಳು, ಕೊಂಬು ಕಹಳೆ, ಕಳಸ ಹೊತ್ತ ಸುಮಂಗಲಿಯರು, ಕಂಸಾಳೆ ಪೂಜೆ ಕುಣಿತ, ಗಾರುಡಿ ಕುಣಿತ, ಕೋಲಾಟ, ವೀರ ಮಕ್ಕಳ ಕುಣಿತ, ಕೀಲು ಕುದುರೆ, ಪಟ ಕುಣಿತ ತಮಟೆ, ಬ್ಯಾಂಡ್ ಸೆಟ್ ದೇವಾಳ ಮತ್ತು ಸ್ತಬ್ಧ ಚಿತ್ರಗಳು ಮೆರವಣಿಗೆಗೆ ಮೆರುಗು ತಂದವು. ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆ ನೆರೆದಿದ್ದ ಭಕ್ತರನ್ನು ಸೆಳೆಯಿತು.